"ಎಲ್ಲೋ ಹುಡುಕಿದೆ" ವಚನ ಸಂಕಲನದ ಮೂಲದ್ರವ್ಯ ವೈಚಾರಿಕ ಚಿಂತನ ಮತ್ತು ಮಾನವೀಯ ಮೌಲ್ಯ ಬೆಂಗಾಲಿಯವರ ಅಧ್ಯಯನಶೀಲತೆಯ ಜೊತೆ ಜೊತೆಗೆ ಕಲಾವಿದನ ತೀಕ್ಷ ಸಂವೇದನೆಯ ಭಾವ ತೀವ್ರತೆ ಅವರ ಆಧುನಿಕ ವಚನಗಳಲ್ಲಿ ಕೆನೆಗಟ್ಟಿದೆ. ಕಾವ್ಯ ಶೈಲಿ ಹಾಗೂ ಜೀವನ ದರ್ಶನ ಅಂತಃ ಚಕ್ಷುವಾಗಿ ಮೂಡಿಬಂದಿದೆ. ದೀನ ದಲಿತರ, ದುರ್ಬಲರ ನೊಂದೆದೆಗೆ ಸಾಂತ್ವನದ ಹಿಮ ಬಿಂದುವಿನ ತಂಗರುಳು ಮಾತೃತ್ವದ ವಾತ್ಸಲ್ಯದಂತೆ ಎದ್ದು ಕಾಣುತ್ತಿರುವುದು ಬರವಣಿಗೆಯ ಸೂಕ್ಷ್ಮತೆ, ಹನ್ನೆರಡನೆಯ ಶತಮಾನದ ವಚನ ಚಳುವಳಿ ಶತಶತಮಾನಕೂ ನಿತ್ಯ ನಿರಂತರವಾಗಿ ಪ್ರವಹಿಸುವ ಜೀವನದಿ. ಪ್ರಜ್ಞಾವಂತರ ಆಂತರ್ಯದಲ್ಲಿ ಸದಾ ಚೇತನಾಪೂರ್ಣವಾಗಿ ಮನುಕುಲದ ಉದ್ಧಾರಕ್ಕಾಗಿ ಹಾಗೂ ವಿಶ್ವದ ಶಾಂತಿಯ ಕುರುಹಾಗಿ ಜನಮನದ ಹೃದಯಾಂತರಾಳದಲಿ ರಕ್ಷಣೆಯಾಗಿ ಮೊರೆಯುತ್ತದೆ. ದೇಶದ ಇಂದಿನ ವ್ಯವಸ್ಥೆಯನ್ನು ಕುರಿತಂತೆ ಈರಣ್ಣ ಬೆಂಗಾಲಿಯವರಿಗೆ ಸಾತ್ವಿಕ ಕೋಪವಿದೆ.ಅವರ ಪ್ರತಿಯೊಂದು ವಚನಗಳಲ್ಲಿ ಪರಿಸರದ ಬಗ್ಗೆ ಅಪಾರ ಪ್ರೀತಿ, ಗೋಮುಖವ್ಯಾಘ್ರತನದ ಬಗ್ಗೆ ವಿರೋಧ ಹಾಗೂ ಆಷಾಢಭೂತಿಗಳ ಕುಕೃತ್ಯಗಳಿಂದ ಆದೆಷ್ಟೋ ದುರ್ಬಲರು ದುರಂತದತ್ತ ಸಾಗುತ್ತಿರುವುದರ ಬಗ್ಗೆ ಕ್ರೋಧವಿದೆ. ಅಲ್ಲದೇ ಮೂಲತಃ ವ್ಯಂಗ್ಯಚಿತ್ರಕಾರರಾಗಿರುವುದರಿಂದ ಶಬ್ದಗಳ ಒಡಲಂತರಾಳದಲ್ಲಿ ಚಿತ್ರಕ ಶಕ್ತಿಯನ್ನು ಕಣ್ಣಿಗೆ ಕಟ್ಟುವಂತೆ ರೂಪಿಸಿದ್ದಾರೆ ಎನ್ನುತ್ತಾರೆ ಅಯ್ಯಪ್ಪಯ್ಯ ಹುಡಾ.
©2024 Book Brahma Private Limited.