ಶೋಭಾ ಹರಿಪ್ರಸಾದ್ ರವರು ತಮ್ಮ ಸುಬ್ಬಕ್ಕನ ವಚನಗಳು ಎಂಬ ಕೃತಿಯಲ್ಲಿ ವೈವಿಧ್ಯಮಯ ವಿಚಾರಗಳನ್ನು ಹೇಳಿದ್ದಾರೆ. ಲೋಕ ನೀತಿ, ಬೋಧನೆ, ಜನಗಳ ವ್ಯವಹಾರ, ಸ್ವಾರ್ಥ, ಪರೋಪಕಾರ ಅಲ್ಲದೆ ವಿವೇಕರಹಿತವಾದ ಡೊಂಕು ವರ್ತನೆಗಳಿಗೆ ಬುದ್ಧಿ ಹೇಳುವ ಆಶಯಗಳು ಇಲ್ಲಿ ಮಿಳಿತವಾಗಿವೆ. ಬಹುಶಃ ಈ ವಚನವು ಎಲ್ಲಾ ವಚನಗಳ ಸಾರದಂತಿದೆ. ನಮ್ಮ ಲೋಭದ ಸಲುವಾಗಿ ಸಂಬಂಧಗಳ ಬಳ್ಳಿಯನ್ನು ಕತ್ತರಿಸಬಾರದು. ಬದಲಿಗೆ ಪೋಷಿಸಬೇಕು. ಆಧಾರವಾಗಿರುವ ಮರವನ್ನೇ ಕಡಿಯುವುದು ಸಲ್ಲದು. ಇದು ಕೊಡಲಿಯ ಕಾವು ಹಲಕ್ಕೆ ಮೃತ್ಯು ಎಂಬ ಗಾದೆಯನ್ನು ನೆನಪಿಗೆ ತರುತ್ತದೆ. ಈ ಲೋಕದಲ್ಲಿ ಬದುಕಬೇಕಾದರೆ ನಾವು ಭಗವಂತನಿಗೆ ಕೊಡುವ ಬಾಡಿಗೆ' ಎಂದರೆ ನಾಲ್ಕು ಜನಗಳಿಗೆ ಉಪಕಾರ ಮಾಡುವುದು ಎಂಬ ಕೈಲಾಸಂರವರ ನಾಟಕದ ಮಾತುಗಳು ಇಲ್ಲಿ ನೆನಪಾಗುತ್ತದೆ. ಒಳ್ಳೆಯತನ ಇರಲಿ' ಎಂಬುದು ಸರ್ವಕಾಲಕ್ಕೂ ಪೂಜನೀಯವಾದ ನುಡಿಯಾಗಿದೆ. ವಚನಗಳು ಮನಸಿಗೆ ಮುದ ಕೊಡುತ್ತವೆ. ಇಲ್ಲಿ ಇರುವ ಹಲವಾರು ವಚನಗಳಲ್ಲಿ ಪ್ರಾದೇಶಿಕತೆಯ ಸೊಗಡಿದೆ. ವಚನಕಾರ್ತಿ ತುಳು ನಾಡಿನ ಹಲವು ವಿಚಾರಗಳನ್ನು ತಮ್ಮ ವಚನಗಳಲ್ಲಿ ಬಳಸಿಕೊಂಡಿದ್ದಾರೆ. ಇವುಗಳನ್ನು ಒಟ್ಟಿಗೆ ಓದುವುದಕ್ಕಿಂತಾ ಆಗಾಗ ನೆನಪಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಸಂದರ್ಭಕ್ಕೆ ತಕ್ಕ ಹಾಗೆ ಇಲ್ಲಿನ ವಚನಗಳು ನೊಂದ ಮನಕ್ಕೆ ಪರಿಹಾರವನ್ನು ನೀಡುತ್ತವೆ. ಸಂದರ್ಭಗಳಿಗೆ ಸಾಕ್ಷಿಯನ್ನು ಒದಗಿಸುತ್ತವೆ. ಕೆಲವು ಪ್ರಾದೇಶಿಕ ಪದಗಳು ಅರ್ಥಗಳನ್ನು ಬಯಸುತ್ತವೆ ಒಟ್ಟಿನಲ್ಲಿ - ಸುಬ್ಬಕ್ಕನ ವಚನಗಳು ಚಿತ್ತಾಪಹಾರಿಯಾಗಿವೆ ಇವುಗಳನ್ನು ಕನ್ನಡದ ಸಹೃದಯರು ಆತ್ಮೀಯವಾಗಿ ಬರಮಾಡಿಕೊಳ್ಳಬೇಕೆಂದು ಕೋರುತ್ತೇನೆ ಎಂದು ಟಿ. ಎನ್ ಶಿವಕುಮಾರ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.