‘ವಚನಾರ್ಥ ಚಿಂತನ’ ಕೃತಿಯು ಸಿದ್ಧರಾಮ ಸ್ವಾಮಿಗಳ ವಚನಗಳ ಕುರಿತ ಚಿಂತನಾ ಬರಹವಾಗಿದೆ. ಈ ಕೃತಿಗೆ ಒಳ್ನುಡಿ ಬರೆದಿರುವ ಸಿದ್ದೇಶ್ವರ ಸ್ವಾಮಿ ಅವರು, `ಶರಣರು, ಅವರ ಹಿರಿಮ ಗರಿಮೆಗಳನು ಅವರನರಿತವರ ಮಾತುಗಳಲ್ಲಿಯೇ ಕೇಳಬೇಕು. ಅವರು ನಿಜವನರಿದ ನಿಶ್ಚಿಂತರು; ಮರಣವ ಗೆಲಿದ ಮಹಂತರು; ಘನವ ಕಂಡ ಮಹಿಮರು, ಅವರು ಲೋಕವಿಡಿದೂ ಲೋಕ ಹಿಂಗಿದರು; ಹೊರಗೆ ಬಳಸಿಯೂ ಒಳಗೆ ಮರೆದರು, ಬಯಲು ಬಿತ್ತಿ, ಬಯಲ ಬೆಳೆದು, ಬಯಲನುಂಡು ಬಯಲಾದ ಬಯಲಯೋಗಿಗಳು; ಆನಂದ-ಕೃಷಿಕರು! ಅವರ ಬದುಕು ಬೆಳದಿಂಗಳು, ಕಿಚ್ಚಿಲ್ಲ: ಸಂಕಲ್ಪ-ವಿಕಲ್ಪಗಳ ಭ್ರಮೆಯಿಲ್ಲ. ಶಾಂತ, ಶೀತಲ! ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತೆ ಬಾಳಿದರು. ಅವರಲ್ಲಿ ಮರಹು-ಮಾಯೆಗಳಿಗೆಡೆಯಿಲ್ಲ; ಅಹಂ-ಅಭಿಮಾನಗಳಿಗೆ ಇಂಬಿಲ್ಲ. ಅವರ ಮಾತುಗಳೂ ಹಾಗೆಯೇ. ಅವು ಮಧುರ, ಜೇನು ಸಕ್ಕರೆ ಬೆರೆಸಿದ ಹಾಲಿನಂತೆ! ಒಮ್ಮೊಮ್ಮೆ ಆದರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ, ಅವು ಮನದ ಕತ್ತಲೆ ಕಳೆವ ಜ್ಯೋತಿಗಳು! ಅವುಗಳಲ್ಲಿ ಏನಿಲ್ಲ? ಹದವಾದ ಬದುಕಿಗೆ ಅವಶ್ಯವಾದುದೆಲ್ಲ ಇದೆ. ಅವು 'ಸೂಳ್ನುಡಿ'ಗಳು. ಅರಳಿದ ಅಲರುಗಳು, ಹೊರಗೆ ಕಾವ್ಯದ ಸೊಬಗು, ಒಳಗೆ ಅನುಭವದ ಮಕರಂದ; ಅನುಭಾವದ ಅಮೃತ ಅವುಗಳಲ್ಲಿಯ ಆ ಅಮೃತವನ್ನು ಆಸ್ವಾದಿಸಿ, ಅದರ ಸವಿಯನ್ನು ಯುಕ್ತ ಶಬ್ದಗಳಲ್ಲಿಟ್ಟು ಸುಖಿಸಿದವರು ಪೂಜ್ಯರಾದ ಶ್ರೀ ಸಿದ್ಧರಾಮ ಸ್ವಾಮೀಜಿಯವರು. ಅವರು ರೇಖಿಸಿದ ವ್ಯಾಖ್ಯಾನಗಳೆಲ್ಲ ಅನುಭವದ ಅಭಿವ್ಯಕ್ತಿಗಳು, ವಚನಗಳ ಅಂತಃಸತ್ವವನ್ನು ಬಿಚ್ಚಿ ಬಿಚ್ಚಿಡುವ ಅವರ ಕಲೆ ಕಮನೀಯ, ಅಲ್ಲಲ್ಲಿ ಉಚಿತ ಉದಾಹರಣೆಗಳು; ಆಧುನಿಕ ಮನವೊಪ್ಪುವವೋಲ್ ವಿವರಣೆಗಳು: ಹೃದ್ಯ ಬೋಧನೆಗಳು’ ಎಂದಿದ್ದಾರೆ.
©2024 Book Brahma Private Limited.