ವಿಜಯಲಕ್ಷ್ಮಿ ಕೊಟಗಿ ಅವರ ವಚನಗಳ ಸಂಗ್ರಹ ‘ ಶ್ರೀವಿಜಯ ಸ್ವಗತ’. ಅದರ ಉಪಶೀರ್ಷಿಕೆ *ಬಸವ ಬಾಳ್ಬನದ ತಂಪು*. ಇದೊಂದು ಆಧುನಿಕ ವಚನಗಳ ಗೊಂಚಲು. *ಶ್ರೀವಿಜಯ* ಎಂಬ ಅಂಕಿತನಾಮ ಇಟ್ಟುಕೊಂಡ ಕವಯತ್ರಿ ಸಮಾಜದಲ್ಲಿರುವ ಕುಂದುಕೊರತೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಆಧ್ಯಾತ್ಮ , ಶರಣ ಸತ್ಸಂಗ, ಸನ್ನೆಡೆಯ ಜೀವನ, ಸದಾಚಾರ ಸುವಿಚಾರಗಳ ಬಗ್ಗೆ ಸಾಕಷ್ಟು ವಚನಗಳಿವೆ. ಮೂಢನಂಬಿಕೆ, ಅನೀತಿ, ಮಹಿಳಾ ಶೋಷಣೆ, ಅರಿಷಡ್ವರ್ಗದ ಲಾಲಸೆಗಳು, ಕ್ರೂರ ಸಂಪ್ರದಾಯಗಳು, ಸ್ವಾರ್ಥ, ಅಧಿಕಾರದ ದಾಹ, ರಾಜಕೀಯ ದೊಂಬರಾಟ, ಸ್ವಾಮಿಗಳ ಅಧರ್ಮದ ನಡೆ ಮುಂತಾದ ವಿಷಯಗಳನ್ನು ತುಂಬಾ ಚೆನ್ನಾಗಿ ಎಳೆಎಳೆಯಾಗಿ ವಿಮರ್ಶಿಸಿದ್ದಾರೆ. ಬಸವಣ್ಣನವರ ಹಾದಿಯಲ್ಲಿ ಸಾಗಿ "ಉಂಬ ಜಂಗಮ ಮತ್ತು ಉಣ್ಣದ ಲಿಂಗದ" ವಚನದ ಹಾಗೆ ಹಸಿದವರಿಗೆ ಆಹಾರ ಪದಾರ್ಥಗಳನ್ನು ವ್ಯರ್ಥಗೊಳಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಣ್ಣು-ಹೊನ್ನು-ಮಣ್ಣು ಮತ್ತು ಅಧಿಕಾರಕ್ಕಾಗಿ ಬಡಿದಾಡುವ ಮೂಲಕ ಗುರು-ಲಿಂಗ-ಜಂಗಮದ ಅರಿವಿರದ ಮೂಢರು ಜರಿಯುತ್ತಾರೆ. ಬಾಗುವುದು ಸದ್ವಿನಯ ,ಸಹನೆ, ಮೌನ ದೌರ್ಬಲ್ಯವಲ್ಲ ಅನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರಲ್ಲದೆ ನಡೆ-ನುಡಿ ಒಂದಾದಾಗ ಮಾತ್ರ ದೇವನೊಲುಮೆ ಸಾಧ್ಯ ಎಂಬುದನ್ನು ಮನಗಾಣಿಸುತ್ತಾರೆ. ಜಾತಿ ಮತ ಪಂಗಡಗಳ ಬಗ್ಗೆ ಸ್ವಾರ್ಥಸಾಧನೆಗಾಗಿ ಜನಮಾನಸದಲ್ಲಿ ವಿಷಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರನ್ನು ಅವರವರ ಕರ್ಮ ತಡೆಯದೆ ಬಿಡದು. ಅದರಿಂದ ಪಾರಾಗಲು ದೇವನಿಗೆ ಶರಣಾಗುವುದೇ ಮಾರ್ಗ ಎಂಬುದನ್ನು ಮಾರ್ಮಿಕವಾಗಿ ಬರೆದಿರುವರು. ನಿರಾಕಾರ ದೇವನನ್ನು ಸಾಕಾರಗೊಳಿಸಿದ ಶರಣರು ದೇವನ ಕುರುಹಾಗಿ ಅಪ್ಪ ಬಸವಣ್ಣನವರನ್ನು ಚಿರಸ್ಥಾಯಿಯಾಗಿ ಮೂರ್ತಿ ಗೊಳಿಸಿದರು ಮತ್ತು ಮುಂದಿನ ಪೀಳಿಗೆಗೆ ಬಸವತತ್ವ ಬೆಳೆಯಲು ಸಹಕಾರಿ ಆಗಬಹುದೆಂದು ಆಶಿಸಿದ್ದರು.
©2024 Book Brahma Private Limited.