ಮಹಾದೇವಿಯಕ್ಕನ 'ಯೋಗಾಂಗ ತ್ರಿವಿಧಿ: ಒಂದು ತಾತ್ವಿಕ ವಿಶ್ಲೇಷಣೆ'-ಈ ಕೃತಿಯನ್ನು ರಚಿಸಿದವರು ಹಿರಿಯ ಲೇಖಕಿ ಡಾ. ಶಕುಂತಲಾ ಸಿದ್ಧರಾಮ ದುರಗಿ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು 'ಬೆಳ್ಳಿಕಿರಣ' ಮಾಲಿಕೆಯ ಅಡಿಯಲ್ಲಿಈ ಕೃತಿಯು ಪ್ರಕಟವಾಗಿದೆ. 12ನೇ ಶತಮಾನದ ಮಹಾನುಭಾವಿ, ಶಿವಯೋಗಿಣಿ ಅಕ್ಕಮಹಾದೇವಿ ರಚಿಸಿದ 'ಯೋಗಾಂಗ ತ್ರಿವಿಧಿ'ಯ ತಾತ್ವಿಕ ನೆಲೆಯ ವಿಶ್ಲೇಷಣೆ ಒಳಗೊಂಡಿದೆ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಶಿವಯೋಗ ಸಾಧನೆಯ ವಿವಿಧ ಹಂತಗಳ ಸೂತ್ರೀಕರಣದಂತಿರುವ ಅಕ್ಕನ 'ಯೋಗಾಂಗ ತ್ರಿವಿಧಿ'ಯನ್ನು ವಿಶ್ಲೇಷಿಸುವುದು ಅಷ್ಟು ಸುಲಭವಲ್ಲ. ಆ ಎತ್ತರಕ್ಕೆ ಏರಿದವರಿಗಷ್ಟೇ ಅದು ಸಾಧ್ಯವಾಗುವ ಸಿದ್ಧಿ. ಆದರೂ ಡಾ.ಶಕುಂತಲಾ ದುರಗಿಯವರು ಅಕ್ಕನ ಎತ್ತರಕ್ಕಲ್ಲದಿದ್ದರೂ ಆಕೆಯ ಹತ್ತಿರಕ್ಕಾದರೂ ಹೋಗಬೇಕೆಂಬ ಛಲತೊಟ್ಟು ಇಲ್ಲಿ ವಿಶ್ಲೇಷಣೆ ನಡೆಸಿದ್ದಾರೆ. ಅಂತರಂಗ ಬಹಿರಂಗಗಳ ಮಧ್ಯೆ ಇರುವ ಸದ್ದಡಗಿಸಿ, ಯಾವುದೇ ಗೊಂದಲವಿಲ್ಲದ ಅನನ್ಯವಾದ ಆ 'ಶೂನ್ಯ'ದ ಅನುಭಾವದ ಆಲಯಕ್ಕೆ ಓದುಗರನ್ನು ಕರೆದೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.' ಅಕ್ಕಮಹಾದೇವಿಯ ಪ್ರಚಲಿತವಿರುವ ವಚನಗಳನ್ನಷ್ಟೇ ಓದಿಕೊಂಡಿರುವವರಿಗೆ 'ಯೋಗಾಂಗ ತ್ರಿವಿಧಿ'ಯ ವಿಶ್ಲೇಷಣಾ ಕೃತಿಯು ವಿಕಸನದ ಅನುಭವ ನೀಡುತ್ತದೆ.
©2024 Book Brahma Private Limited.