‘ಮನಸ್ಸಿಗೂ ಸೋಂಕು’ ಸೋಂಕು ರೋಗಗಳು ಮತ್ತು ಮಾನಸಿಕ ಆರೋಗ್ಯ ಕುರಿತು ಡಾ. ಕೆ.ಎಸ್. ಪವಿತ್ರ ಅವರ ಲೇಖನಗಳ ಸಂಕಲನ. ಈ ಕೃತಿಗೆ ಮುನ್ನುಡಿ ಬರೆದ ಕೃತಿಯ ಮುಖ್ಯ ಸಂಪಾದಕಿ ಹಾಗೂ ಲೇಖಿ ಡಾ. ವಸುಂಧರಾ ಭೂಪತಿ ‘ಕೋವಿಡ್ -19 ಇಡೀ ಜಗತ್ತನ್ನು ತಲ್ಲಣಗೊಳಿಸಿದ್ದನ್ನು ಕಂಡಿದ್ದೇವೆ. ಅನುಭವಿಸಿದ್ದೇವೆ. ಜೀವ ಉಳಿಸಿಕೊಳ್ಳುವುದೇ ಮುಖ್ಯ ಗುರಿಯಾಗಿ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಿದ್ದೇ ಹೆಚ್ಚು ಕೋವಿಡ್ ನಿಂದಾಗಿ ಮಾನಸಿಕ ರೋಗಗಳು, ಆತ್ಮಹತ್ಯೆ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿವೆ. ಆತಂಕ, ಖಿನ್ನತೆಗೆ ಮಕ್ಕಳೂ ಒಳಗಾಗಿರುವುದನ್ನು ನೋಡುತ್ತಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ಸಮಯ ಕಳೆಯಲು ಟಿ.ವಿ. ಮೊಬೈಲ್ ವೀಕ್ಷಣೆ ಆರಂಭಿಸಿ ನಂತರ ಅದೇ ಒಂದು ಗೀಳಾಗಿ ಪರಿಣಮಿಸಿದೆ . ಜೊತೆಗೆ ಆನ್ ಲೈನ್ ತರಗತಿ, ಕಲಿಕೆಗೆ ಪ್ರೋತ್ಸಾಹ ನೀಡುವಂತಿದ್ದರೂ ತರಗತಿ ಹೊರತುಪಡಿಸಿದ ಸಮಯದಲ್ಲಿ ಮೊಬೈಲ್ ಬಳಕೆ ಚಟವಾಗುತ್ತಿರೋದು ಪೋಷಕರಿಗೆ ತಲೆಬಿಸಿ ಉಂಟುಮಾಡಿದೆ. ಈ ಎಲ್ಲಾ ವಿಚಾರಗಳನ್ನು ವಿಶ್ಲೇಷಿಸಿದಂತೆ ಮನಸ್ಸಿಗೂ ಸೋಂಕು ಕೃತಿಯಲ್ಲಿ ಲೇಖಕಿ ಪ್ಲೇಗ್ ನಿಂದ ಹಿಡಿದು ಕರೋನಾದಂತ ಸಾಂಕ್ರಾಮಿಕ ಕಾಯಿಲೆಗಳ ಇತಿಹಾಸ, ಕೈತೊಳೆಯುವಿಕೆ, ಮುಸುಕು ಧರಿಸುವುದರ ಮಹತ್ವದ ಬಗ್ಗೆ ತಿಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್, ಕ್ವಾರಂಟೈನ್ ಗಳು, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳನ್ನು ಹುಟ್ಟು ಹಾಕಿವೆ. ಟೆಲಿವೈದ್ಯಕೀಯ ಈ ಸಮಯದಲ್ಲಿ ಪಡೆದುಕೊಂಡಿರುವ ಮಹತ್ವದೊಂದಿಗೆ ಜನಸಮುದಾಯ ಹೇಗೆ ತನ್ನನ್ನು ತಾನು ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಮನೋಧೈರ್ಯವನ್ನು ಕಳೆದುಕೊಳ್ಳದೇ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂಬುದರ ಬಗ್ಗೆ ವಿವರವಾಗಿ ನಾಡಿನ ಹೆಸರಾಂತ ಮನೋವೈದ್ಯೆ, ಲೇಖಕಿ, ನೃತ್ಯ ಕಲಾವಿದೆ, ಡಾ.ಕೆ.ಎಸ್. ಪವಿತ್ರ ಅವರು ಮನಸ್ಸಿಗೂ ಸೋಂಕು ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದ್ದಾರೆ. .
©2024 Book Brahma Private Limited.