ಕನ್ನಡನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಹನ್ನೆರಡನೆಯ ಶತಮಾನದ ವಚನ ಚಳವಳಿ ಒಂದು ವಿಸ್ಮಯ. ಧಾರ್ಮಿಕ-ಸಾಮಾಜಿಕ ವ್ಯವಸ್ಥೆಯಿಂದಾಗಿ ಶೋಷಣೆಗೊಳಗಾದ ಕೆಳವರ್ಗದ ಜನಸಮುದಾಯಗಳೇ ತಿರಸ್ಕರಿಸಿ ಹೊಸ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದರು. ಇದು ನಿಜವಾಗಿಯೂ ವಿಸ್ಮಯಕಾರಿಯಾದ ಹಾಗೂ ಚಿರಸ್ಮರಣೀಯವಾದ ಘಟನೆ. ಅದುವರೆವಿಗೂ ಬಾಯಿ ತೆರೆಯದ ಕೆಳಸಮುದಾಯಗಳ ಜನರು ತಮಗೂ ಹೇಳುವುದಕ್ಕಿದೆ ಎಂಬಂತೆ ಒಟ್ಟಿಗೆ ಕೂಗಲು ಆರಂಭಿಸಿದರು. ಹಿಂದೆ ಧಾರ್ಮಿಕ ನಾಯಕನನ್ನು ಅನುಸರಿಸಿ ಕೆಲವು ಆಂದೋಲನಗಳು ನಡೆದಿವೆ. ಆದರೆ ವಚನ ಚಳವಳಿಯು ಕೇವಲ ಒಬ್ಬನ ಮುಂದಾಳತ್ವದಲ್ಲಿ ನಡೆಯದೆ ಸಾಮೂಹಿಕ ನಾಯಕತ್ವದಲ್ಲಿ ಜರುಗಿತು. ತಾವು ಕಟ್ಟಬಯಸಿದ ಸಮಾಜದ ಧಾರ್ಮಿಕ ಸಾಮಾಜಿಕ ಸ್ವರೂಪದ ಕುರಿತು ಹಾಗೂ ತಮ್ಮ ಮನದಾಳದಲ್ಲಿ ಇದುವರೆವಿಗೂ ಬಯ್ತಿಟ್ಟುಕೊಂಡಿದ್ದ ಎಲ್ಲ ಸ್ತರಗಳ ಆಶೋತ್ತರಗಳನ್ನು ಕೆಳವರ್ಗದ ನೂರಾರು ಜನರು ತಮ್ಮತಮ್ಮಲ್ಲಿಯೇ ಚರ್ಚಿಸಿದ್ದು ವಚನಗಳ ಮೂಲಕ, ಜನನುಡಿಯಾದ ಕನ್ನಡದ ಅಪೂರ್ವ ತೇಜಸ್ಸು ಆ ಕಾಲದ ಇನ್ನೂರಕ್ಕೂ ಹೆಚ್ಚು ಸಂಖ್ಯೆಯ ವಚನಕಾರರ ಮಾತುಗಳ ಮೂಲಕ ಎಲ್ಲೆಡೆ ಹೊಮ್ಮಿ ಪಸರಿಸಿತು.
ವಚನ ಚಳುವಳಿಯ ಮುಂಚೂಣಿಯಲ್ಲಿದ್ದ ನಾಯಕ ಬಸವಣ್ಣನ ವಚನಗಳನ್ನು ಹಿರಿಯ ವಿದ್ವಾಂಸರಾದ ಪಿ.ವಿ. ನಾರಾಯಣ ಅವರು ಆಯ್ಕೆ ಮಾಡಿ, ಟಿಪ್ಪಣಿಗಳನ್ನು ಬರೆದಿದ್ದಾರೆ. ವಚನಗಳ ಅರ್ಥೈಸಿಕೊಳ್ಳಲು ಈ ಪುಸ್ತಕ ನೆರವಾಗಲಿದೆ.
©2024 Book Brahma Private Limited.