'ಬಿಂಬ - ಅರಿಬೊಮ್ಮನ ಸ್ವಗತ', ಸರಳ ರೂಪದ ವಚನಗಳ ಸಂಗ್ರಹ. ಅರಿಬೊಮ್ಮನ ವಿಶೇಷತೆ ಏನೆಂದರೆ, ಅರಿ: (1) ತೆನೆ ಗೂಡಿಸಿದ ರಾಶಿ, (2) ಧಾನ್ಯಗಳನ್ನು ನೀರಿನಲ್ಲಿ ಜಾಲಿಸಿ, ಶೋಧಿಸಿ ತೆಗೆಯುವುದು: ಅರ್ಥಾತ್, ಜೀವನ ಸತ್ವಗಳನ್ನು ಶೋಧಿಸಿ, ತೆನೆಗೂಡಿಸಿ ವಚನ ರೂಪದಲ್ಲಿ ’ರಾಶಿ’ ಮಾಡುವುದರ ರೂಪಕ. 'ಬೊಮ್ಮ': ಬ್ರಹ್ಮ – ಸೃಷ್ಟಿಕರ್ತ, ಅರಿತವ, ಅರ್ಥಾತ್, ಜೀವನ ಸಾರವನ್ನು ತಾ ಅರಿತಂತೆ ಸಾರುವುದರ ಸಂಕೇತ. ಹಾಗಾಗಿ 'ಅರಿಬೊಮ್ಮ' - ಕಾವ್ಯನಾಮ ಬಳಸಿದ್ದಾರೆ. ಬಿಂಬವು ನಾವು ನಮ್ಮನ್ನು ಕಂಡಂತೆ ಕಾಣುವ ಮಾಯೆ. ಹಾಗಾಗಿ ಲೇಖಕರು ತಾವು ತಮ್ಮನ್ನು ಈ ಸಮಾಜದಲ್ಲಿ ಕಂಡಂತೆ, ಆಗುಹೋಗುಗಳನ್ನು ಅರಿತಂತೆ ಈ ವಚನಗಳನ್ನು ರಚಿಸಿದ್ದಾರೆ. ಇವು ಛಂದಸ್ಸಿನ ಚೌಕಟ್ಟಿಲ್ಲದೇ, ಗಣ, ಮಾತ್ರೆ ಮತ್ತು ಅಕ್ಷರಗಳ ಏಕರೂಪತೆ ಇಲ್ಲದಂತಹ, ಸರಳವಾಗಿ ನಿರೂಪಣೆ ಮಾಡಿರುವಂತಹವು. ಹಾಗಾಗಿ ಭಾಷೆ ಕೂಡ ಕ್ಲಿಷ್ಟವಾಗಿಲ್ಲ. ಆದರೆ ಭಾವ ತುಂಬಿದ್ದಾರೆ ಒಟ್ಟು 8 ಅಧ್ಯಾಯಗಳಲ್ಲಿನ ಒಟ್ಟು ವಚನಗಳ ಸಂಖ್ಯೆ 365. ವರ್ಷದಲ್ಲಿ ದಿನಕ್ಕೊಂದು ವಚನದಂತೆ ವಾಚಿಸಬಹುದು ಮತ್ತು ಹಂಚಿಕೊಳ್ಳಬಹುದು ಎನ್ನುವುದೇ ಈ ಸಂಖ್ಯೆಯ ಹಿಂದಿನ ಉದ್ದೇಶ. ಪ್ರತಿ ಅಧ್ಯಾಯದಲ್ಲಿರುವ ವಚನಗಳು ಆಯಾ ಅಧ್ಯಾಯದ ಶೀರ್ಷಿಕೆಗೆ ಅನುಗುಣವಾಗಿ ವರ್ಗೀಕರಿಸಲ್ಪಟ್ಟಿವೆ. ಸರಳವಾಗಿ ಓದಿಸಿಕೊಳ್ಳುವ ಈ ವಚನಗಳ ಸಂಗ್ರಹ ಓದುಗರಿಗೆ ಜೀವಾನಾಮೃತವ ನೀಡುವ ನಿರೀಕ್ಷೆ ನಮ್ಮದು.
ಶಿಲೆಯು ದೇವಮೂರ್ತಿಯಾದುದು ಹೇಗೆ, ಸಾವಿರ ಉಳಿಪಟ್ಟಿನಲಿ, ಶಿಲ್ಪಿಯ ಕಲ್ಪನೆಯಲಿ, ದೊರಗ ತೆಗೆದು, ವಜ್ರಪಟ್ಟಿಯಲಿ ಒತ್ತಿ ಉಜ್ಜಿ, ತಿದ್ದಿ ತೀಡಿದಂತೆ ನೋವ ನುಂಗಿ ಮೂರ್ತಿಯಾಯಿತು ಶಿಲೆಯು -ಅರಿಬೊಮ್ಮ ಹಣ್ಣು ತುಂಬಿದ ಮರಕ್ಕೇ ಕಲ್ಲೇಟು, ಓಡುವ ಕುದುರೆಗೇ ಮತ್ತೆ ಚಾಟಿಯೇಟು, ಕೆಲಸಗಾರನಿಗೇ ಹೆಚ್ಚು ಕೆಲಸದ ಹೊರೆ, ನೋವು ಕೊಡುವ ವಿಮರ್ಶೆ ಸಾಧನೆಗೆ ಒರೆಯು- ಅರಿಬೊಮ್ಮ ಕೋಪದಲಿ ಎನಿತು ಕಾರ್ಯವೆಸಗದಿರು, ಅತಿ ಸಂತೋಷದಲಿ ವರವ ನೀಡದಿರು, ನಿರ್ಭಾವದಲಿ ಪ್ರೀತಿ ಪ್ರೇಮವ ಮಾಡದಿರು, ಸ್ಥಿತಿಯನರಿತು ಉಚಿತ ಕಾರ್ಯ ಕೈಗೊಳ್ಳೋ – ಅರಿಬೊಮ್ಮ ಗಂಡ ಹೆಂಡಿರ ಜಗಳಕೆ ಗ್ರಹಗತಿಯ ದೂರುವರು, ಮಕ್ಕಳು ಜಾರಿದಲ್ಲಿ, ಶನಿಯ ದೂರುತ ತಮ್ಮ ತಪ್ಪ ಮುಚ್ಚಿ, ಕಾಣದ ಗ್ರಹಕ್ಕೆ ಕಳಂಕ ಹಚ್ಚುತ ದರಿದ್ರವೆನ್ನುವರು – ಅರಿಬೊಮ್ಮ ಪವಿತ್ರ ಸ್ನಾನದಿ ನದಿಗಳ ಮಲಿನಗೊಳಿಸಿ, ಪ್ರಾಣಗಂಗೆಯ ಮೂಲಕಾಡ ಬೆತ್ತಲೆಗೊಳಿಸಿ, ಮೋಕ್ಷಕೆಂದು ಶವವ ನದಿಯಲಿ ತೇಲಿಬಿಟ್ಟು, ಮುಕ್ತಿಗಾಗಿ ಸಿಕ್ಕ ಜನುಮವ ನರಕ ಮಾಡಿದರಲ್ಲೋ – ಅರಿಬೊಮ್ಮ ಇಂದಿಲ್ಲಿ, ನಾಳೆ ಎಲ್ಲೆಂಬುದರರಿವಿಲ್ಲ, ಜೀವದ ಪಯಣದ ನಾವಿಕನಾರೋ, ಜನನದಿ ಮರಣ ಬರೆದಿಹುದು ನಿಶ್ಚಿತ, ಸಂತಸದಿ ಜೊತೆಗಾರರ ಸೇವಿಸುತ ಇಲ್ಲವಾಗುವುದುಚಿತ – ಅರಿಬೊಮ್ಮ ದೇಗುಲದಲಿ ತನ್ನ ಏಳ್ಗೆಗೆ ಬೇಡುತ, ಬೆನ್ನು ಬಗ್ಗಿಸಿ ಮಂಡಿಯೂರುತಾ, ತನಗೆ ಒಳಿತು ಮಾಡೆಂದು ದೇವನನು ಬೇಡಿದರೆ, ‘ಕೆಳಗೆ ಬಿದ್ದವರನ್ನು ನೀನೆತ್ತಿ ತಬ್ಬಿಕೋ’ ಎಂದ – ಅರಿಬೊಮ್ಮ ದೇವನ ಅಸ್ತಿತ್ವವ ನಂಬುವವರು ಆಸ್ತಿಕರು, ದೇವನೆಂಬುವನಿಲ್ಲ ಎಂಬವರು ನಾಸ್ತಿಕರು, ಅವನು ಇಲ್ಲ-ಇದ್ದಾನೆನ್ನುವ ಇಬ್ಬಂದಿಗಳು, ತಮ್ಮ ಕಾರ್ಯದಲಿ ದೇವನ ಕಾಣುವರು ದೈವ ಸ್ವರೂಪಿಗಳು -ಅರಿಬೊಮ್ಮ
ಈ ಕೃತಿಯ ಲೇಖಕರಾದ ಡಾ. ಎಸ್.ಎನ್ .ಶ್ರೀಧರ ರವರಿಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಬಾಲ್ಯದಿಂದಲೇ ವಚನ ಸಾಹಿತ್ಯಗಳನ್ನು ಹಾಗೂ ಇತರ ಸಾಹಿತ್ಯಗಳನ್ನು ಓದುತ್ತಾ, ಆ ವಯಸ್ಸಿಗನುಗುಣವಾಗಿ ಅವುಗಳನ್ನು ಅರ್ಥೈಸಿಕೊಳ್ಳುತ್ತಾ, ಆನಂದಿಸುತ್ತಾ ಬಂದಿದ್ದು ಮುಂದೆ ತಾವೇ ಬರೆದ ವಚನಗಳನ್ನು ತಮ್ಮ ಶಾಲಾ, ಕಾಲೇಜುಗಳ ಸಂಚಿಕೆಗಳಲ್ಲಿ ಪ್ರಕಟಿಸುತ್ತಾ ಬಂದವರು. ಮುಂದೆ ಶಿವಶರಣರ ವಚನಗಳನ್ನು, ಸರ್ವಜ್ಞನ ತ್ರಿಪದಿಗಳನ್ನು, ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಮುಕ್ತಕ.. ಗಳಂತಹ ಸಾಕಷ್ಟು ಸಾಹಿತ್ಯವನ್ನು ಶ್ರದ್ದೆ ಮತ್ತು ಆಸಕ್ತಿಯಿಂದ ಓದುತ್ತಾ ಅವುಗಳಲ್ಲಡಗಿರುವ ನೀತಿ, ಸಾಮಾಜಿಕ ಕಳಕಳಿ, ಜೀವನ ಸಾರ.. ಹಿಂಗಳಿಂದ ಪ್ರಭಾವಿತರಾದರಲ್ಲದೆ, ತಾವೇ ಕಂಡಂತೆ ಈ ವಚನಗಳಲ್ಲಿ ಕಠಿಣ ಪದಗಳು ಇಲ್ಲದಿರುವಿಕೆ, ಛಂದಸ್ಸಿನ ಹಂಗಿಲ್ಲದೆ, ನೇರ ಹಾಗೂ ಸರಳ ನುಡಿಗಳಿಂದ ಕೂಡಿದ ಸಾಲುಗಳನ್ನು ಕಂಡು ಪ್ರಭಾವಿತರಾದರು. ಅಲ್ಲದೆ ಹೇಳಬೇಕಾದ ನೀತಿಯನ್ನು ಬಹಳ ಸರಳವಾಗಿ ತಿಳಿಸಿರುವ ಪರಿ ಲೇಖಕರ ಹೃದಯವನ್ನು ಮುಟ್ಟಿತೋ ಎನ್ನುವಂತೆ, ಕಳೆದ ಐದು ವರ್ಷಗಳಿಂದ 'ಅರಿಬೊಮ್ಮನ ಕನವರಿಕೆಗಳು'ಎಂಬ ಹೆಸರಿನಲ್ಲಿ, ಬರೆದಿಟ್ಟ ನೂರಾರು ವಚನಗಳನ್ನು ಮನೆಯವರಿಗೆ, ಸ್ನೇಹಿತರಿಗೆ, ಹಿತೈಷಿ ಗಳಿಗೆ ತೋರಿಸುತ್ತಾ, ಅವರು ಕೊಟ್ಟ ಪ್ರೋತ್ಸಾಹದಿಂದ ಉತ್ತೇಜನ ಪಡೆದು ಇದೀಗ 365 ವಚನಗಳಿರುವ "ಬಿಂಬ- ಅರಿಬೊಮ್ಮನ ಸ್ವಗತ"ಎಂಬ ಶೀರ್ಷಿಕೆಯಲ್ಲಿ ಈ ಕೃತಿಯನ್ನು ಪ್ರಕಟಿಸಿದ್ದಾರೆ.
ಧನಾತ್ಮಕ ಚಿಂತನೆ, ಸ್ವ ಪ್ರಯತ್ನ ಮತ್ತು ನಿರಂತರ ಪ್ರಯತ್ನ... ಎಂಬ ಮೊದಲ ಅಧ್ಯಾಯದಲ್ಲಿ ಒಟ್ಟು 73 ವಚನಗಳಿದ್ದು,
ಸೃಷ್ಟಿಕರ್ತನು ಭಗವಂತನು,
ಸ್ತುತಿಯ ಹಂಗಿಲ್ಲದಾತನು,
ಬರಿಯ ಪ್ರಾರ್ಥನೆಯಲಿ ಕಾಲ
ಕಳೆಯದಿರು, ಕರ್ಮದಲ್ಲವನ ಕಾಣು--ಅರಿಬೊಮ್ಮ
ಎಂಬ ಮೊದಲನೆಯ ವಚನದ ಮೂಲಕ ಕಾಯಕವೇ ಕೈಲಾಸ, ಕಾಯಕದ ಮೂಲಕ ದೈವ ಸ್ತುತಿ ಮಾಡಿರಿ ಎನ್ನುವುದನ್ನು ಹೇಳಿದರೆ,
ದೇವರು ನೀಡಿರುವ ಈ ಶರೀರವೇ ಒಂದು ಅಷ್ಟೈಶ್ವರ್ಯ ವಿದ್ದಂತೆ. ಅದರ ಸರಿ ಬಳಕೆ ಯಿಂದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಹೇಳುವ,
ಕಾಣಲು ಕಣ್ಣಿದೆ, ತಿನ್ನಲು ಬಾಯಿದೆ,
ನಡುವೆನೆಂದರೆ ಕಾಲು ಇದೆ, ಶಿರದಲಿ
ಬುದ್ಧಿ ಇದೆ, ದುಡಿದುಣ್ಣಲು ಕಸುವಿದೆ,
ದೇಹಾರೋಗ್ಯವಿದೆ ,ನೀನೆಂತ ಬಡವನಯ್ಯಾ-- ಅರಿಬೊಮ್ಮ
ಎಂಬ ಎರಡನೆಯ ವಚನದ ಮೂಲಕ ಲೇಖಕರು ಬುದ್ಧಿವಾದ ಹೇಳುತ್ತಾರೆ. ಆಲಸ್ಯ, ಅಪ್ರಮಾಣಿಕತೆ, ಹಗೆತನ.. ಗಳನ್ನು ನಿನ್ನ ಬಳಿ ಸೇರಿಸಬೇಡ ಎನ್ನುವ,
ಅಲಸಿತನವದು ಜೀವನಕೆ ಮೌನವಿಷವು,
ಅಪ್ರಮಾಣಿಕತೆ ಎಂಬುದು ಘೋರ ವಿಷವು,
ಹಗೆತನವು ನಿನ್ನಾಹುತಿ ಪಡೆವ ಕಠೋರ ವಿಷವು,
ವಿಷಯಂಗಳಲಿ ಮುಳುಗಿ ಕಲುಷಿತಗೊಳ್ಳಬೇಡವೋ... ಅರಿಬೊಮ್ಮ
ಎಂಬ ಆರನೆಯ ವಚನವು ನಮ್ಮನ್ನು ಎಚ್ಚರಿಸುತ್ತದೆ. An Idle mind is devils workshop ಹಾಗೂ ಅತಿಯಾದ rest ಎಂಬುದು rust ಗೆ ದಾರಿಯಾಗುವುದು ಎಂದು ತಿಳಿಸುವ,
ಕಬ್ಬಿಣಕ್ಕೆ ಅಳಿವು ಹಾಗೇ ಬಂದೀತೆ,
ತನ್ನ ತುಕ್ಕು ತನ್ನನ್ನೇ ಕೊಲ್ಲುವುದು,
ಆಲಸಿ ತನದಲಿ ಜಡ್ಡು ಹಿಡಿಯದಿರಿ, ಅಲಗಿನಂತೆ ಅನುದಿನ ಸಾಣೆ ಹಿಡಿದು ಮಿಂಚಿರಿ--ಅರಿಬೊಮ್ಮ
ಎಂಬ 21ನೇ ವಚನ (1:21) ತಿಳಿಸುತ್ತದೆ.
ಮೂಡನಂಬಿಕೆಯ ತೊರೆಯೆ... ಎಂಬ ಎರಡನೆಯ ಅಧ್ಯಾಯದಲ್ಲಿ 47 ವಚನಗಳಿದ್ದು,
ಹಣೆಬರಹವ ಬರೆಯಲದು ಫಲಕವೇ,
ಅಂಗೈ ರೇಖೆಗಳು ನಿನ್ನಾಳುವವೇನು,
ದೂರದ ಗ್ರಹಗಳೇನ ಮಾಡಬಲ್ಲವು,
ಪ್ರಯತ್ನವಲ್ಲದೇ ಜೊಳ್ಳು ಹೇಳಿಕೆಯ ನೆಚ್ಚಬೇಡ--ಅರಿಬೊಮ್ಮ
ಎಂದು ಹೇಳುವುದನ್ನು ಓದಿದಾಗ ಮೊದಲು ಪುರುಷ ಪ್ರಯತ್ನ ಮಾಡಬೇಕು, ನಂತರ ಅದಕ್ಕೆ ದೈವ ಸಹಾಯ ಸಿಗುತ್ತದೆ ಎಂಬ ಮಾತು ಜ್ಞಾಪಕ ಬಂದಿತು.
ಕಲಿತವರಾದರು ನಡೆಗೂ ನುಡಿಗೂ ಸಂಬಂಧವಿಲ್ಲದವರಂತೆ ಇರುವ ಮತ್ತು ಮೂಢನಂಬಿಕೆಗಳನ್ನು ಬಲವಾಗಿ ನಂಬುವ ವಿದ್ಯಾವಂತರನ್ನು ಕಂಡಾಗ, ಲೇಖಕರು,
ಭೌತ ವಿಜ್ಞಾನ ಪಾಠ ಮಾಡುವ ವಿಜ್ಞಾನಿ ತಾ,
ಗ್ರಹಣದ ಕೆಡುಕಿಗೆ ಬೆದರಿ, ನೀರಲಿ ಮಿಂದನು,
ಬೋಧಿಸುವಿದೊಂದು, ಅನುಸರಿಸುವುದೊಂದು
ಅನ್ಯರಿಗೆ ಪಾಠವ ಪೇಳುತ, ಕಂದಾಚಾರಕೆ ಮಣಿವನೋ -- ಅರಿಬೊಮ್ಮ
ಎಂದು ಹೇಳಿರುವುದು ಸರಿಯಾಗಿಯೇ ಇದೆ ಎನಿಸಿತು.
ಮುಂದೆ ವಿದ್ಯೆ, ವಿನಯ... ಎಂಬ ಮೂರನೆಯ ಅಧ್ಯಾಯದಲ್ಲಿ 45 ಅರ್ಥಪೂರ್ಣ ವಚನಗಳಿದ್ದು,
ವಿನಯವಿಲ್ಲದ ವಿದ್ಯೆ ,ಬದುಕು ಕಲಿಸದಾ ಶಾಲೆ ,
ತಂದೆ ತಾಯಿಯರ ಧಿಕ್ಕರಿಸುವ ರಕ್ಕಸ ಮಗ,
ಕೆಡುಕು ತುಂಬುವ ಜನರಿಂ ಹೊಳೆವ ಸಮಾಜ,
ಕಾಲಿಲ್ಲದ ಬಡಕು ಕುದುರೆಯ ಸವಾರಿಯಂತಿಕ್ಕು...ಅರಿಬೊಮ್ಮ
ಎಂದು ಹೇಳಿರುವುದು ಅರ್ಥಪೂರ್ಣವಾಗಿದೆ.
ಹೀಗೆ ಪ್ರೀತಿ ಪ್ರೇಮ ಎಂಬ ನಾಲ್ಕನೆಯ ಅಧ್ಯಾಯದಲ್ಲಿ 40 ವಚನಗಳಿದ್ದು, ಐದನೆಯ ಅಧ್ಯಾಯವಾದ ರಾಜಕೀಯ.. ಎಂಬುದು 29 ವಚನಗಳನ್ನು ಒಳಗೊಂಡಿದೆ. ನಾಯಕತ್ವ ಎಂಬ ಆರನೆಯ ಅಧ್ಯಾಯದಲ್ಲಿ 49 ವಚನಗಳು, ದೇವರು ಪ್ರಾರ್ಥನೆ ಎಂಬ 7ನೇ ಅಧ್ಯಾಯದಲ್ಲಿ 53 ವಚನಗಳು ಮತ್ತು ಎಂಟನೇ ಅಧ್ಯಾಯವಾದ ಆರೋಗ್ಯ... ಎಂಬ ಅಧ್ಯಾಯವು 29 ಅರ್ಥಪೂರ್ಣ ವಚನಗಳನ್ನು ಹೊಂದಿವೆ.
ಮಾತು ಮುತ್ತಾಗಲಿ, ಮುಕ್ಕಾಗದೆ ಮಿತವಿರಲಿ ,
ಸಿಹಿ ಜೇನ ಸವಿ ಯಿರಲಿ, ವಜ್ರದ ಕವಚವಿರಲಿ ,
ಸೊಲ್ಲಿನಲ್ಲಿ ಘನ ತೂಕವಿರಲಿ ,ಸ್ಪಷ್ಟತೆ ಯಿರಲಿ,
ಸಂವಾಹನ ಕೌಶಲದಲ್ಲಿ ಮೇರು ಆಗಿರು ನೀ ನಾಯಕ....ಅರಿಬೊಮ್ಮ
ಎಂಬ 265ನೇ ವಚನವು ನಾಯಕತತ್ವದ ಗುಣಗಳನ್ನು ತಿಳಿಸಿದರೆ, 'ಆರೋಗ್ಯ' ಎಂಬ ಎಂಟನೇ ಅಧ್ಯಾಯದ 346ನೇ ವಚನವು,
ನೀ ಎನಿತು ಉಣ ಬೇಕೆಂಬರಿವು ನಿನಗಿರಲಿ,
ಹೊತ್ತಾರೆ ತಿಂಡಿಯು ಉದರವ ತುಂಬಲಿ,
ಅಪರಾನ್ನ ಭೋಜನವು ತುಸು ಮಿತಿಯಲ್ಲಿರಲಿ,
ಮಲಗುವ ಮುನ್ನ ಲಘುವಾಗಿ ಕಂಡು ಸಂತೃಪ್ತಿಯಲ್ಲಿರಲಿ...ಅರಿಬೊಮ್ಮ
ಎಂದು ನಮ್ಮ ಆರೋಗ್ಯದ ಗುಟ್ಟನ್ನು ತಿಳಿಸುತ್ತಾ, ಲಘ್ವಾಶಿ, ಮಿತಾಶಿ ಗಳಾಗ ಬೇಕೆಂಬುದನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ. ಹೀಗೆ ಲೇಖಕರು ತಮ್ಮ ಪರಿಸರದಲ್ಲಿ ಕಂಡ ಅನೇಕ ವಿಷಯಗಳನ್ನು ಗಮನಿಸಿ ಅವುಗಳನ್ನು ತಮ್ಮದೇ ಆದ ರೀತಿಯಲ್ಲಿ ಅತ್ಯಂತ ಸರಳವಾಗಿ ವಚನಗಳ ರೂಪದಲ್ಲಿ ಬರೆದಿದ್ದು ಇವೆಲ್ಲವೂ ನೀತಿ ಬೋಧಕವಾಗಿವೆ. ಈ ಕೃತಿಯಲ್ಲಿರುವ ವಚನಗಳನ್ನು ಓದಿಯೇ ಅರಿಯಬೇಕಿದೆ.
ವಿಮರ್ಶೆ:
ಶ್ರೀ ಡಿ. ಮಲ್ಲಾರೆಡ್ಡಿ,
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು (ನಿವೃತ್ತ)
©2024 Book Brahma Private Limited.