ಶರಣ ಕ್ರಾಂತಿ: ವಿಭಿನ್ನ ಪ್ರತಿಕ್ರಿಯೆಗಳು

Author : ಬಸವರಾಜ ಸಾದರ

Pages 150

₹ 120.00




Year of Publication: 2020
Published by: ಲಡಾಯಿ ಪ್ರಕಾಶನ
Address: # ಪ್ರಸಾದ ಹಾಸ್ಟೆಲ್, ಗದಗ
Phone: 9480286844

Synopsys

ಡಾ. ಬಸವರಾಜ ಸಾದರ ಅವರ ಕೃತಿ-ಶರಣ ಕ್ರಾಂತಿ: ವಿಭಿನ್ನ ಪ್ರತಿಕ್ರಿಯೆಗಳು. ಶರಣರ ಚಳವಳಿಯನ್ನು ಕ್ರಾಂತಿ ಎಂದು ಒಪ್ಪಿಕೊಳ್ಳದೇ ಅದೊಂದು ಗುಂಪಿನ ನಿರ್ಲಕ್ಷಿತ ಗಲಾಟೆ ಎಂಬಂತೆ ಅರ್ಥೈಸಲಾಗುತ್ತಿರುವ ಇಂದಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಲೇಖಕರು ನಾಡಿನ 15 ಖ್ಯಾತ ಬರಹಗಾರರ ಚಿಂತನೆಗಳನ್ನುಸಂದರ್ಶನಗಳ ಮೂಲಕ  ಸಂಗ್ರಹಿಸಿ, ಸಂಪಾದಿಸಿ ಓದುಗರಿಗೆ ನೀಡಿದ ಮಹತ್ವದ ಕೃತಿ ಇದು.

ಈ ಚಿಂತನೆಗಳ ಹರಿವು ಪ್ರಶ್ನೋತ್ತರ ರೂಪದಲ್ಲಿವೆ. ವಚನ ಚಳವಳಿಯ ತಾತ್ವಿಕತೆ, ಅದರ ಹಿಂದಿನ ಪ್ರೇರಣೆ, ಅದು ಪಡೆದ ಸ್ವರೂಪ-ಪರಿಣಾಮ ಇತ್ಯಾದಿ ವಿಷಯಗಳ ಕುರಿತು ಸುದೀರ್ಘವಾಗಿ ಮತ್ತು ಅಷ್ಟೇ ಗಂಭೀರವಾಗಿ ಚರ್ಚಿಸುವ ಇಲ್ಲಿಯ ಚಿಂತನೆಗಳು, ಸಂಶೋಧನೆಯ ಒಳನೋಟಗಳಿಗೂ ವಿಫುಲ ಅವಕಾಶ ನೀಡುತ್ತವೆ. 

About the Author

ಬಸವರಾಜ ಸಾದರ
(20 July 1955)

ಕವಿ, ಕಥೆಗಾರ ಹಾಗೂ ಹೆಸರಾಂತ ಪ್ರಸಾರತಜ್ಞ ಡಾ. ಬಸವರಾಜ ಸಾದರ ಹುಟ್ಟಿದ್ದು 1955 ರ ಜುಲೈ 20 ರಂದು,  ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ. ಮೂಲತಃ ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಉನ್ನತ ಶ್ರೇಣ ಯಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ  ಎಂ. ಎ. ಪದವಿ ಪಡೆದಿದ್ದಾರೆ. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ಎಂಬ ವಿಷಯ ಕುರಿತ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಪಡೆದಿರುವ ಇವರು, ರ್ಯಾಂಕ್ ಹಾಗೂ ಮತ್ತೊಂದು ಚಿನ್ನದ ಪದಕದೊಂದಿಗೆ ಡಿಪ್ಲೋಮಾ-ಇನ್-ಬಸವ ಸ್ಟಡೀಜ್‍ನ್ನೂ ಪೂರೈಸಿದ್ದಾರೆ. 1984 ರಲ್ಲಿ ಕಾರ್ಯಕ್ರಮ ನಿರ್ವಾಹಕನೆಂದು ...

READ MORE

Reviews

ಶರಣ ಕ್ರಾಂತಿ ; ವಿಭಿನ್ನ ಪ್ರತಿಕ್ರಿಯೆಗಳು ಕೃತಿಯ ವಿಮರ್ಶೆ

ವಚನ ಚಳವಳಿ ಅಥವಾ ಶರಣ ಕ್ರಾಂತಿ ಎಂದೆಲ್ಲ ಕರೆಯುವ 12ನೇ ಶತಮಾನದ ಬಹುಮುಖ್ಯ ವಿದ್ಯಮಾನದ ಕುರಿತು 'ಶರಣ ಕ್ರಾಂತಿ: ವಿಭಿನ್ನ ಪ್ರತಿಕ್ರಿಯೆಗಳು' ಎಂಬ ಶೀರ್ಷಿಕೆಯಡಿ ಇಲ್ಲಿ ನಾಡಿನ15 ಚಿಂತಕರ ಅಭಿಪ್ರಾಯಗಳನ್ನು ಪ್ರಶೋತ್ತರ ರೂಪದಲ್ಲಿ ದಾಖಲಿಸಲಾಗಿದೆ.

ಸಮಾಜದ ಪರಿಕಲ್ಪನೆಯ ಆಶಯದೊಂದಿಗೆ ಸಮಾಜದ ಪ್ರಗತಿ, ಶೋಷಣಾರಹಿತ ವ್ಯವಸ್ಥೆಗಾಗಿ ನಡೆದ ವಚನ ಚಳವಳಿಯನ್ನು 'ಕ್ರಾಂತಿ' ಎಂದು ಪರಿಗಣಿಸದೆ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದು ಇಡೀ ಚಳವಳಿಯನ್ನೆ ನೆಗ್ಲೇಟ್ ಮಾಡಿದಂತೆ ಎಂಬುದು ಲೇಖಕರ ಖಚಿತ ನಿಲುವು ಆಗಿದೆ. ಈ ದಿಕ್ಕಿನಲ್ಲಿ ತೋರುವ 'ಹಿಂಜರಿಕೆ'ಯ ಮನೋಧರ್ಮವನ್ನು ಈ ಕೃತಿ ಪ್ರಶ್ನಿಸುತ್ತದೆ.

ವಚನ ಚಳವಳಿಯ ಹಿಂದಿನ ತಾತ್ವಿಕತೆ, ಪ್ರೇರಣೆ, ಅದರ ಹಿಂದಿದ್ದ ಸಾಂದರ್ಭಿಕ ಒತ್ತಡ, ಚಳವಳಿಯ ಸ್ವರೂಪ, ವಿನ್ಯಾಸ, ಭಾಷೆ, ಕನ್ನಡ ಸಾಹಿತ್ಯ ಅದರಿಂದ ಪಡೆದ ಪ್ರೇರಣೆ, ಚಳವಳಿ ಸಂದರ್ಭದಲ್ಲಿ ತೀವ್ರವಾಗಿ ಕಾಡುವ ಘಟನೆ, ಅತೀ ಮುಖ್ಯವೆನಿಸುವ ವಚನ, ಸೈದ್ದಾಂತಿಕ ಧೋರಣೆ-ಮಿತಿ, ಒಂದು ಧರ್ಮ ಅಥವಾ ಜಾತಿಗೆ ಅಂಟಿಕೊಂಡ ಬಗೆ ಮತ್ತು ಅದಕ್ಕೆ ಕಾರಣವಾದ ಸಂಗತಿಗಳು... ಹೀಗೆ ಹತ್ತು ಹಲವು ವಿಷಯಗಳು ಪ್ರಶೋತ್ತರಗಳ ರೂಪದಲ್ಲಿ ಕೃತಿಯಲ್ಲಿ ದಾಖಲುಗೊಂಡಿದೆ. 

ವಚನ ಚಳವಳಿ ಪ್ರಸ್ತುತತೆ ಕುರಿತು ಉತ್ತರಿಸುತ್ತ ಬರಗೂರು, 'ವಚನ ಚಳವಳಿಯನ್ನು ಮರೆತು ನಾವು ಮುಂದೆ ಹೋಗುವಂತಿಲ್ಲ' ಎಂದರೆ ಚಂಪಾ, ಎದುರಿಗಿರುವ 'ವಾಸ್ತವ'ವನ್ನು ಅಮೂಲಾಗ್ರವಾಗಿ ಬದಲಿಸುವಲ್ಲಿ ನಡೆಯುವ ಪ್ರಜ್ಞಾಪೂರ್ವಕ ಸಂಘರ್ಷ ಯಾವುದೇ ದೇಶದ ಚಳವಳಿಗೆ ಸದಾ ಪ್ರಸ್ತುತ' ಎಂಬ ಅಭಿಪ್ರಾಯ ಮಂಡಿಸುತ್ತಾರೆ.

'ವಚನ ಸಾಹಿತ್ಯ ಒಂದು ಜಾತಿಯ ಆಸ್ತಿಯಂತಾಗಿದ್ದು ಅದನ್ನು ಜಾತಿಯ ಬಂಧದಿಂದ ಬಿಡುಗಡೆಗೊಳಿಸದೆ ಸಮಾಜವಾದದೊಂದಿಗೆ ತುಲನೆ ಮಾಡಲಾಗದು' ಎನ್ನುವ ಡಿ.ಎಸ್.ನಾಗಭೂಷಣ್, 'ದೇಹವನ್ನೆ ಕೇಂದ್ರವಾಗಿಟ್ಟುಕೊಂಡು ತನ್ನ ಅಧ್ಯಾತ್ಮ ಕಟ್ಟಿಕೊಳ್ಳುವ ವಚನ ಚಳವಳಿಯ ಪರಿ ಸಮಾಜವಾದಿ ತಾತ್ವಿಕತೆಗೆ ಹತ್ತಿರವಾದದ್ದು ಎಂದು ವಿಶ್ಲೇಷಿಸುತ್ತಾರೆ.

ವಚನ ಕಾವ್ಯವೆ, ಶಾಸ್ತವೆ ಎಂಬ ಪ್ರಶ್ನೆಗೆ ಉತ್ತರಿಸುತ್ತ, ಎಚ್.ಎಸ್.ಶಿವಪ್ರಕಾಶ್, “ವಚನಗಳಲ್ಲಿ ಕಾವ್ಯದ ಜೊತೆ ಶಾಸ್ತಾತ್ಮಕತೆಯೂ ಉಂಟು. ನುಡಿಯಿಂದ ದೂರವಾದ ಕಾವ್ಯವನ್ನು ವಚನಕಾರರು ಖಂಡಿಸಿದರು' ಎಂದಿರುವುದು ಗಮನಾರ್ಹವಾಗಿದೆ. ಶರಣ, ದಲಿತ ಚಳವಳಿ ಖಂಡಿಸಿದ ಮಾರ್ಗಗಳ ಕುರಿತು ಮಾತನಾಡುತ್ತ ಅರವಿಂದ ಮಾಲಗತ್ತಿ, 'ಶರಣ ಚಳವಳಿಗೆ ಭಕ್ತಿಯೆ ಜೀವಾಳವಾಗಿದೆ. ದಲಿತ ಚಳವಳಿ ಭಕ್ತಿ ಮಾರ್ಗವನ್ನು ನಿರಾಕರಿಸಿ ವಾಸ್ತವತೆಯನ್ನೆ ಪ್ರಧಾನವಾಗಿಟ್ಟುಕೊಂಡಿದೆ' ಎನ್ನುತ್ತ ಸಮಗ್ರ ಕ್ರಾಂತಿ ಘಟಿಸಿದ್ದೆ ಆಗಿದ್ದಲ್ಲಿ 12ನೇ ಶತಮಾನದಲ್ಲಿ ಎದುರಿಸಿದ್ದ ಸಾಮಾಜಿಕ ಸಮಸ್ಯೆಗಳನ್ನೆ ಇಂದೂ ಎದುರಿಸುವ ಸ್ಥಿತಿ ಬರಬಾರದಿತ್ತು ಎಂಬ ಮುಖ್ಯ ಪ್ರಶ್ನೆಯನ್ನು ಎತ್ತುತ್ತಾರೆ.

ವಚನ ಚಳವಳಿಯಲ್ಲಿನ ಸೀ ವಾದದ ನೆಲೆಗಳ ಕುರಿತ ಪ್ರಶ್ನೆಗೆ, 'ಹೆಣ್ಣಿನ ಪ್ರಶ್ನೆಯೆ ಮೂಲ ಕೇಂದ್ರವಾದ ಚಳವಳಿ ಯಾವುದಾದರೂ ಇದೆಯಾ' ಎಂಬ ಮರು ಪ್ರಶ್ನೆಯನ್ನು ಎಂ.ಎಸ್.ಆಶಾದೇವಿ ಮುಂದಿಡುತ್ತಾರೆ. ಇದೇ ಹೊತ್ತಿಗೆ 'ವೈರಾಗ್ಯಕ್ಕಿಂತ 'ಸಂಸಾರ' ಶ್ರೇಷ್ಟ ಎಂದು ಪ್ರತಿಪಾದಿಸುವ ಮೂಲಕ ವಚನ ಸಾಹಿತ್ಯ ಕನ್ನಡ ಜಗತ್ತಿನ ಲೋಕ ಮೀಮಾಂಸೆಯನ್ನೆ ಬದಲಿಸುವ ಶಕ್ತಿ ಪಡೆಯಿತು' ಎಂಬುದನ್ನು ಗುರುತಿಸಿದ್ದಾರೆ.

'ಸರಳವಾದ ಭಾಷೆಯನ್ನು ಗಂಭೀರ ಪ್ರಶ್ನೆಯನ್ನು ಕೇಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ವಚನ ಚಳವಳಿಯ ಹೆಗ್ಗಳಿಕೆ' ಎನ್ನುವ ಪುರುಷೋತ್ತಮ ಬಿಳಿಮಲೆ, ಅದೇ ಹೊತ್ತಿಗೆ ಈ ಚಳವಳಿ ಪತನ ಸಂಸ್ಕೃತಿಯ ಭಾಗವಾದ ಬಗ್ಗೆ ಗಾಢ ವಿಷಾದ ಸೂಚಿಸುತ್ತಾರೆ. ಮಾಲಗತ್ತಿ ವಚನ ಸಾಹಿತ್ಯದಲ್ಲಿ ಬಳಕೆಯಾಗಿರುವ ಭಾಷೆಯನ್ನು “ಕರಳುಬಳ್ಳಿಯ ಬಂಧುತ್ವದ ಭಾಷೆ' ಎಂದು ಕರೆದಿರುವುದು ವಿಶಿಷ್ಟವಾಗಿದೆ.

ಸಿದ್ದಲಿಂಗಯ್ಯ ಅವರಿಗೆ ಶರಣ ವೈಚಾರಿಕತೆಯೊಂದೆ ಬಿಡುಗಡೆಯ ಮಾರ್ಗವಾಗಿ ಕಂಡಿದ್ದರೆ, ಮಹತ್ ತರಿಕೆರೆ ಅವರಿಗೆ ವಚನ ಚಳವಳಿಯನ್ನು ಕೇವಲ ಸಾಹಿತ್ಯಕ ನೆಲೆಯಿಂದ ನೋಡುವುದು ಒಂದು ಮಿತಿಯಾಗಿ ಕಾಣಿಸಿದೆ. ವಚನ ಸಾಹಿತ್ಯದಲ್ಲಿನ ದಲಿತ, ಸ್ತ್ರೀ ಸಂವೇದನೆಗಳನ್ನು ಸರಳೀಕೃತಗೊಳಿಸುವ ಅಪಾಯಗಳ ಬಗ್ಗೆ ಒ.ಎಲ್.ನಾಗಭೂಷಣ ಸ್ವಾಮಿ ಮಾತನಾಡಿದ್ದಾರೆ.

ವಚನಗಳ ಅಧ್ಯಯನಕ್ಕೆ ಎಚ್.ಎಸ್.ರಾಘವೇಂದ್ರ ರಾವ್ ತೋರಿಸಿರುವ ದಾರಿಗಳು ಮಹತ್ವದ್ದಾಗಿದೆ. ವಚನಗಳ ಅನ್ವಯಿಕತೆ ಕುರಿತು ಅವರು ಮಾತನಾಡುತ್ತ, 'ವಚನಗಳು ನಮ್ಮ ಪ್ರಜ್ಞೆಯ ಭಾಗ, ಸಾಮಾಜಿಕ ನಡವಳಿಕೆಯ ಪ್ರೇರಕವಾಗದೆ ಇದ್ದರೆ ಹೆಚ್ಚಿನದೇನೂ ಆಗುವುದಿಲ್ಲ' ಎಂದಿರುವುದು ಮುಖ್ಯವಾದ ಮಾತಾಗಿ ಕಾಣುತ್ತದೆ.

ವಚನ ಚಳವಳಿ ತೀವ್ರ ತುಡಿತದ ನೋವಿನಿಂದ ಕೂಡಿದ ಸತ್ಯದ ಜೊತೆಗಿನ ಪ್ರಯೋಗಗಳ ಅಭಿವ್ಯಕ್ತಿ ಎಂದು ರಾಜೇಂದ್ರ ಚೆನ್ನಿ ವಿಶ್ಲೇಷಿಸಿದರೆ, ಅಕ್ಕಮಹಾದೇವಿಯ ಸ್ತ್ರೀ ಸಮಾನತೆಯ ಧ್ವನಿ ಆಂಶಿಕ ಪ್ರತೀಕವೆ ಹೊರತು ವಾಸ್ತವವಲ್ಲ ಎಂದು ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟಿದ್ದಾರೆ. ನಟರಾಜ್ ಹುಳಿಯಾರ್ ತಮ್ಮ 'ಮುಂದಣ ಕಥನ' ನಾಟಕಕ್ಕೆ ಈ ಒಂದು ವಚನದ ಸಾಲೆ ಹೇಗೆ ಪ್ರೇರಣೆಯಾಯಿತು ಎಂಬುದನ್ನು ವಿವರಿಸಿದ್ದಾರೆ.

ಒಟ್ಟಾರೆಯಾಗಿ ವಚನ ಚಳವಳಿ, ವಚನ ಸಾಹಿತ್ಯದ ಕುರಿತು ಅಧ್ಯಯನ ಮಾಡುವವರಿಗೆ ಈ ಕೃತಿ ಮಾರ್ಗಸೂಚಿಯಾಗುವಂತಿದೆ. ಸಂದರ್ಶನಕ್ಕೆ ಒಳಪಟ್ಟ ಲೇಖಕರು ಪ್ರತಿಪಾದಿಸಿರುವ ವಿಷಯ ವೈವಿಧ್ಯತೆಯಿಂದ ಕೂಡಿದ್ದು ಅವರು ಬಳಸಿರುವ ಭಾಷೆ ವಿಮರ್ಶೆಯ ಭಾಷೆಯ 'ವಿಸ್ಮಯ'ದ ಸೂಚನೆಯಂತಿದೆ. ಸಂದರ್ಶನಕ್ಕೆ ಒಳಗಾದ ಲೇಖಕರ ಪಟ್ಟಿಯಲ್ಲಿ ನಟರಾಜ ಬೂದಾಳು ಅವರು ಸೇರದಿರುವುದು ಆಶ್ಚರ್ಯ ತಂದಿದೆ.

(ಕೃಪೆ: ಹೊಸ ಮನುಷ್ಯ ಡಿಸೆಂಬರ್‌ 2021, ಬರಹ- ಎಂ ರಾಘವೇಂದ್ರ)

Related Books