“ಸ್ಕೂಲ್ ಫೋಬಿಯಾ”, ಶಾಲೆ…ನಾ ಒಲ್ಲೆ ಎಂಬ ಈ ಪುಸ್ತಕವನ್ನು ಡಾ. ಪಿ. ವಿ. ಭಂಡಾರಿ ಅವರು ಬರೆದಿದ್ದು. ಮಗು ಎಂಬುದು ಒಂದು ಸಮಾಜದ ಅತ್ಯಂತ ಸಣ್ಣ ಘಟಕ. ಈ ಮಗುವಿಗೆ ಶಾಲೆ ಎಂಬುದು ಬಹುಶಃ ತನ್ನ ಬಾಲ್ಯದ ಮೂರರಲ್ಲಿ ಒಂದು ಭಾಗದಷ್ಟು ಸಮಯವನ್ನು ಕಳೆಯುವ ಸ್ಥಳ. ಈ ಶಾಲೆಗೆ ಹೋಗುವಾಗ ಮೊದಮೊದಲು ಭಯವಾಗುವುದು ಸಹಜ. ತನ್ನ ಇಷ್ಟದಂತೆ ತಾಯಿಯ ಮಡಿಲಲ್ಲಿ ಬೆಳೆದ ಕಂದಮ್ಮ, ಅಜ್ಜನ ಪ್ರೀತಿ, ಅಪ್ಪನ ಭೀತಿ, ಅಜ್ಜಿಯ ಹುಸಿಕೋಪ, ಎಲ್ಲವನ್ನು ತನ್ನ ತುಂಟ ನಗುವಿನಿಂದ ಗೆಲ್ಲುತ್ತದೆ. ಶಾಲೆಗೆ ಬಂದೊಡನೆ ಹಲವು ಸ್ಪರ್ಧೆಗಳ ನಡುವೆ, ಟೀಚರ್ ಎಂಬ ಪ್ರಥಮ ಸರ್ವಾಧಿಕಾರಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುವುದು, ತಾಯಿ ತಂದೆಯಿಂದ ಬೇರ್ಪಡೆಗೊಂಡ ಆತಂಕ, ಹೊಸ ವಾತಾವರಣದಲ್ಲಿ ಹೊಸ ಸ್ನೇಹಿತರ ತೀಟೆಗಳು. ಶಿಕ್ಷಕರ ಶಿಕ್ಷೆಗಳು, ತಾಯಿ ತಂದೆಯರ ಅಪೇಕ್ಷೆಗೆ ತಕ್ಕ ಹಾಗೆ ಬರದ ಅಂಕಗಳು, ತನ್ನಲ್ಲೇ ಇರುವ 'SLD'ಯಂತಹ ನ್ಯೂನತೆಗಳು, ಅನಿಯಂತ್ರಿತ ಮೂತ್ರ ವಿಸರ್ಜನೆಯಂತಹ ಬೆಳವಣಿಗೆಯ ದೋಷಗಳು, 'OCD' (ಗೀಳು)ಯಂತಹ ಭಾವನಾತ್ಮಕ ಸಮಸ್ಯೆಗಳು ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ಬಳಲಿ ಹಲವೊಮ್ಮೆ ಶಾಲೆಗೆ ಹೋಗಲು ಹೆದರುತ್ತವೆ. ಇಂತಹ ಮಕ್ಕಳಿಗೆ ಶಾಲೆ ಎಂಬುದು ಒಂದು ಜೇಡರ ಬಲೆಯೇ ಆಗುತ್ತದೆ. ಇಲ್ಲಿ ತಂದೆ ತಾಯಿಯರ ಮಹತ್ವಾಕಾಂಕ್ಷೆಗಳು, ಶಿಕ್ಷಕರ ಶಿಕ್ಷೆ, ಸಹಪಾಠಿಯ ತೀಟೆ, ಹೋಲಿಕೆ, ಸ್ಪರ್ಧೆ ಹೀಗೆ ಹಲವು ಜೇಡಗಳು ಈ ಸ್ಕೂಲ್ ಫೋಬಿಯ ಉಂಟುಮಾಡುತ್ತವೆ. ಈ ಪುಸ್ತಕದಲ್ಲಿ ಮೇಲಿನ ಸಮಸ್ಯೆಗಳು ಹಾಗೂ ಆ ಸಮಸ್ಯೆ ಗಳ ಪರಿಹಾರದ ಬಗ್ಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ.
©2025 Book Brahma Private Limited.