ವಚನಗಳಲ್ಲಿ ಆರೋಗ್ಯದ ಪರಿಕಲ್ಪನೆ ದಯಾನಂದ ನೂಲಿ ಅವರ ಕೃತಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯದ ವ್ಯಾಖ್ಯಾನವನ್ನು ಆಧಾರವಾಗಿಟ್ಟು ಕೊಂಡು ವಚನಗಳನ್ನು ವರ್ಗಿಕರಿಸಿ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಚನಗಳನ್ನು ಸಂದರ್ಭೋಚಿತವಾಗಿ ಉಲ್ಲೇಖಿಸಿ, ವಿಶ್ಲೇಷಿಸಿ, ಅವುಗಳ ಅರ್ಥವನ್ನು ಸಮಕಾಲೀನ ಸಮಾಜಕ್ಕೆ ಅನ್ವಯಿಸುವಂತೆ ವಿವರಿಸಲಾಗಿದೆ. ದೈಹಿಕ ಆರೋಗ್ಯದ ಬಗೆಗೆ ಹನ್ನೆರಡನೆಯ ಶತಮಾನದ ಶರಣರ ಜ್ಞಾನ ಸಂಪತ್ತು ಬೆರಗುಗೊಳಿಸುವಂಥದು. ಶರೀರದ ರಚನೆ, ಅಂಗಾಂಗಗಳ ಕಾರ್ಯ, ಗರ್ಭಧಾರಣೆ, ಗರ್ಭಾಶಯದಲ್ಲಿ ಹಂತ ಹಂತವಾಗಿ ಬೆಳೆಯುವ ಮಗುವಿನಲ್ಲಿ ಆಗುವ ಬದಲಾವಣೆಗಳು, ಗರ್ಭಿಣಿಯಲ್ಲಿ ಕಂಡು ಬರುವ ಲಕ್ಷಣಗಳು, ಇವೆಲ್ಲವುಗಳ ವಿವರಣೆಯನ್ನು ಅನುಭವ ಮಂಟಪದ ಅನುಭಾವಿಗಳು ಕ್ರೋಢೀಕರಿಸಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಹಿತ ಮಿತವಾದ ಆಹಾರ ಸೇವನೆಯ ಮಹತ್ವ, ತಂಬಾಕು ಮತ್ತು ಇನ್ನಿತರ ವ್ಯಸನಗಳಿಂದಾಗುವ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಬಿಂಬಿಸಲಾಗಿದೆ. ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ, ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯಾ ತಂದೆ' ಈ ವಚನ ಮಹಾತ್ಮಾ ಗಾಂಧೀಜಿಯವರ 'ತೀನ ಬಂದರ್' ನೆನಪಿಗೆ ತರುತ್ತದೆ. ಪಂಚೇಂದ್ರಿಯಗಳು, ಪಟ್ಟಲಗಳು, ಸಪ್ತ ವ್ಯಸನಗಳು, ಅಷ್ಟ ಮದಗಳ ಪರಿಕಲ್ಪನೆಯ ವಿಸ್ತಾರ ನಮ್ಮನ್ನು ಚಕಿತಗೊಳಿಸುತ್ತದೆ.
©2024 Book Brahma Private Limited.