‘ಗುರುವಚನ ಪ್ರಸಾದ’ ಎ.ಎಲ್ ದೇಸಾಯಿ ಅವರ ಕೃತಿಯಾಗಿದೆ. ಆಧುನಿಕ ವಚನಗಳನ್ನು ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೊಟಗಿ ಮಠದ ಶ್ರೀಗಳನ್ನು ಮೊದಲು ಮಾಡಿಕೊಂಡು ಬಹಳಷ್ಟು ಮಠಾಧೀಶರು ಆಧುನಿಕ ವಚನಗಳನ್ನು ಬರೆದಿರುವರು. ಅವರು ಬರೆಯುವುದು ಸಹಜ. ಏಕೆಂದರೆ ಸದಾ ಅಧ್ಯಾತ್ಮದಲ್ಲಿ ಓದಿನಲ್ಲಿ ಅವರು ತೊಡಣಸಿಕೊಂಡಿರುವರು. ಸಹಜವಾಗಿಯೇ ಇಂದಿನ ಮಠದ ಶರಣರು ವಚನಗಳನ್ನು ತಮ್ಮ ಅಂಕಿತನಾಮದಲ್ಲಿ ಬರೆಯುವುದನ್ನು ಕಾಣುತ್ತೇವೆ. ಶ್ರೀಸಾಮಾನ್ಯರಲ್ಲಿ ಪುರುಷರಷ್ಟೇ ಮಹಿಳೆಯರೂ ಆಧುನಿಕ ವಚನಗಳನ್ನು ಬರೆಯುತ್ತಿದ್ದಾರೆ. ವಚನಕಾರರು ಷಟ್ಟಣ ಅಥವಾ ತ್ರಿಪದಿಗಳಲ್ಲಿ ವಚನಗಳನ್ನು ಬರೆದಂತೆ ಅದೇ ಮಾದರಿಯಲ್ಲಿ ಆಧುನಿಕ ವಚನಗಳನ್ನು ಬರೆಯುತ್ತಿದ್ದಾರೆ. ಎ.ಎಲ್. ದೇಸಾಯಿ ಒಬ್ಬ ತಬಲಾ ವಾದ್ಯದ ಪದವೀಧರರಾಗಿ, ಅದರಲ್ಲಿಯೇ ಮಹಾಪ್ರಬಂಧ ಬರೆದು ಪಿಎಚ್.ಡಿ ಪದವಿಯನ್ನು ಹೊಂದಿ, ಕರ್ನಾಟಕ ವಿಶ್ವವಿದ್ಯಾಲಯದ ಲಅತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದಲ್ಲಿ ತಬಲಾ ವಿಷಯದ ಅರೆಕಾಲಿಕ ಸಂಗೀತ ಉಪನ್ಯಾಸಕರಾಗಿ ಕಾರ್ಯಮಾಡುತ್ತಲೇ ಸಾಹಿತ್ಯ ಕೃಷಿಯನ್ನು ಮಾಡುತ್ತಿರುವುದು ವಿಶೇಷ. ತಬಲಾ ಕಲಿಕೆಗೆ ಸಂಬಂಧಿಸಿದಂತೆ ಕಲಿಕಾರ್ಥಿಗಳ ಅಧ್ಯಯನಕ್ಕಾಗಿ ಅತ್ಯಂತ ಉಪಯುಕ್ತ ನಾಲ್ಕು ಕೃತಿಗಳನ್ನು ಪ್ರಕಟಿಸಿರುವರು. ಒಳ್ಳೆಯ ಭಕ್ತಿ ಮತ್ತು ಭಾವ ಗೀತೆಗಳನ್ನು ರಚಿಸಿ, ಸಂಗೀತ ಸಂಯೋಜನೆ ಮಾಡಿಸಿ, ಅವು ಜನಮನ್ನಣೆಯನ್ನು ಪಡೆದುಕೊಂಡಿವೆ. ಈಗ ದೇಸಾಯಿವರು ಒಂದು ಹೆಜ್ಜೆ ಮುಂದೆ ಹೋಗಿ 'ಗುರುಪುಟ್ಟ ಹೈಯಾಳಅಂಗೇಶ್ವರ' ಎಂಬ ಅಂಕಿತ ನಾಮದಲ್ಲಿ ಅನುಭವ ಮತ್ತು ಅನುಭಾವದಿಂದ ಮೂಡಿದ ವಚನಗಳನ್ನು ರಚಿಸಿದ್ದಾರೆ. ಅವುಗಳನ್ನು 'ಗುರುವಚನ ಪ್ರಸಾದ' ಈ ಕೃತಿಯ ಮೂಲಕ ಓದುಗರ ಕೈಗೆ ಇಡಲು ಮುಂದಾಗಿದ್ದು ಅಭಿನಂದನೀಯ ಕಾರ್ಯ ಎಂದು ಶಂಕರ ಹಲಗತ್ತಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.