ಡಾ.ಶಕುಂತಲಾ ಸಿ.ದುರಗಿಯವರು ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ 'ಘನಮನ ಸಂಪನ್ನರು' ಕೃತಿಯನ್ನು ರಚಿಸಿದ್ದು, ಹತ್ತು ಮೌಲಿಕ ಲೇಖನಗಳಿವೆ. 12ನೇ ಶತಮಾನದ ಶರಣರಾದ ವೀರ ಗೊಲ್ಲಾಳ, ಮೇದಾರ ಕೇತಯ್ಯ, ಶರಣೆಯರಾದ ಮುಕ್ತಾಯಕ್ಕ, ವ್ರತಾಚಾರನಿಷ್ಠೆಯ ಅಕ್ಕಮ್ಮ, ನಿಜಮುಕ್ತೆ ಹಡಪದ ಲಿಂಗಮ್ಮನ ಕುರಿತು ಅರ್ಥಪೂರ್ಣ ಚಿಂತನಾ ಲೇಖನಗಳಿವೆ. ಶರಣಸತಿ - ಲಿಂಗಪತಿ, ಯೋಗಾಂಗ ತ್ರಿವಿಧಿ, ಪ್ರಭುದೇವ-ಸಿದ್ಧರಾಮನನ್ನು ಶಿವಯೋಗದೆಡೆಗೆ ಹೊರಳಿಸಿದುದು, ವಚನಗಳು - ವಂಶವಾಹಿ (ಜೆನೆಟಿಕ್), ಶಿವಾಚಾರ, ಮುಂತಾದವುಗಳನ್ನು ವಸ್ತುವಾಗಿಸಿ, ಲೇಖನವಾಗಿಸಿದ್ದಾರೆ. ಕೃತಿಗೆ ಸಂಬಂಧಿಸಿದಂತೆ ಸಾಹಿತಿ-ಸಂಶೋಧಕ ಡಾ. ವೀರಣ್ಣ ರಾಜೂರು ಅವರು ‘ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಶರಣ ಶರಣೆಯರೆಲ್ಲ ತಮ್ಮ ಸತ್ಯಶುದ್ಧ ನಡೆ-ನುಡಿ, ಕಾಯಕ-ದಾಸೋಹಗಳಿಂದ ಉನ್ನತ ಬದುಕು ನಡೆಸಿದವರು. ಅರಿವು-ಆಚಾರ-ಅನುಭಾವಗಳಲ್ಲಿ ಅಪೂರ್ವ ಸಾಮರಸ್ಯವನ್ನು ಸಾಧಿಸಿದವರು, ಸಕಲ ಜೀವಾತ್ಮರ ಲೇಸಿಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಹೀಗಾಗಿ, ಈ ಕೃತಿಗೆ ನೀಡಿದ 'ಘನಮನ ಸಂಪನ್ನರು' ಎಂಬ ಶೀರ್ಷಿಕೆ ಅನ್ವರ್ಥಕವೆನಿಸಿದೆ. ಒಟ್ಟಾರೆ, ವಚನ ಸಾಹಿತ್ಯದ ಓದು, ಬೋಧನೆ, ಚರ್ಚೆ, ಚಿಂತನೆಗಳ ಹಿನ್ನೆಲೆಯಲ್ಲಿ ಮೂಡಿ ಬಂದ ಇಲ್ಲಿಯ ಬರಹಗಳು ಲೇಖಕಿಯ ಮಾಗಿದ ಅನುಭವದ ಅಭಿವ್ಯಕ್ತಿಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.