ಅಜ್ಜ ಹೇಳಿದ ಕಲ್ಯಾಣಕ್ರಾಂತಿಯ ಕಥೆ-ಲೇಖಕ ಪ್ರಭುಲಿಂಗ ನೀಲೂರೆ ಅವರು ಮಕ್ಕಳಿಗಾಗಿ ಬರೆದ ಕಥೆಗಳ ಸಂಕಲನ. 12ನೇ ಶತಮಾನದಲ್ಲಿ ಸಮಾನತೆಗಾಗಿ ನಡೆದ ಕಲ್ಯಾಣಕ್ರಾಂತಿ ಕಥೆಯನ್ನು ಮಕ್ಕಳಿಗೆ ಹೇಳುವುದು ಕಷ್ಟಕರ ಕೆಲಸವಾದರೂ ವಚನ ಸಾಹಿತ್ಯ ಎಂದರೆ ಏನು, ಅದು ಹೇಗೆ ರೂಪುಗೊಂಡಿತು, ವಚನ ರಚನೆ ಹೇಗಿತ್ತು, ಅನುಭವ ಮಂಟಪದಲ್ಲಿ ಹೇಗೆ ಚರ್ಚೆಗಳು ನಡೆಯುತ್ತಿದ್ದವು ಎನ್ನುವುದನ್ನು ಪ್ರಶ್ನೆ- ಉತ್ತರಗಳ ಮೂಲಕ ಮನಕ್ಕೆ ತಲುಪುವಂತೆ ವಿವರಿಸಲಾಗಿದೆ. ಮಕ್ಕಳು ಪ್ರಶ್ನೆ ಕೇಳುತ್ತಾರೆ, ಅಜ್ಜ ಅವರಿಗೆ ಉತ್ತರ ನೀಡುತ್ತಿದ್ದಾನೆ ಎಂದೆನಿಸಿದೇ, ಶರಣ ಹರಳಯ್ಯನಿಂದ ಕಥೆ ಆರಂಭವಾಗುತ್ತದೆ. ಇಡೀ ಕಲ್ಯಾಣಕ್ರಾಂತಿಯ ನಿಟ್ಟುಸಿರಿನೊಂದಿಗೆ ಮುಗಿದಾಗಲೇ ಓಹೋ ಕಥೆ ಮುಗಿಯಿತು ಅನಿಸುತ್ತದೆ. ನಡುವೆ ಪ್ರಶ್ನೆ ಕೇಳಿದ್ದಾಗಲಿ, ಈತ ಉತ್ತರ ಹೇಳುತ್ತಿದ್ದಾನೆ ಎಂಬುದಾಗಲಿ ಗಮನಕ್ಕೆ ಬಾರದು. ಕಣ್ಣ ಮುಂದೆಯೇ ಶರಣರ ವ್ಯಕ್ತಿತ್ವಗಳು ಬಿಚ್ಚಿಕೊಂಡು ಸಮಷ್ಟಿ ಸಮಾನತೆ- ಮಾನವೀಯ ಪ್ರಜ್ಞೆಗಳನ್ನು ಬಿಂಬಿಸುತ್ತವೆ. 12ನೇ ಶತಮಾನದಲ್ಲಿ ಕೇಳುಗರನ್ನು ಸುತ್ತಾಡಿಸಿ ತಂದು ಹೊಸ ಮಾನವೀಯ ಆಲೋಚನೆಯನ್ನು ಮಕ್ಕಳಲ್ಲಿ ತುಂಬಿ ಕಥೆ ಮುಗಿಸುವುದು ವಿಶಿಷ್ಟ ಪ್ರಯೋಗ. ಈ ಕೃತಿಗೆ 2010ನೇ ಸಾಲಿನ ಕರ್ನಾಟಕ ಸರಕಾರ ಬಾಲವಿಕಾಸ ಅಕಾಡೆಮಿಯ ‘ಮಕ್ಕಳ ಚಂದಿರ’ ಪುಸ್ತಕ ಬಹುಮಾನ ಲಭಿಸಿದೆ.
©2024 Book Brahma Private Limited.