‘ಕೋಲಶಾಂತಯ್ಯ ಮತ್ತು ಮಧುವಯ್ಯಗಳ ವಚನಗಳು’ ಕೃತಿಯು ಬಿ.ಎಸ್. ಸಣ್ಣ್ಯ ಅವರ ವಚನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಂಸ್ಕೃತಿ, ಇತಿಹಾಸ, ಭಾಷಾಚರಿತ್ರೆ-ಇವುಗಳ ಸಮಗ್ರ ಅರಿವಿಗೆ ಶಾಸ್ತ್ರೀಯ ವಾಗಿ ಸಂಪಾದಿಸಿದ ಸಾಹಿತ್ಯ ಅತ್ಯಾವಶ್ಯಕ. ಅಷ್ಟೇ ಅಲ್ಲ, ಕೋಶ ಅಥವಾ ನಿಘಂಟುಗಳ ರಚನೆಗೆ, ಅವುಗಳ ಮೂಲಘಟಕಗಳಾದ ಶಬ್ದಗಳ ಅರ್ಥ ನಿರ್ಧಾರಕ್ಕೆ ಶಾಸ್ತ್ರಿ ಯವಾಗಿ ಸಂಪಾದಿಸಿದ ಸಾಹಿತ್ಯ ಕೃತಿಗಳು ಅನಿವಾರ್ಯವಾಗುತ್ತವೆ. ಸಾಂಸ್ಕೃತಿಕ ಮತ್ತು ಐತಿಹಾಸಿಕ ಪುನರಚನೆಗೆ ಅಗತ್ಯವಾಗಿ ಬೇಕಾಗಿರುವ ಅನೇಕ ಗ್ರಂಥಗಳು ಇಂದಿಗೂ ಅನುಪಲಬ್ಧವಾಗಿವೆ. ಶಾಸನಗಳಲ್ಲಿ ಅನ್ಯ ಕವಿಗಳ ಕೃತಿಗಳಲ್ಲಿ ಉಕ್ತವಾಗಿ ರುವುದರಿಂದ ಮಾತ್ರ ಹಲವು ಕವಿಗಳ ಮತ್ತು ಗ್ರಂಥಗಳ ಹೆಸರುಗಳು ತಿಳಿದು ಬರು ಇವೆ. ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದ ಕನ್ನಡ ಜನತೆಯ ಬಳಿ ಒಂದು ಕಾಲದಲ್ಲಿ ಇವೆಲ್ಲ ಲಭ್ಯವಾಗಿದ್ದಿರಬೇಕು. ನಾಡಿನ ಹಲವೆಡೆಗಳಲ್ಲಿ ಓಲೆಗರಿಯ ಸಾಹಿತ್ಯ ಅನೇಕ ಶತಮಾನಗಳವರೆಗೆ ತನ್ನ ವೈಭವವನ್ನು ಮೆರೆದಿತ್ತು, ಕಾವ್ಯ ಪಾರಾಯಣ ಸಾಂಸ್ಕೃತಿಕ ಜೀವನದ ಅಂಗವಾಗಿ ಪರಿಣಮಿಸಿತ್ತು. ಕಾಲಕ್ರಮದಲ್ಲಿ ದೇಶಕಾಲಪರಿಸರಗಳ ಪ್ರಭಾವದಿಂದ, ಜನತೆಯ ಅಜ್ಞಾನ ಅಶ್ರದ್ಧೆ ಮತ್ತು ಔದಾಸೀ ನ್ಯಗಳ ಫಲವಾಗಿ ಅವು ಮೂಲೆಗುಂಪಾಗುತ್ತ ಬಂದು ಕೀಟಗಳಿಗೆ ಆಹಾರವಾಗತೊಡ ಗಿದವು. ಅವುಗಳನ್ನು ಸಂರಕ್ಷಿಸಲಾರದೆ ನದಿಯ ಪಾಲೋ, ಬೆಂಕಿಯ ಪಾಲೋ ಮಾಡುತ್ತಿದ್ದ ಉದಾಹರಣೆಗಳೂ ಅಸಂಖ್ಯವಾಗಿವೆ. ಮತ್ತೆ ಕೆಲವೆಡೆಗಳಲ್ಲಿ ನವ ರಾತ್ರಿಯಂದು ಬೆಳಕುಕಂಡು ಪೂಜಾರ್ಹವಾಗಿ, ಹಾಲುಂಡು ಮತ್ತೆ ಕತ್ತಲ ಕೋಣೆಯ ಮೂಲೆ ಸೇರಬೇಕಾದ ದುಸ್ಥಿತಿ ಒದಗಿ ಹಲವಾರು ಅಮೂಲ್ಯ ಪ್ರತಿಗಳು ತ್ರುಟಿತವಾಗಿ ಹೋಗಿವೆ. ಇಂಥ ಮೌಧ್ಯವನ್ನು ದೂರಮಾಡಿ ಹಸ್ತಪ್ರತಿಗಳನ್ನು ಹೊರಗೆಳೆದು, ಅವುಗಳನ್ನು ಕೊಂಡು ಇಲ್ಲವೆ ಎರವಲಾಗಿ ಪಡೆದು ಪರಿಷ್ಕರಿಸಿ, ಸಂಪಾದಿಸುವ ಹೊಣೆಯನ್ನು ಈ ಸಂಸ್ಥೆಯ ಸಂಪಾದನ ವಿಭಾಗ ಹೊತ್ತಿದೆ.
©2024 Book Brahma Private Limited.