ಉತ್ತರ ಕರ್ನಾಟಕ ಪ್ರದೇಶದಲ್ಲಿ ಆಗಿಹೋಗಿರುವ 260ಕ್ಕಿಂತಲೂ ಹೆಚ್ಚಿನ ಜನಪದ ಕವಿಗಳ, ತತ್ವಪದಕಾರರ ಮತ್ತು 50ಕ್ಕಿಂತಲೂ ಹೆಚ್ಚಿನ ವೀರಶೈವ ಪುಣ್ಯ ಪುರುಷರ, ಗಣ್ಯ ಮಹಾತ್ಮರ, ಶರಣರ ಕಿರು ಚರಿತ್ರೆಗಳನ್ನು ಬರೆದಿರುವ ಡಾ. ಎಂ.ಎಸ್. ಲಠ್ಠೆಯವರನ್ನು ವಿನಮ್ರತೆಯಿಂದ ಸ್ಮರಿಸಿರುವ ಲೇಖಕ ಡಾ. ಕಲ್ಯಾಣರಾವ್ ಜಿ. ಪಾಟೀಲರು, ತಮ್ಮ ಗುರುಗಳ ಮಣಿಹವನ್ನು ಈ ಕೃತಿಯಲ್ಲಿ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ. ಅದರಂತೆ, ಈ ಭಾಗದಲ್ಲಿ ಆಗಿ ಹೋಗಿರುವ ಮಹಾದಾಸೋಹಿ ಶರಣಬಸವೇಶ್ವರರ ಸಮಕಾಲೀನ 18 ಜನ ಅನುಭಾವಿಗಳ ಜೀವನ ಗಾಥೆಯನ್ನು ವಿವರಿಸಲಾಗಿದೆ. ಪರಂಪರೆ-ಅಧ್ಯಾಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಹೆಜ್ಜೆಗುರುತುಗಳನ್ನು ಹಿಡಿದಿಡಲಾಗಿದೆ. 2ನೇ ಅಧ್ಯಾಯ ದಲ್ಲಿ ಶರಣಬಸವರ ಕಾಲದಲ್ಲಿ ಅವರಿಗಿಂತಲೂ ಹಿರಿಯರಾಗಿದ್ದ ಕಲಬುರಗಿಯ ಪರಿಸರದಲ್ಲಿ ಆಗಿ ಹೋಗಿರುವ ಸಾವಳಗಿ ಶಿವಲಿಂಗೇಶ್ವರರು ಮತ್ತು ರಾಮಪುರದ ಬಕ್ಕಪ್ಪಯ್ಯನವರ ಪರಿಚಯ, 3ನೇ ಅಧ್ಯಾಯದಲ್ಲಿ ಶರಣಬಸವರ ಸಮಕಾಲೀನ ಶರಣರಾದ ಹರಸೂರಿನ ಅಣವೀರಪ್ಪನವರು, ಮರಕುಂದಿ ಬಸವಣಪ್ಪನವರು, ಐನೂಲಿ ಕರಿಬಸವಾರ್ಯರು, ಕಡಕೋಳ ಮಡಿವಾಳಪ್ಪನವರು, ಕೂಡಲೂರು ಬಸವಲಿಂಗ ಶರಣರು, ಚೆನ್ನೂರ ಜಲಾಲ್ ಸಾಹೇಬರು, ಗೂಗಲ್ ಪರಪ್ಪಯ್ಯನವರು, ಕರಕನಳ್ಳಿ ಬಕ್ಕಪ್ರಭುಗಳು, ನಾಲ್ವಾರದ ಕೋರಿ ಸಿದ್ಧೇಶ್ವರರ ಜೀವನ ಸಾಧನೆಯನ್ನು ವಿವರಿಸಿದೆ. 4ನೇ ಅಧ್ಯಾಯದಲ್ಲಿ ಶರಣಬಸವರ ಕಿರಿಯ ಸಮಕಾಲೀನ ಶರಣರಾದ ಗೊಬ್ಬೂರು ಹಂಪಣ್ಣನವರು, ಖೈನೂರು ಕೃಷ್ಣಪ್ಪನವರು, ಕಡ್ಲೆವಾಡ ಸಿದ್ಧಪ್ಪನವರು, ತೆಲಗಬಾಳ ರೇವಪ್ಪನವರು, ನೀರಲಕೇರಿ ಬಸವಲಿಂಗ ಶರಣರು, ಹುಡಗಿಯ ಕರಿಬಸವೇಶ್ವರರು, ಮಾಣಿಕನಗರದ ಮಾಣಿಕಪ್ರಭುಗಳ ಅನುಭಾವಿಕ ನಿಲುವುಗಳನ್ನು ವಿಶ್ಲೇಷಿಸಲಾಗಿದೆ. ಪ್ರಸ್ತುತತೆ ಎಂಬ ಸಮಾರೋಪದ ನುಡಿಗಳಲ್ಲಿ ಲೇಖಕರು “ಕಲ್ಯಾಣ ಕರ್ನಾಟಕ ಪ್ರದೇಶದ ಉದ್ದಗಲಕ್ಕೂ ಕಳೆದ ಎರಡು ಶತಮಾನಗಳಲ್ಲಿ ಆಗಿ ಹೋಗಿರುವ ಶಿವಾನುಭಾವಿಗಳು, ಶರಣರು, ಸ್ವರವಚನಕಾರರು, ತತ್ವಪದಕಾರರು, ಅವಧೂತರು, ಆರೂಢರು, ಸಾಧು-ಸಂತ ಮಹಾಂತರೆಲ್ಲರೂ ಈ ನೆಲದಲ್ಲಿ ಬಹುಧರ್ಮ, ಬಹುಭಾಷೆ, ಬಹುರೂಪಿ ಸಂಸ್ಕೃತಿಗಳ ವಾರಸುದಾರರಾಗಿದ್ದವರು. ಸುತ್ತಮುತ್ತಲಿನ ಸಮಾಜೋಧಾರ್ಮಿಕ ಸಮಸ್ಯೆಗಳಿಗೆ ಮತ್ತು ಜನಮಾನಸದ ಮನೋದೈಹಿಕ ರೋಗಗಳಿಗೆ ಸಂಜೀವಿನಿ ಯಂತೆ ಜೀವಿಸಿದ್ದರು. ಸಂಕೀರ್ಣ ವ್ಯವಸ್ಥೆಯಲ್ಲಿ ನೊಂದು ಬೆಂದ ಅಮಾಯಕ ಜನರಿಗೆ ಮಾನಸಿಕವಾಗಿ ಆಸರೆಯಾಗಿದ್ದರು. ತಾಯ್ತನದ ವಾತ್ಸಲ್ಯವನ್ನು ಮತ್ತು ಮಾನವೀಯ ಪ್ರೀತಿಯನ್ನು ಧಾರೆಯೆರೆದಿದ್ದರು. ಅಂತಹ ಮಹಾನುಭಾವಿಗಳ ಸರಳ, ಶುದ್ಧ, ಸಾತ್ವಿಕ, ಸಹಬಾಳ್ವೆಯ ಜೀವನವು ಇಂದಿನ ಸರ್ವರಿಗೂ ತೋರುದೀಪದಂತಿದೆ” ಎಂದಿರುವುದು ಮನನೀಯ.
©2024 Book Brahma Private Limited.