ಘಟಪ್ರಭೆಯ ತಂಪಲ್ಲಿ ಜನಿಸಿದ ಕು. ಸಂಗೀತಾ ಹಣಮಂತ ಮಠಪತಿಯವರು ಸಾಮಾಜಿಕ ಕಳಕಳಿ ಹಾಗೂ ಆತ್ಮ ವಿಮರ್ಶೆಯ ಗುರಿ ಹೊತ್ತು ತಮ್ಮ ಚೊಚ್ಚಲ ಕೃತಿ 'ರಾಮಾಮೃತ' (ವಚನ ಸಂಕಲನ) ದ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸಂಗೀತಾರವರು ತಮ್ಮ ಆರಾಧ್ಯ ಶ್ರೀರಾಮ ನಾಮದೊಂದಿಗೆ ವಚನಗಳನ್ನು ರಚಿಸಿರುವುದು ವಿಶೇಷತೆಯಿಂದ ಕೂಡಿದೆ. ಅವರು ತಮ್ಮ ವಚನಗಳ ಮೂಲಕ ಶ್ರೀರಾಮನ ಕುರಿತಾದ ಅನಂತ ಭಕ್ತಿ ಭಾವವನ್ನು ತೋರಿದ್ದಾರೆ ಮತ್ತು ಶ್ರೀರಾಮನ ಹೆಸರಿನೊಂದಿಗೆ ಸಮಾಜದ ಓರೆ-ಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.ಅವರು ತಮ್ಮ ದೈನಂದಿನ ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಭಾವಭರಿತ ಪದಗುಚ್ಛಗಳಿಂದ ವಚನಗಳನ್ನಾಗಿಸಿದ್ದಾರೆ. ಈ ಕೃತಿಯು ಯಾವುದೆ ಜಾತಿ,ಧರ್ಮಗಳಿಗೆ ಸಿಮೀತವಾಗಿಲ್ಲ. ಇಲ್ಲಿಯ ಪ್ರತಿ ವಚನಗಳನ್ನು ಓದುವಾಗ ಓದುಗರ ಮನದಲ್ಲಿ ಭಕ್ತಿ,ಶ್ರದ್ಧಾ ಮನೋಭಾವ ತುಂಬಿ ಬರುವವು. ಸಂಗೀತಾರವರು ಚಿಕ್ಕಂದಿನಿಂದಲೂ ಆಧ್ಯಾತ್ಮಿಕತೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದವರಾಗಿದ್ದು, ಅವರು ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದರೂ ಸಹ ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದು ವಿಶೇಷ ಮತ್ತು ಅಭಿನಂದನೀಯ.ಸಂಗೀತಾರವರ ರಾಮಾಮೃತ ಕೃತಿಯ ಹಸ್ತಪ್ರತಿಗೆ ಗುರುಕುಲ ಸಾಹಿತ್ಯ ಕೇಸರಿ ಎಂಬ ರಾಜ್ಯ ಪ್ರಶಸ್ತಿ ಲಭಿಸಿರುವುದು ತುಂಬಾ ಸಂತಸದ ವಿಷಯ. ವಚನ ಸಂಕಲನದೊಂದಿಗೆ ಸಾಹಿತ್ಯ ಲೋಕದಲ್ಲಿ ಪ್ರಜ್ವಲಿಸಲಿರುವ ಕು.ಸಂಗೀತಾ ಹಣಮಂತ ಮಠಪತಿಯವರಿಂದ ಇನ್ನಷ್ಟು ಹೆಚ್ಚಿನ ಕೃತಿಗಳು ಹೊರಬರಲೆಂದು ಶುಭ ಹಾರೈಸುವೆ ಎಂದು ಯುವ ಸಾಹಿತಿಗಳು ವಿಶ್ವನಾಥ ಅರಬಿ ಅವರು ಹೇಳಿದ್ದಾರೆ
©2024 Book Brahma Private Limited.