ಕನ್ನಡದಲ್ಲಿ ಮನಃಶಾಸ್ತç ಸಾಹಿತ್ಯವನ್ನು ಸದ್ದುಗದ್ದಲವಿಲ್ಲದೇ ಶ್ರದ್ಧೆಯಿಂದ ಬೆಳೆಸುತ್ತಿರುವ ವಿದ್ವಾಂಸರಲ್ಲಿ ಬಸವಣ್ಣನವರ ಹೆಸರು ಅಗ್ರಪಂಕ್ತಿಯಲ್ಲಿ ಬರುತ್ತದೆ. ಈಡಿಪಸ್ ಕಾಂಪ್ಲೆಕ್ಸ್, ಕಾರ್ಲ್ಯೂಂಗ್, ಕನಸಿನ ಕತೆ, ಅರ್ಧನಾರೀಶ್ವರ, ಲೂಸಿಫರ್ ಎಫೆಕ್ಟ್, ಸೈಕಲಾಜಿಕಲ್ ಕಾಂಪ್ಲೆಕ್ಸ್ಗಳು, ಸಿಗ್ಮಂಡ್ ಫ್ರಾಯ್ಡ್ ಮೊದಲಾದ ಅನೇಕ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಅನೇಕ ವರ್ಷಗಳ ಕಾಲ ಮನೋವಿಜ್ಞಾನವನ್ನು ವಿಶ್ವವಿದ್ಯಾಲಯದಲ್ಲಿ ಬೋಧಿಸಿದ ಬಸವಣ್ಣನವರು ತಮ್ಮ ಅಧ್ಯಯನ ಸಾರವನ್ನೆಲ್ಲ ಈ ಪುಸ್ತಕಗಳ ಮೂಲಕ ಕನ್ನಡದ ಮನಸ್ಸುಗಳಿಗೆ ಉಣಬಡಿಸುತ್ತಿದ್ದಾರೆ. ಅವರ ಈ ಪ್ರಯತ್ನ ಕನ್ನಡದಲ್ಲಿ ಮನೋವಿಜ್ಞಾನದ ಅಧ್ಯಯನಕ್ಕೆ ಪೂರಕ ಸಾಹಿತ್ಯವನ್ನು ಒದಗಿಸುತ್ತಿದೆ ಎಂಬುದು ಮಾತ್ರವಲ್ಲ. ಸಾಮಾಜಿಕವಾಗಿಯೂ ಈ ಪುಸ್ತಕಗಳು ಇತ್ಯಾತ್ಮಕ ಪರಿಣಾಮ ಬೀರುತ್ತವೆ ಎಂಬುದನ್ನು ನಾವು ಗಮನಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮನಃಶಾಸ್ತçದ ಪಾತ್ರ ಅತ್ಯಂತ ಮಹತ್ವದ್ದೆಂಬ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಬಸವಣ್ಣನವರು ಈ ಕೆಲಸ ಮಾಡುತ್ತಿದ್ದಾರೆಂಬುದು ನನ್ನ ತಿಳುವಳಿಕೆ. `ಆಧುನಿಕ ಮನೋವಿಜ್ಞಾನದ ಪ್ರವರ್ತಕರು’ ಎಂಬ ಈ ಪುಸ್ತಕ ಮೇಲ್ನೋಟಕ್ಕೆ ನೂರೊಂದು ಜನ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಡುವ ಸ್ವರೂಪದಲ್ಲಿದ್ದರೂ ವಾಸ್ತವವಾಗಿ ಇದು ಮನೋವಿಜ್ಞಾನದ ಇತಿಹಾಸವನ್ನು ಕನ್ನಡದಲ್ಲಿ ನಿರೂಪಿಸುವ ಅಪರೂಪದ ಪುಸ್ತಕ. ಬಸವಣ್ಣನವರೇ ತಮ್ಮ ಅರಿಕೆಯಲ್ಲಿ ಹೇಳುವಂತೆ ಯಾವ ವಿಷಯವನ್ನೇ ಆದರೂ ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದು ಅವರ ಅಧ್ಯಯನ ಕ್ರಮ. ಈ ಪುಸ್ತಕದ ಆಕೃತಿಯು ಅದೇ ವಿನ್ಯಾಸದಲ್ಲಿ ರೂಪುಗೊಂಡಿದೆ. ಈ ಪುಸ್ತಕದ ರಚನೆಗೆ ಪ್ರೇರಣೆ ಇ.ಜಿ. ಬೋರಿಂಗ್ನ ಪ್ರಾಯೋಗಿಕ ಮನಃಶಾಸ್ತçದ ಇತಿಹಾಸ (ಊisಣoಡಿಥಿ oಜಿ ಇxಠಿeಡಿimeಟಿಣಚಿಟ Psಥಿಛಿhoಟogಥಿ) ಎಂಬAತೆ ತೋರುತ್ತದೆ. ತಮ್ಮ ತಾರುಣ್ಯದಲ್ಲಿ ಆ ಪುಸ್ತಕದಿಂದ ಪ್ರಭಾವಿತರಾದ ಬಸವಣ್ಣನವರಿಗೆ ಕನ್ನಡದಲ್ಲಿ ಮನಃಶಾಸ್ತçದ ಇತಿಹಾಸವನ್ನು ಬರೆಯಬೇಕೆಂಬ ಹಂಬಲ ಮೊಳಕೆಯೊಡೆದಿತ್ತು. ಅವರ ಪುಸ್ತಕಗಳನ್ನು ಓದಿದ ಅನೇಕ ಸಹೃದಯರು ಮನಃಶಾಸ್ತçದ ಇತಿಹಾಸವನ್ನು ಬರೆಯಲು ಸೂಚಿಸಿದ್ದರು. ಅದರ ಫಲವೇ ಈ ಪುಸ್ತಕ. ಇದು ರೂಢಿಯ ಇತಿಹಾಸದ ಮಾದರಿಯಲ್ಲ. ನೂರೊಂದು ಮಂದಿ ಮನೋವಿಜ್ಞಾನಿಗಳ ಬದುಕು ಸಾಧನೆಗಳನ್ನು, ಅವರು ಮನೋವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು, ಮನೋವಿಜ್ಞಾನವನ್ನು ಈ ಸಾಧಕರು ಬೆಳೆಸಿದ ಬಗೆಯನ್ನು ಕಟ್ಟಿಕೊಡುತ್ತಲೇ ಬಸವಣ್ಣನವರು ಮನೋವಿಜ್ಞಾನದ ಇತಿಹಾಸವನ್ನು ನಮಗೆ ಪರಿಚಯ ಮಾಡಿಕೊಡುತ್ತಾರೆ. ಕಾಲಾನುಕ್ರಮದಲ್ಲಿ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಟ್ಟಿರುವುದು ಈ ಆಶಯಕ್ಕೆ ಪೂರಕವಾಗಿದೆ. -ನರಹಳ್ಳಿ ಬಾಲಸುಬ್ರಹ್ಮಣ್ಯ (ಮುನ್ನುಡಿಯಿಂದ)
©2024 Book Brahma Private Limited.