‘ವಚನ ಸಾಹಿತ್ಯ ಭಾಷೆ’ ಕೃತಿಯು ಎಸ್.ಎಸ್. ಅಂಗಡಿ ಅವರ ವಚನ ಸಾಹಿತ್ಯ ವಿಶೇಷವಾಗಿ ಆ ಭಾಷೆಯ ವಿಶೆಷತೆಗಳ ಬರಹವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಗುರುಪಾದ ಮರಿಗುದ್ದಿ‘ ವಚನಕಾರರ ಭಾಷಾಬಳಕೆಯ ರೀತಿ, ಸಾಂಸ್ಕೃತಿಕ ಪ್ರಜ್ಞೆ ಭಾಷಾಶಾಸ್ತ್ರೀಯ ವಿಚಾರಗಳು ಈ ನಿಟ್ಟಿನಲ್ಲಿ ಅಧ್ಯಯನ ರೂಪು ತಾಳಿದೆ. ವಚನಕಾರರು ನಡೆಸಿದ ಆಂದೋಲನಕ್ಕೆ ಅವರ ಭಾಷಾಪ್ರಯೋಗ ಹೇಗೆ ಸಹಕಾರಿಯಾಯಿತು, ಕನ್ನಡ ಭಾಷೆಯ ಚಲನಶೀಲತೆಯನ್ನು ವಚನಕಾರರು ಹೇಗೆ ಪರಿಗ್ರಹಿಸಿದರು ಇಂತಹ ಹಲವು ಪ್ರಶ್ನೆಗಳನ್ನು ಎತ್ತಿಕೊಂಡು ಅಧ್ಯಯನದ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ. ವಚನಕಾರರ ಭಾಷಾಬಳಕೆಯ ಸಾಮಾಜಿಕ ಆಯಾಮ ಅರ್ಥಪೂರ್ಣವಾಗಿ ಮೂಡಿಬಂದಿದೆ. ಡಾ. ಅಂಗಡಿ ಅವರು ಬೆಳಗಾವಿ ಜಿಲ್ಲೆಗೆ ಸೇರಿದವರು. ಆ ಜಿಲ್ಲೆಗೆ ದೊಡ್ಡದಾದ ಪಂಡಿತ ಪರಂಪರೆಯಿದೆ. ಕೆ.ಬಿ. ಪಾಠಕ, ಎಸ್.ಎಂ.ಕತ್ರ, ಶಂ. ಬಾ. ಜೋಶಿ, ಕೆ. ಜಿ. ಕುಂದಣಗಾರ, ಆ ನೇ. ಉಪಾಧ್ಯೆ, ಚ.ನಂದೀಮಠ, ಬೆಟಗೇರಿ ಕೃಷ್ಣಶರ್ಮ, ಡಿ. ಎಸ್. ಕರ್ಕಿ ಮುಂತಾದ ಪೂರ್ವಸೂರಿಗಳು ಅಲ್ಲಿ ಹಿರಿದಾದ ದಾರಿ ನಿರ್ಮಿಸಿದ್ದಾರೆ. ಹೊಸರಚನೆಯ ವಿಧಾನಗಳ ಹಿನ್ನೆಲೆಯಲ್ಲಿ ಆ ಪರ೦ಪರೆಯ ಮುಂದುವರಿಕೆಯಾಗಿ ಕನ್ನಡ ಸಂಶೋಧನ ಭೂಮಿಕೆಯಲ್ಲಿ ಡಾ. ಅಂಗಡಿ ಅವರು ಕಾಣಿಸಿಕೊಳ್ಳುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.