ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು, ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ 54ನೇ ಪ್ರಚಾರೋಪನ್ಯಾಸ ಶಿಬಿರದಲ್ಲಿ ಮಾಡಿದ ಉಪನ್ಯಾಸದ ಕೃತಿಯೇ -ದಾಸೋಹ ಸಂಸ್ಕೃತಿ. ಕೃತಿಯಲ್ಲಿ , ಪೀಠಿಕೆ, ದಾನ-ದಾಸೋಹ ಸಂಸ್ಕೃತಿಯ ಪರಿಕಲ್ಪನೆ, ದಾಸೊಹ ಸಂಸ್ಕೃತಿಯ ಮೌಲ್ಯ ವಿವೇಚನೆ, ದಾಸೋಹ ಸಂಸ್ಕೃತಿಯ ಪರಿಶೀಲನೆ ಹಾಗೂ ಉಪಸಂಹಾರ ಎಂಬ ಐದು ಅಧ್ಯಾಯಗಳಿವೆ. ಸೃಷ್ಟಿಯಲ್ಲಿ ಮನುಷ್ಯ ಜೀವಿ ಉದಯಿಸಿದಾಗಿನಿಂದ ಹಿಡಿದು, ಹಂತ ಹಂತವಾಗಿ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಬೆಳೆದು ಸೃಷ್ಟಿಗೆ ಮಾರಕವಾಗುವ ಸ್ಥಿತ್ಯಂತರಗಳು, ಮನುಷ್ಯ ಸಾಧಿಸಿದ ಶೈಕ್ಷಣಿಕ, ವೈಜ್ಞಾನಿಕ, ತಾಂತ್ರಿಕ ಆವಿಷ್ಕಾರಗಳು, ಎಲ್ಲಕ್ಕಿಂತ ಮಿಗಿಲಾಗಿ ಮನುಷ್ಯ ಮನುಷ್ಯನಾಗಿ ಉಳಿಯಲು ಅಗತ್ಯ ಮಾನವೀಯ ಮೌಲ್ಯಗಳ ಹಿನ್ನೆಲೆಯನ್ನು ಪೀಠಿಕಾ ರೂಪದಲ್ಲಿ ವಿವರಿಸಲಾಗಿದೆ. ಎರಡನೆಯ ಅಧ್ಯಾಯದಲ್ಲಿ ಸಂಸ್ಕೃತಿ ರೂಪನಿಷ್ಪತ್ತಿ, ಸಂಸ್ಕೃತಿ ಕುರಿತು ವಿವಿಧ ವಿದ್ವಾಂಸರ ವ್ಯಾಖ್ಯೆಗಳು, ಕನ್ನಡ ನಾಡಿನಲ್ಲಿ ಉಲ್ಲೇಖವಾಗಿರುವ ಸಾಂಸ್ಕೃತಿಕ ಮೌಲ್ಯಗಳ ದಾಖಲೆಗಳ ವಿಶ್ಲೇಷಣೆ ಇದೆ. ದಾನ ಮತ್ತು ದಾಸೋಹ ಎಂಬ ಪಾರಿಭಾಷಿಕ ಪದಗಳ ನಡುವಿರುವ ಭಿನ್ನತೆ ಏನು? ದಾಸೋಹ ಕುರಿತು 11 ಶಿವಶರಣರ ವಚನೋಕ್ತಿ ಗಳೊಂದಿಗೆ ದಾಸೋಹದ ಸ್ವರೂಪ, ವೈಶಿಷ್ಟ್ಯತೆ ಮತ್ತು ಮಹತ್ವ ಕುರಿತು ಚರ್ಚಿಸಲಾಗಿದೆ. 3ನೇ ಅಧ್ಯಾಯದಲ್ಲಿ 12ನೇ ಶತಮಾನದಲ್ಲಿ ದಾಸೋಹ ಸಂಸ್ಕೃತಿಯನ್ನು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಅನುಭಾವಿಕ ನೆಲೆಗಳಲ್ಲಿ ಹೇಗೆ ಅನುಷ್ಠಾನಗೊಳಿಸಲಾಗಿತ್ತು ಎಂಬುದನ್ನು ಚಾರಿತ್ರಿಕವಾಗಿ ದಾಖಲಿಸಲಾಗಿದೆ. 4ನೇ ಅಧ್ಯಾಯದಲ್ಲಿ ದಾಸೋಹ ಸಂಸ್ಕೃತಿಯನ್ನು ಪ್ರಕೃತಿಯಲ್ಲಿ, ಚರಿತ್ರೆಯಲ್ಲಿ, ವಿವಿಧ ಧರ್ಮಗಳಲ್ಲಿ, ಜನಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿತ್ತು ಎಂಬುದನ್ನು ಹಾಗೂ ಉಪಸಂಹಾರದಲ್ಲಿ ದಾಸೋಹ ಮತ್ತು ಸಂಸ್ಕೃತಿ ಎರಡೂ ಮನುಷ್ಯನ ಆಂತರಿಕ ಪರಿಶುದ್ಧಿ, ಮನಸ್ಸಿನ ಪರಿಪಕ್ವತೆ, ಜೀವನ ವಿಧಾನ, ಸೌಹಾರ್ದತೆ, ಸಹಬಾಳ್ವೆ, ಸೌಜನ್ಯತೆ, ವಿನಮ್ರತೆ, ಪರಿಪೂರ್ಣತೆ, ಸಮನ್ವಯ, ವಿವೇಕ, ಪ್ರಬುದ್ಧ ನೆಲೆ ಎನ್ನುವುದನ್ನು ಸಮೀಕರಿಸಲಾಗಿದೆ. ಪ್ರಸಕ್ತ ಸಂಕೀರ್ಣ ಸ್ಥಿತಿಯಲ್ಲಿ ಮನುಷ್ಯ ಮನುಷ್ಯನಾಗಿ ಉಳಿಯಲು ದಾಸೋಹ ಭಾವ ಅತ್ಯಗತ್ಯ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಹೊತ್ತಿಗೆಯ ಕೊನೆಯಲ್ಲಿ ಕೊಟ್ಟಿರುವ ಆಧಾರ ಗ್ರಂಥಸೂಚಿಯಲ್ಲಿ ಸಂಸ್ಕೃತಿ, ವೀರಶೈವ ಸಂಸ್ಕೃತಿ,, ಕರ್ನಾಟಕ ಸಂಸ್ಕೃತಿ, ವಚನ ಸಂಸ್ಕೃತಿ, ಹಾಗೂ ದಾಸೋಹ ಸಂಸ್ಕೃತಿ, ಕುರಿತು ನಡೆದ ಅಧ್ಯಯನಗಳ ಮತ್ತು ಪ್ರಕಟಿತ ಕೃತಿಗಳ ವಿವರಗಳು ಓದುಗರಿಗೆ ಉಪಯುಕ್ತವಾಗಿದೆ.
©2024 Book Brahma Private Limited.