ಸರ್ಕಾರಿ ಶಾಲೆಗಳ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸುವ ಕವಯಿತ್ರಿಯ ಧ್ವನಿಯಾಗಿರುವ ಕೃತಿ ಲೇಖಕಿ ಭಾಗ್ಯ ಮಂಜುನಾಥ್ ಅವರ ‘ನಾ ನೆಪಮಾತ್ರ ನೀ ಲಿಪಿಕಾರ’. ಕವಯತ್ರಿ ತಮ್ಮ ಆಧುನಿಕ ವಚನವೊಂದರಲ್ಲಿ ವಿದ್ಯೆಗೆ ಭೇಧ ಭಾವವಿಲ್ಲ ಎಂದು ಹೇಳುತ್ತಾ ನೀರನ್ನು ಚಿನ್ನದ ಲೋಟದಲ್ಲೇ ಹಾಕಿದರೂ ಮಣ್ಣಿನ ಲೋಟದಲ್ಲೇ ಹಾಕಿದರೂ ನೀರಿನ ಗುಣ ಹೇಗೆ ಬದಲಾಗುವುದಿಲ್ಲವೋ ಹಾಗೇ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತರೆ ಖಾಸಗೀ ಶಾಲೆಯೇ ಆಗಿರಲಿ ಅಥವಾ ಸರ್ಕಾರಿ ಶಾಲೆಯೇ ಆಗಿರಲಿ ವಿದ್ಯೆ ಭೇದವಿಲ್ಲದೆ ಒಲಿಯುತ್ತದೆ ಎಂದು ತಿಳಿಸುತ್ತಾರೆ. ಹಾಗೇ ದಲಿತರ ಅಸ್ಪೃಶ್ಯತೆಯ ಬಗ್ಗೆ ಹೇಳುತ್ತಾ, ಅವರ ಮನೆ ಮುಸುರೆ ಕುಡಿದ ಹಸುವಿನ ಹಾಲು , ಉತ್ತು ಬಿತ್ತಿ ತೆಗೆದ ಬೆಳೆ, ಕಟ್ಟಿದ ಮನೆ, ಆತ ತೋಡಿದ ಬಾವಿಯ ನೀರು ಇವುಗಳು ಸ್ಪರ್ಶಕ್ಕೆ ಯೋಗ್ಯವಾದವು ಎಂದಾದರೆ ದಲಿತ ಜಾತಿಯಲ್ಲಿ ಹುಟ್ಟಿದ ಮನುಷ್ಯ ಮಾತ್ರ ಹೇಗೆ ಸ್ಪರ್ಶಕ್ಕೆ ಯೋಗ್ಯವಿಲ್ಲದವನಾಗುತ್ತಾನೆ ಎನ್ನುವ ಅವರ ವಚನದಲ್ಲಿ ಅಸ್ಪೃಶ್ಯತೆಯ ಬಗ್ಗೆ ಅವರಿಗಿರುವ ಆಸ್ಥೆ ಎಷ್ಟೆoಬುದನ್ನು ಕಾಣಬಹುದು. ಸಮಾಜದ ಬಗ್ಗೆ ಹೇಳುವಂತೆ ಸಮಾಜ ಒಂದು ಕನ್ನಡಿಯಿದ್ದಂತೆ ಅವರ ಭಾವನೆಗಳು ನಮ್ಮ ನಡೆ, ನುಡಿಯ ಮೇಲೆ ನಿರ್ಧಾರವಾಗುತ್ತವೆ ನಡೆ ನುಡಿ ಉತ್ತಮವಾಗಿದ್ದರೆ ಉತ್ತಮ ಪ್ರತಿಬಿಂಬ, ತಪ್ಪಾಗಿದ್ದರೆ ಕೆಟ್ಟ ಪ್ರತಿಬಿಂಬವನ್ನು ಕಾಣಬೇಕಾಗುತ್ತದೆ ಹಾಗಾಗಿ ನಮ್ಮ ನಡೆ ನುಡಿಗಳನ್ನು ನಾವು ಸರಿಪಡಿಸಿಕೊಳ್ಳಬೇಕೆ ಹೊರತು ಸಮಾಜವೆಂಬ ಕನ್ನಡಿಯನ್ನು ದೂಷಿಸಬಾರದು * ಎಂಬ ಕಳಕಳಿಯ ಸಂದೇಶವನ್ನೂ ವಚನದಲ್ಲಿ ಹೇಳಿದ್ದಾರೆ. ಹಾಗೆ ಪ್ರಕೃತಿಯ ಮೇಲಿನ ಅಪಾರ ಕಾಳಜಿಯನ್ನು *ಮರವನ್ನು ಕಡಿದು ಬದುಕುವ ಯತ್ನ ಮಾಡದೇ, ಗಿಡ ಬಳ್ಳಿಗಳ ಕಿತ್ತು ವನವನ್ನು ಬರಿದುಮಾಡದೆ ನೀನೇ ಸಸಿಗಳನ್ನು ನೆಟ್ಟು ಬೆಳೆಸಿದರೆ ನಿನ್ನ ಹೆಸರಿಗಿಂತಲೂ ಹಸಿರೇ ಮುಂದಿನ ಪೀಳಿಗೆಗೆ ಉಸಿರು ನೀಡುವುದು*ಎನ್ನುವ ಅವರ ಆಧುನಿಕ ವಚನದಲ್ಲಿ ಪ್ರಕೃತಿಯ ಮೇಲಿನ ಪ್ರೀತಿಯೂ ಕಂಡುಬರುತ್ತದೆ.
©2024 Book Brahma Private Limited.