ಎ.ಎಲ್ ದೇಸಾಯಿ ಅವರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದವರು. ತಂದೆ ಲಿಂಗಣ್ಣ ದೇಸಾಯಿ ತಾಯಿ ತಾರಮ್ಮ ದೇಸಾಯಿ . ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತು ಮುಂದೆ ಪ್ರೌಢ ಶಾಲೆಯನ್ನು ತಮ್ಮ ತಾಯಿಯವರ ಊರಾದ ಸಗರ ಗ್ರಾಮದಲ್ಲಿ ಕಲಿತರು. ಪದವಿಪೂರ್ವ ಶಿಕ್ಷಣವನ್ನು ಶಹಾಪೂರದಲ್ಲಿ ಮತ್ತು ಪದವಿ ಶಿಕ್ಷಣ ಹಾಗೂ ಸಂಗೀತವನ್ನು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಶ್ರಮ ಪದ್ದತಿಯಲ್ಲಿ ಪಡೆದು, ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾಗಿ ಸಂಗೀತ ಮತ್ತು ಸಾಹಿತ್ಯದ ಕ್ಷೇತ್ರದಲ್ಲಿ ತೊಡಗಿಕೊಂಡು ಎಂ.ಎ.ಸಂಗೀತ(ತಬಲಾ) ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಹಾಗೂ ‘ದಿಲ್ಲಿ ಘರಾಣೆ ಹಾಗೂ ಪ್ರಸ್ತುತ ತಬಲಾ ವಾದನದ ತೌಲಿನಕ ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ‘ಗುಬ್ಬಚ್ಚಿಗೂಡು’ ಮಕ್ಕಳ ಮಾಸ ಪತ್ರಿಕೆಯಲ್ಲಿ ಸಂಗೀತ ‘ಲೋಕ ನಿಗೆಷ್ಟು ಗೊತ್ತು’ ಎಂಬ ಅಂಕಣವನ್ನು ಸತತವಾಗಿ ಐದು ವರ್ಷಗಳಿಂದ ಬರೆಯಲಾಗುತ್ತಿದೆ. ಸದ್ಯ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದಲ್ಲಿ ಸಹಾಯಕ ತಬಲಾ ಉಪನ್ಯಾಸಕನಾಗಿ ಸೇವೆಲ್ಲಿದ್ದು. ಲಲಿತಕಲಾ ಪ್ರತಿಭಾನ್ವೇಷಣ ಮಹಾವಿದ್ಯಾಲಯವನ್ನು ಶ್ರೀ ಶಂಕರ ಹಲಗತ್ತಿ ಗುರುಗಳ ಮಾರ್ಗದರ್ಶನದಲ್ಲಿ ಸ್ಥಾಪಿಸಿ ರಾಜ್ಯಾದಾದ್ಯಂತ ಸಂಗೀತದ ಪರೀಕ್ಷೆಗಳನ್ನು ನಡೆಸುವ ಕಾರ್ಯದ ನೆತೃತ್ವವನ್ನು ವಹಿಸಿಕೊಂಡು ಸಂಗೀತ, ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.