`ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ’ ಕೃತಿಯು ವಚನ ಸಾಹಿತ್ಯದ ಗ್ರಂಥವಾಗಿದೆ. ಲೇಖಕಿ ಕಾವ್ಯಶ್ರೀ ಜಿ. ಅವರ ಕೃತಿ. ಈ ಕುರಿತು ವಿಶ್ಲೇಷಣೆ ನೀಡಿರುವ ಎನ್. ಎಸ್ ಮಹಾಂತೇಶ ಅವರು, `ಕರ್ನಾಟಕ ಸಾಹಿತ್ಯ ಪರಂಪರೆಯಲ್ಲಿ ' ವಚನ ಸಾಹಿತ್ಯ ' ವಿಶಿಷ್ಟವಾದ ಸ್ಥಾನಮಾನ ಪಡೆದುಕೊಂಡು ಬೆಳೆದು ಉಳಿದು ಬಂದಿರುವುದು ಅದರ ತಾತ್ವಿಕ ಹಾಗೂ ಕ್ರಿಯಾತ್ಮಕ ನಿಲುವುಗಳಿಗೆ ಸಾಕ್ಷಿಯಾಗಿದೆ. ಕ್ರಿ.ಶ.12 ನೇ ಶತಮಾನದ ಸಾಹಿತ್ಯ ಪರಂಪರೆಯಲ್ಲಿ ಹೊಸ ಪರ್ವವನ್ನು ಸೃಷ್ಟಿಸುವುದರ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನವನ್ನು ಉಂಟುಮಾಡಿತು. ಈ ಮೂಲಕ ಮಾನವನ ಬದುಕಿನ ಪ್ರತಿಯೊಂದು ಸ್ತರಗಳಲ್ಲೂ ಅನನ್ಯ ಬದಲಾವಣೆಗಳನ್ನು ತಂದಿತು. 12 ನೇ ಶತಮಾನದ ವಚನ ಚಳುವಳಿಯ ಆದ್ಯ ಪ್ರವರ್ತಕರು ವಚನಕಾರರು ಆಗಿದ್ದರು. ಇವರ ಜೊತೆಯಲ್ಲಿ ವಚನಕಾರ್ತಿಯರ ಪಾತ್ರವೂ ಅದ್ವಿತೀಯವಾದುದು. ವಚನಕಾರ್ತಿಯರು ಸಮಕಾಲೀನ ಸಮಾಜದ ಪ್ರತಿಯೊಂದು ಸಂದರ್ಭ, ವ್ಯವಸ್ಥೆ, ಸ್ಥಿತಿಗತಿ ಇತ್ಯಾದಿಯಾಗಿ ತಮ್ಮ ವಚನಗಳಲ್ಲಿ ಟೀಕೆ-ಟಿಪ್ಪಣಿ, ವಿಡಂಬನೆ, ಪ್ರತಿಭಟನೆ ಲಕ್ಷಣವನ್ನು ಹರಿಸಿದ್ದಾರೆ. ವಚನಕಾರ್ತಿಯರು ವೈಚಾರಿಕವಾಗಿ, ಮೌಲ್ಯಯುತವಾಗಿ, ಪ್ರಮಾಣಬದ್ಧವಾಗಿ, ಪ್ರಾಯೋಗಿಕವಾಗಿ, ಸೃಜನಶೀಲವಾಗಿ, ಕ್ರಿಯಾತ್ಮಕವಾಗಿ, ವಚನಗಳ ಮೂಲಕ ಸಮಾಜವನ್ನು ವಿಶ್ಲೇಷಿಸಿದ್ದಾರೆ. ಜಿ.ಕಾವ್ಯಶ್ರಿ ಅವರು ವಚನಕಾರ್ತಿಯರ ವೈಚಾರಿಕ ವಿಚಾರಗಳ ಕುರಿತು ಬಹು ಸುದೀರ್ಘ ವಿಶ್ಲೇಷಣೆ ಮೂಲಕ ಚರ್ಚಿಸಿದ್ದಾರೆ. ಅಕ್ಕಮಹಾದೇವಿ, ಅಕ್ಕಮ್ಮ, ಅಮ್ಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ನಿತ್ಯಮುಕ್ತೆ ಕಾಳವ್ವೆ, ಪುಣ್ಯಸ್ತ್ರೀ ಮಸಣಮ್ಮ, ಕಾಳವ್ವೆ, ಕದಿರ ರೆಮ್ಮವ್ವೆ, ರೇಮಮ್ಮ, ಪುಣ್ಯ ಸ್ತ್ರೀ ರೇಚವ್ವೆ, ಕಾಮಮ್ಮ, ಪುಣ್ಯ ಸ್ತ್ರೀ ಲಕ್ಷ್ಮಮ್ಮ, ಸೋಮಮ್ಮ, ಗಂಗಾಂಬಿಕೆ, ಗಜೇಶ ಮಸಣಯ್ಯ ಪುಣ್ಯ ಸ್ತ್ರೀ, ಪುಣ್ಯ ಸ್ತ್ರೀ ಕೇತಲದೇವಿ, ಗೊಗ್ಗವ್ವೆ, ಪುಣ್ಯ ಸ್ತ್ರೀ ವೀರಮ್ಮ, ದುಗ್ಗಳೆ, ನಾಗಲಾಂಬಿಕೆ, ನೀಲಮ್ಮ, ಗುಡ್ಡವ್ವೆ, ಪುಣ್ಯ ಸ್ತ್ರೀ ಕಾಳವ್ವೆ, ಬೊಂತಾದೇವಿ, ಮುಕ್ತಾಯಕ್ಕ, ಮೋಳಿಗೆ ಮಹಾದೇವಿ, ಪುಣ್ಯ ಸ್ತ್ರೀ ರಾಯಮ್ಮ, ಪುಣ್ಯ ಸ್ತ್ರೀ ರೇಕಮ್ಮ, ಸತ್ಯಕ್ಕ, ಪುಣ್ಯ ಸ್ತ್ರೀ ಕಾಳವ್ವೆ, ಸಂಕವ್ವೆ, ಹಡಪದ ಲಿಂಗಮ್ಮ, ಪುಣ್ಯ ಸ್ತ್ರೀ ಗಂಗಮ್ಮ.. ಹೀಗೆ ಇಂತಹ ಅನೇಕ ವಚನಕಾರ್ತಿಯರ ಜೀವನ ಮತ್ತು ಚಿಂತನೆಗಳನ್ನು ದಾಖಲಿಸಿದ್ದಾರೆ.
©2024 Book Brahma Private Limited.