ಲೇಖಕ ಕುಪೇಂದ್ರ ಪಾಟೀಲರ ಕೃತಿ-ಅಪ್ಪನು ನಮ್ಮ ಮಾದಾರ ಚೆನ್ನಯ್ಯ. ಶರಣ ಮಾದಾರ ಚೆನ್ನಯ್ಯನವರು ಬಸವಣ್ಣನವರಿಗೆ ಹಿರಿಯ ಸಮಕಾಲೀನರು. ಆಗಿನ ಕಾಲದಲ್ಲಿ ಅಸ್ಪೃಶ್ಯರಿಗೆ ಅಭಿವ್ಯಕ್ತಿಯ ಧ್ವನಿ ಇರಲಿಲ್ಲ.ಅದರಲ್ಲೂ ಸಮಾನತೆಯ ಬಗ್ಗೆ ಸ್ಥಾಪಿತ ಸಂಪ್ರದಾಯದ ವಿರುದ್ಧ ಮಾತನಾಡುವುದೆಂದರೆ ಧರ್ಮ ದ್ರೋಹದ ಕಾರ್ಯ. ಅಣ್ಣ ಬಸವಣ್ಣನವರು ಸರ್ವರು ಸಮಾನರು, ಯಾರೂ ಹುಟ್ಟಿನಿಂದ ಮೇಲು-ಕೀಳು ಇಲ್ಲವೆಂದು ಎಂದು ಘೋಷಿಸಿದಾಗ ಮತ್ತು ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಾಗ ಮಾತ್ರ ಸಾಧ್ಯವಾಯಿತು.ಭಾರತದ ಭೌತಿಕವಾದಿ ಪರಂಪರೆಯ ಅನುಯಾಯಿ ಎಂಬುದು ಅವರ ಅಂಕಿತದ ಮುಖಾಂತರವೇ ಗುರುತಿಸಬಹುದಾಗಿದೆ. ಕೈಯುಳಿ, ಕತ್ತಿ, ಅಡಿ ಗುಂಟಗಳಲ್ಲಿ ಕೈ ಮಾನವ ಶ್ರಮದ ಸಂಕೇತವಾಗಿ ಉಳಿ, ಕತ್ತಿ,ಅಡಿಗೂಟ ಗಳು ಉಪಕರಣಗಳಾಗಿವೆ. ಮಾನವಶ್ರಮ ಮತ್ತು ಉಪಕರಣಗಳು ಸೇರಿ ಒಂದು ಹೊಸ ವಸ್ತುವಿನ ಉತ್ಪಾದನೆ ಆಗುತ್ತದೆ. ಈ ಉತ್ಪಾದನೆಯು ಬಾಹ್ಯ ಬದುಕಿಗಾಗಿ ಬಳಸಬೇಕೇ ಹೊರತು ಆಂತರಿಕ ವಿಕಾಸಕ್ಕಲ್ಲ. ಲೌಕಿಕ ಶ್ರಮದಿಂದಲೇ ಇದು ಸಾಧ್ಯವಾಗುತ್ತದಾದರೂ ಅದೇ ಅಂತಿಮವಲ್ಲ ಎಂಬ ನಿಲುವನ್ನು ಚೆನ್ನಯ್ಯನವರ ಅಂಕಿತವು ಸೂಚಿಸುತ್ತದೆ. ವಸ್ತುವಿನಿಂದಲೇ ಚೈತನ್ಯದ ಹುಟ್ಟು ಎಂಬುದನ್ನು ಸಂಕೇತಾರ್ಥದಲ್ಲಿ ಅವರ ಅಂಕಿತವು ತಿಳಿಸುತ್ತದೆ.
.ಇಷ್ಟೆಲ್ಲಾ ಶ್ರೀಮಂತ ಪರಂಪರೆ ಇದ್ದರೂ ಇಂದು ಅಸ್ಪೃಶ್ಯರಾಗೇ ಮೂಲೆ ಸೇರಿದ್ದಾರೆ. ದೇಶದ ಕೃಷಿಗೆ, ಕೃಷಿಯೇತರ ಉತ್ಪನ್ನಗಳಿಗೆ ಬೆನ್ನೆಲುಬಾಗಿರುವ ತಮ್ಮ ತತ್ವಜ್ಞಾನವನ್ನು ಅವರಿಂದು ಅರ್ಥಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಲೇಖಕರು ತಮ್ಮ ಈ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಪರಂಪರೆಯ ವಿಸ್ಮೃತಿಯಲ್ಲಿ ಕಳೆದುಹೋದ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗಳಿಸಿ ಕೊಳ್ಳುವುದರ ಮುಖಾಂತರ ಎಚ್ಚೆತ್ತುಕೊಳ್ಳಲು ಈ ಗ್ರಂಥವು ನೆರವಾಗುತ್ತದೆ. ಮಾದರ ಚೆನ್ನಯ್ಯನ ಜನನ, ಬಾಲ್ಯ,ವೃತ್ತಿ,ಸಾಮಾಜಿಕ ಸಂಬಂಧಗಳು, ಕಂಚಿಯಲ್ಲಿ ಶಿವನಿಗೆ ಪ್ರಸಾದ ನೀಡಿದ ಅನುಭಾವಿಕ ಎತ್ತರ, ಅಂಗಗುಣದಿಂದ ಲಿಂಗ ಗುಣಗಳಿಗೆ ಏರಿದ ಔನ್ನತ್ಯ ಕಂಚಿಯಿಂದ ಕಲ್ಯಾಣಕ್ಕೆ ಬಂದದ್ದು, ಕಲ್ಯಾಣದ ಅಮರಗಣಗಳಲ್ಲಿ ಒಂದಾಗಿ ಕ್ರಾಂತಿಯ ಪೋಷಕರಾದ ದ್ದು, ಕ್ರಾಂತಿಯಲ್ಲಿ ಬೆಂದು ಕುರುಬನಕಟ್ಟೆಯವರೆಗೆ ಚಲಿಸಿದ ಜೀವನದ ಪಯಣವನ್ನು ವಚನಗಳ ಆಧಾರದಿಂದಲೇ ಕಟ್ಟಿಕೊಟ್ಟಿರುವುದು ಈ ಕೃತಿಯ ವಿಶೇಷವಾಗಿದೆ.
ಕಲ್ಪನೆಯ ಕಥೆಗಳಿಗಿಂತ ವಚನಗಳನ್ನೇ ಆಂತರಿಕ ಪ್ರಮಾಣಗಳನ್ನಾಗಿ ಸ್ವೀಕರಿಸುವುದು ಇಂದಿನ ವಿದ್ವಾಂಸರು ಅಳವಡಿಸಿಕೊಳ್ಳಬೇಕಾದ ಮಾರ್ಗವೇ ಆಗಿದೆ. ಚೆನ್ನಯ್ಯನವರ ಜೀವನ ಸಾಧನೆಯನ್ನು ಅವರು ವಿಶ್ಲೇಷಿಸಿದ ರೀತಿಯು ಅವರು ಸಾಹಿತ್ಯದ ಉತ್ತಮ ಬರಹಗಾರರು ಎಂಬುದನ್ನು ಸಾಬೀತುಪಡಿಸಿದೆ.
©2024 Book Brahma Private Limited.