‘ಸುಕವಿಲ್ಲದ ದಾವತಿ’ ಅಕ್ಕನ ವಚನಗಳ ಓದಿನ ಶೋದ ಕೃತಿಯನ್ನು ಲೇಖಕ ಬಸವರಾಜ ಕೋಡಗುಂಟಿ ಅವರು ರಚಿಸಿದ್ದಾರೆ. ಪುಸ್ತಕದ ಕುರಿತು ತಿಳಿಸುತ್ತಾ ‘ಈ ಪುಸ್ತಕ ಅಕ್ಕಮಹಾದೇವಿಯ ಬರಹವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ. ಅದಕ್ಕೆ ಪೂರಕವಾಗಿ ಅಕ್ಕಮಹಾದೇವಿಯ ಬರಹಗಳಿಗೆ ಅಂಟಿರುವ ವಿಭಿನ್ನ ಕಟ್ಟಳೆಗಳನ್ನು ಮುರಿಯುವ ಪ್ರಯತ್ನ ಕೂಡ. ಅಕ್ಕಮಹಾದೇವಿಯ ಬರಹವನ್ನು ಲಿಂಗಾಯತ-ವೀರಶೈವವಾಗಿ, ಭಕ್ತಿಯಾಗಿ ಮತ್ತು ಸಾಮಾಜಿಕ ಪಠ್ಯವಾಗಿ ಓದಿರುವುದು ಸಾಮಾನ್ಯ ಕಾಣಿಸುತ್ತದೆ. ಇವು ಓದಿನ ಕ್ರಮಗಳು ಮಾತ್ರವಾಗಿ ಉಳಿಯದೆ ಅಕ್ಕನ ಬರಹದ ಓದನ್ನು ಕಟ್ಟಿಹಾಕುವ ನಿಯಂತ್ರಕಗಳಾಗಿ ಬೆಳೆದಿವೆ. ಇದು ಹೀಗೆ ಎಂದು ನಿಯಮ ಹೇರುವುದಿಲ್ಲವಾದರೂ ಸಮಾಜದಲ್ಲಿ ಇದು ಹೀಗೆ ಎಂದು ನಂಬಿಸುವ ಕ್ರಮವನ್ನು ಇಲ್ಲಿ ಗಮನದಲ್ಲಿ ಇಟ್ಟುಕೊಂಡಿದ್ದೇನೆ. ಈ ಕಟ್ಟಳೆಗಳಿಂದ ಅಕ್ಕನ ಬರಹವನ್ನು ಹೊರತರಬೇಕಾದ, ವಿಬಿನ್ನ ಓದಿಗೆ ವಚನಗಳನ್ನು ತೆರೆಯಬೇಕಾದ ಅವಶ್ಯಕತೆ ಇದೆ. ಅಂತಾ ವಿಭಿನ್ನ ಮಾದರಿಗಳಲ್ಲೊಂದನ್ನು ಒದಗಿಸುವುದಕ್ಕೆ ಈ ಪ್ರಯತ್ನ ಎಂದಿದ್ದಾರೆ ಲೇಖಕ ಬಸವರಾಜ ಕೋಡಗುಂಟಿ.
ಈ ಪುಸ್ತಕದಲ್ಲಿ 4 ವಿಭಾಗಗಳಿದ್ದು, ಮೊದಲ ವಿಭಾಗದಲ್ಲಿ ‘ಅಕ್ಕನ ವಚನಗಳ ಓದಿನ ಶೋದ’ ವಿಚಾರದ ಅಡಿಯಲ್ಲಿ ‘ಆಧುನಿಕ ಕಾಲದ ಸಾಹಿತ್ಯ ಓದಿನ ಕ್ರಮಗಳ ನಿರ್ಮಾಣ ಪ್ರಕ್ರಿಯೆ’, ‘ಕನ್ನಡ ಸಾಹಿತ್ಯ ಚರಿತ್ರೆ ನಿರ್ಮಾಣ’, ‘ವಚನಗಳ ನಿರ್ಮಾಣ ಮತ್ತು ವಚನಗಳ ಓದು’ ಹಾಗೂ ‘ಅಕ್ಕನ ವಚನಗಳನ್ನು ಓದು’ ಎಂಬ ಪಠ್ಯಗಳಿವೆ. ಎರಡನೇ ಭಾಗದಲ್ಲಿ ‘ಬಾಶೆ, ಬಾಶೆಯ ಸಂಕೀರ್ಣ ರಚನೆ ಮತ್ತು ಸಾಹಿತ್ಯದ ಓದು’ ವಿಷಯವಿದೆ, ಮೂರನೇ ಭಾಗದಲ್ಲಿ ‘ಅಕ್ಕನ ವಚನಗಳ ರಚನೆ’ ಅಡಿಯಲ್ಲಿ ‘ಅಕ್ಕನ ವಚನಗಳು’, ‘ವಚನಗಳ ತಾತ್ವಿಕತೆ’, ‘ವಚನಗಳ ಬಾಶೆ’, ‘ವಚನಗಳ ರಚನೆ’, ‘ಪದಹಂತದ ಲಕ್ಶಣಗಳು’, ‘ಪದಪೋಣಿಕೆ’, ‘ಪದಜೋಡಿ’, ‘ಪದ ಮರುಕಳಿಕೆ’, ‘ವಾಕ್ಯ ಹಂತದ ಲಕ್ಶಣಗಳು’, ‘ಸಂಕತನ ಹಂತದ ಲಕ್ಶಣಗಳು’, ‘ಸಂಬಂದವಿಲ್ಲದಂತ ರಚನೆ’, ‘ಅಸಂಗತತೆ’, ‘ಅನುಮಾನ-ನಿರಸನ ತಂತ್ರ’, ‘ಸಂಬೋದನ ರೂಪದ ಬಳಕೆಯಲ್ಲಿನ ತಂತ್ರ’, ‘ವಿಶಿಶ್ಟವಾಗಿ ಕಾಣುವ ಎರಡು ವಿಚಾರಗಳು’, ‘ಪ್ರಾಸ’, ‘ಕಲ್ಪನೆ ಮತ್ತು ರೂಪಕಾತ್ಮಕತೆ’, ‘ವಚನಗಳ ಗುಂಪಿಕೆ’ ವಿಚಾರಗಳನ್ನು ವಿವರಿಸಲಾಗಿದೆ. ನಾಲ್ಕನೇ ವಿಭಾಗದಲ್ಲಿ ‘ಅಕ್ಕನ ವಚನಗಳ ಆನ್ವಯಿಕ ಓದು’ ಅಡಿಯಲ್ಲಿ ‘ಶಬ್ದದ ನಾಣು’, “ಏರಿಲ್ಲದ ಗಾಯ”, ‘ಆತ್ಮಸಂಗಾತ’, ‘ಆಲಿಕಲ್ಲ ಹಸೆ’, ‘ಇಲ್ಲದ ಚೆಲುವ’, ‘ಹಲವು ಗಂಡರು’ ಎಂದು ವಿಶ್ಲೇಷಿಸಲಾಗಿದೆ.
©2024 Book Brahma Private Limited.