‘ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು’ ಕೃತಿಯು ಶೋಭಾ ಟಿ. ತಪಶಿ ಅವರ ಸಂಶೋಧನಾ ಗ್ರಂಥವಾಗಿದೆ. ಈ ಸಂಶೋಧನಾ ಮಹಾಪ್ರಬಂಧದಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಕೃತಿಗೆ ಮುನ್ನುಡಿ ಬರೆದಿರುವ ಧನವಂತ ಹಾಜವಗೋಳ ಅವರು, ‘ಮೊದಲ ಅಧ್ಯಾಯ ಅಧ್ಯಯನದ ಉದ್ದೇಶ, ಸ್ವರೂಪ ವ್ಯಾಪ್ತಿ ಒಳಗೊಂಡಿದ್ದು, ಇದರಲ್ಲಿ ಈ ತಲೆಬರಹವನ್ನಿಟ್ಟುಕೊಂಡು ಅಧ್ಯಯನ ಮಾಡುವ ಅನಿವಾರ್ಯತೆಯನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮಹಾಪ್ರಬಂಧವನ್ನು ಸಿದ್ಧಗೊಳಿಸಲು ಹಲವು ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ ಸ್ಥಳನಾಮಗಳಿಗೆ ಸಂಬಂಧಿಸಿದ ಸಾಹಿತ್ಯಾವಲೋಕನವನ್ನು ಮಾಡಲಾಗಿದೆ. ಅಲ್ಲದೆ, ಈ ಜಿಲ್ಲೆಯನ್ನು ಹೊರತುಪಡಿಸಿ ರಚನೆಯಾದ ಸ್ಥಳನಾಮಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಅವಲೋಕನ ಮಾಡಿದ್ದಾರೆ. ಈ ಅಧ್ಯಯನ ಸ್ವರೂಪದಲ್ಲಿ ಕ್ಷೇತ್ರಕಾರ್ಯ ಮಾಡಿ ಮಾಹಿತಿಯನ್ನು ಸಂಗ್ರಹಿಸಿದ ವಿವರಗಳನ್ನು ಕೊಟ್ಟಿದ್ದಾರೆ. ಅದರೊಂದಿಗೆ ಉಪಲಬ್ದವಾದ ಗ್ರಂಥಗಳು, ಶಾಸನಗಳು, ಪತ್ರಿಕೆಯಲ್ಲಿ ಪ್ರಕಟವಾದ ಬಿಡಿ ಲೇಖನಗಳು ಹಾಗೂ ಸ್ಥಳನಾಮಗಳಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿಗಳ ದಾಖಲಾತಿಗಳನ್ನು ಈ ಪ್ರಬಂಧ ರಚನೆಗೆ ಆಕರವಾಗಿ ಬಳಸಿಕೊಂಡಿರುವುದು ಅವರ ಕ್ಷೇತ್ರಕಾರ್ಯದ ಪರಿಶ್ರಮ ಕಾಣುತ್ತದೆ. ಇಲ್ಲಿಯ ಅಧ್ಯಾಯಗಳ ವಿಂಗಡನೆ ಆಯಾ ಅಧ್ಯಾಯಗಳು ಒಳಗೊಂಡ ವಿಷಯ ವಿವರಣೆಯನ್ನು ಸ್ಪಷ್ಟಪಡಿಸಿದ್ದಾರೆ. ಇದು ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಅಧ್ಯಯನವಾದ್ದರಿಂದ ಈ ಜಿಲ್ಲೆಯ ವ್ಯಾಪ್ತಿಯನ್ನು ನಿಗದಿಪಡಿಸಿಕೊಂಡು ಅಧ್ಯಯನ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.