ಲೇಖಕ ಡಾ.ಮೀನಗುಂಡಿ ಸುಬ್ರಹ್ಮಣ್ಯಂ ಅವರ ಕೃತಿ ಮಾನಸಿಕ ಸಮಸ್ಯೆಗಳಿಗೆ `ಮನಸ್ಸು‘ ಇಲ್ಲದ ಮಾರ್ಗ. ಮನೋರೋಗ ಚಿಕಿತ್ಸೆಯ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಸಂಶಯಗಳಿಗೆ ಉತ್ತರ ನಿವಾರಣೆ ಈ ಪುಸ್ತಕದಲ್ಲಿದೆ. ಪುಸ್ತಕದ ಆರಂಭದಲ್ಲಿಯೇ `ಶಾಪ‘ಗಳಿಂದ ಬಿಡುಗಡೆ ಮಾಡಿದ `ರೆವರೆಂಡ್ ಫಾದರ್ ಜಾರ್ಜ್ ಕಂಡತ್ತಿಲ್ಲ ಎಸ್.ಜೆ. ಮತ್ತು ಸಿಸ್ಟರ್ ಅನ್ನಿ ಮಾರಿಯ ಸಿ.ಎಂ. ಅವರಿಗೆ ಸಪ್ರೇಮ ಅರ್ಪಣೆ ಎಂದಿದ್ದಾರೆ ಲೇಖಕರು. ಅರೆ! ಪುರಾಣ ಕತೆಗಳಲ್ಲಿ ಬರುವ `ಶಾಪ‘ ಎನ್ನುವ ಶಬ್ದ ಈ ಪುಸ್ತಕದಲ್ಲಿ ಹೇಗೆ? ಆಶ್ಚರ್ಯವಾಗಿರಬೇಕಲ್ಲ. ಇದಕ್ಕಿಂತ ಆಶ್ಚರ್ಯ ಈ `ಶಾಪ‘ ಗಳ ವಿವರಣೆಯನ್ನು ಓದಿದಾಗ ಆಗುತ್ತದೆ :ಮಗು ತನ್ನ ಮಿದುಳಿನಲ್ಲಿ ದಾಖಲಿಸಿದ ತಂದೆ ತಾಯಿ ಮತ್ತಿತರ ಪೋಷಕರ ಮಗುವಿನ ಭವಿಷ್ಯದ ಬಗೆಗಿನ ಮಾತುಗಳನ್ನು `ಸಂದೇಶ‘ (ಮೆಸೇಜ್) ಎಂತಲೂ, ಈ ಸಂದೇಶವನ್ನು ಯಾವ ರೀತಿ ಅಥವಾ ಯಾರ ಹಾಗೆ ಸಾಧಿಸಬಹುದು ಎನ್ನುವ ಮಾಹಿತಿಗಳನ್ನು `ಮಾದರಿ‘ (ಮಾಡೆಲ್) ಎಂತಲೂ, ಅಸಹಾಯಕ ಕೋಪ, ದುಃಖದಿಂದ ಅಥವಾ ತಮಾಷೆಗೆ ಎಂದು ಮಗುವಿಗೆ ಹೇಳುವ ನಕಾರಾತ್ಮಕ ಮಾತುಗಳನ್ನು `ಶಾಪ‘ (ಇಂಜಕ್ಷನ್ ಅಥವಾ ಕರ್ಸ್ಸ್) ಎಂದೂ ಕರೆಯಲಾಗುತ್ತದೆ. ಸಂದೇಶ, ಮಾದರಿ, ಶಾಪಗಳ ರೀತಿ ಮತ್ತು ಶಾಪಗಳ ನಕಾರಾತ್ಮಕತೆಯ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು ವಿನಾ ಇವನ್ನು ಕೊಡದ ತಂದೆ ತಾಯಿಯರೂ ಇಲ್ಲ, ಇವನ್ನು ಪಡೆಯದ ಮಗುವೂ ಇಲ್ಲ. `ಪ್ರೀತಿಯಿಂದ, ಅವನು/ಳು ಕೇಳಿದ್ದೆಲ್ಲ ಕೊಟ್ಟು, ಚೆನ್ನಾಗಿಯೇ ಬೆಳೆಸಿದ್ದೇವೆ,’ ಎನ್ನುವ ತಂದೆತಾಯಂದಿರು ತಮಾಷೆಗೆ ಎಂದು ಮತ್ತು ಶಿಸ್ತು, ಸಂಯಮ, ಬುದ್ದಿ ಕಲಿಸುವ ಹೆಸರಿನಲ್ಲಿ `ಅವನ/ಳ ಒಳ್ಳೆಯದಕ್ಕೇ‘ ಮಾಡುವ ಹೆಚ್ಚಿನ ಕೆಲಸಗಳೆಲ್ಲ `ಶಾಪ‘ವೇ ಆಗುವುದು ಮನುಷ್ಯ ಜೀವನದ ದುರಂತ! ಹೀಗೆ ನಮ್ಮ ದೈನಂದಿನ ಬದುಕಿನಲ್ಲಿ ನಾವು ಎದುರಿಸುವ ಹಿಂಜರಿತ, ನೋವು, ಸುಖ, ದುಃಖ ಮುಂತಾದವುಗಳಿಗೆ ಯಾವುದೇ ಗ್ರಹಚಾರ, ದೇವರು, ದೆವ್ವ ಕಾರಣವಲ್ಲ ನಾವೇ ಅದಕ್ಕೆಲ್ಲಾ ಜವಾಬ್ದಾರರು. ನಮ್ಮ ಸುಖ/ದುಃಖ ಗಳನ್ನು ಹೇಗೆ ನಾವೇ ಅನುಭವಿಸುತ್ತೇವೋ ಅದಕ್ಕೆ ಕಾರಣರೂ ನಾವೇ. ನಮ್ಮಿಂದ ಹೊರಗೆ ಇರುವ ಬೇರೆ ವಸ್ತು ಕಾರಣವಲ್ಲ ಎಂಬ ನಿತ್ಯ ಸತ್ಯವನ್ನು ಮನಗಾಣಿಸಿ ಕೊಡುವ, ನಾವೇ ಸೃಷ್ಟಿಸುವ ನಕಾರಾತ್ಮಕ ಭಾವನೆಗಳ ಅನುಭವ ನಮಗೆ ಬೇಡವಾದಲ್ಲಿ ಅದನ್ನು ತ್ಯಜಿಸುವ ಸ್ವಾತಂತ್ರ್ಯ ನಮ್ಮದಿದೆ ಅನ್ನುವ ಸತ್ಯವನ್ನು ತಿಳಿಸುವ ಈ ಪುಸ್ತಕ ಅದ್ಭುತ. ಪುಸ್ತಕದ ಆರಂಭದಲ್ಲೇ ಲೇಖಕರು `ಎಲ್ಲಿಂದಾದರೂ ಓದಲು ಪ್ರಾರಂಭಿಸಿದರೆ ಸರಿಯಾದ ಅರ್ಥ ಆಗುವುದಕ್ಕಿಂತ ಹೆಚ್ಚಾಗಿ ಅಪಾರ್ಥ ಅನರ್ಥಗಳೇ ಆಗುವ ಸಂಭವವಿರುವುದರಿಂದ, ದಯಮಾಡಿ, ಈ ಪುಸ್ತಕವನ್ನು ಮೊದಲ ಪುಟದಿಂದ ಅನುಕ್ರಮವಾಗಿ ಓದಿ.‘ ಎಂದಿದ್ದಾರೆ. ಆದರೆ ಈ ಪುಸ್ತಕದ ವಿಶಾಲ ಹರಹನ್ನು ಹೇಳುವ ಉತ್ಸಾಹದಲ್ಲಿ ಅಲ್ಲೊಂದು ಇಲ್ಲೊಂದು ಮಾತುಗಳನ್ನು ಉದ್ಧರಿಸಿ ಇಲ್ಲಿ ಕೊಟ್ಟಿದ್ದೇನೆ. ಇದು ಈ ಪುಸ್ತಕದ ಲಾಭವನ್ನು ಎಲ್ಲರೂ ಪಡೆದುಕೊಳ್ಳಲಿ ಎನ್ನುವ ಸದಾಶಯದಿಂದ ಮಾಡಿದ ತಪ್ಪು. ಅದಕ್ಕಾಗಿ ಲೇಖಕರ ಕ್ಷಮೆಯನ್ನು ಇಲ್ಲಿ ಕೋರುತ್ತೇನೆ. ಮತ್ತೊಮ್ಮೆ ಹೊಸ ವರ್ಷದಲ್ಲಿ ನೀವೆಲ್ಲ ಹೊಸ ಸಕಾರಾತ್ಮಕ ಅನುಭವ (ಸುಖ, ಸಂತೋಷ, ಉಲ್ಲಾಸ, ಸಮಾಧಾನ) ಗಳನ್ನು ಹೊಂದುವಲ್ಲಿ ಯಶಸ್ವಿಯಾಗಿರೆಂದು ಹಾರೈಸುವೆ. –ವಿಶಾಲಮತಿ
©2024 Book Brahma Private Limited.