’ಲೂಸಿಫರ್ ಪರಿಣಾಮ’ ಎಂಬುದು ಮನೋವಿಜ್ಞಾನದ ವಿಶಿಷ್ಟ ಪರಿಕಲ್ಪನೆ. ಒಳ್ಳೆಯವರು ಕೆಟ್ಟವರಾಗುವ ಪ್ರಕ್ರಿಯೆಯನ್ನು ವಿವರಿಸಲು ಇದನ್ನು ಬಳಸಲಾಗುತ್ತದೆ. ಮನುಷ್ಯನ ಈ ಮನೋವ್ಯಾಪಾರದ ಬಗ್ಗೆ ವಿದೇಶಗಳಲ್ಲಿ ಸಾಕಷ್ಟು ವರ್ಷಗಳಿಂದ ಅಧ್ಯಯನಗಳು ನಡೆದಿವೆ. ಪುಸ್ತಕಗಳೂ ಪ್ರಕಟವಾಗಿವೆ. ಆದರೆ ಕನ್ನಡದ ಮಟ್ಟಿಗೆ ಲೂಸಿಫರ್ ಪರಿಣಾಮವನ್ನು ಅತ್ಯಂತ ಪರಿಣಾಮಕಾರಿಯಾಗಿ ವಿವರಿಸುವ ಪುಸ್ತಕ ಬಹುಶಃ ಇದೇ ಮೊದಲು.
ಕೃತಿಯ ಲೇಖಕ ಎಂ. ಬಸವಣ್ಣ ಅವರು ’ಲೂಸಿಫರ್ ಎಂಬುದು ಹೀಬ್ರೂ ಮತ್ತು ಕ್ರೈಸ್ತ ಧರ್ಮಶಾಸ್ತ್ರಗಳಲ್ಲಿ ಬರುವ ದೇವದೂತನೊಬ್ಬನ ಹೆಸರು. ಮೊದಲಿಗೆ ದೇವರಿಗೆ ಅತ್ಯಂತ ಪ್ರಿಯನಾಗಿದ್ದ ಲೂಸಿಫರ್ ದೇವರನ್ನು ಧಿಕ್ಕರಿಸಿ, ಅವನ ಆಜ್ಜೆಯನ್ನು ಮೀರಿ ನಡೆಯುತ್ತಾನೆ. ಅದರಿಂದ ಕೋಪಗೊಂಡ ದೇವರು ಅವನಿಗೆ ನರಕವಾಸವನ್ನು ವಿಧಿಸುತ್ತಾನೆ. ನರಕದಲ್ಲಿ ಲೂಸಿಫರ್, ಸಟಾನ್ (Satan) ಅಥವಾ ಸೈತಾನ್ ಆಗಿ ಪರಿವರ್ತನೆಗೊಳ್ಳುತ್ತಾನೆ. ಸಟಾನ್ ಎಂದರೆ ದೆವ್ವ, ಭೂತ, ಪಿಶಾಚಿ, ರಾಕ್ಷಸ, ಸೈತಾನ (ಇಲ್ಲಿ ಇದೇ ಪದವನ್ನು ಬಳಸಿಕೊಳ್ಳಲಾಗಿದೆ) ಎಂಬೆಲ್ಲ ಅರ್ಥವಿದೆ. ಒಟ್ಟಾರೆ ಸೈತಾನ್ ಕೆಡುಕಿನ ಮೂರ್ತರೂಪ; ಕೆಟ್ಟದ್ದೆಲ್ಲದರ ಕೇಂದ್ರ. ಪ್ರಲೋಭನೆಗೆ ಇನ್ನೊಂದು ಹೆಸರು. ಸೈತಾನ್ ಜನರನ್ನು ದಾರಿತಪ್ಪಿಸುವ ದೂರ್ತ, ಸೈತಾನನ ಕತೆ ಬೈಬಲ್ ನಲ್ಲಿ ಹತ್ತಾರು ಕಡೆ ಬಂದಿದೆ. ಇಂಥ ಕತೆಗಳು ವಿಶ್ವದ ಎಲ್ಲ ಧರ್ಮಗ್ರಂಥಗಳಲ್ಲೂ ಪ್ರಚಲಿತವಿವೆ. ಮಿಲ್ಟನ್ನನ ಪ್ಯಾರಡೈಸ್ ಲಾಸ್ಟ್ (Paradise Lost), ಡಾಂಟೆಯ ಇನ್‌ಫರ್ನೋ (Interno) ಮುಂತಾದ ಗ್ರಂಥಗಳಲ್ಲಿ ಇಂಥ ಕಥನಗಳಿವೆ. ಇಸ್ಲಾಮ್ ಧರ್ಮದ ಶೈತಾನನ (ಅಥವಾ ಸೈತಾನ್) ಕತೆಯೂ ಇಂಥದೆ. ಭಾರತದ ಹಲವಾರು ಪುರಾಣಗಳಲ್ಲಿ ಒಳೆಯ ದೇವಾಂಶಸಂಭೂತರು ಶಾಪಗ್ರಸ್ತರಾಗಿ, ಕೆಟ್ಟವರಾಗಿ ಹುಟ್ಟುವ ಕತೆಗಳಿವೆ. ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಗ್ರಸ್ತರಾಗಿ ರಾವಣ-ಕುಂಭಕರ್ಣರಾದಹಾಗೆ, ಹಿರಣ್ಯಾಕ್ಷ-ಹಿರಣ್ಯಕಶಿಪುಗಳಾದ ಹಾಗೆ, ಮೂಲತ: ಲೂಸಿಫರ್ ಬೆಳಕನ್ನು ನೀಡುವ ಪ್ರಾತಃಕಾಲದ ನಕ್ಷತ್ರ (morning star): ಪ್ರಭಾತ ಪುತ್ರ (Son of dawn) ಎನ್ನುವ ಉಲ್ಲೇಖವೂ ಇದೆ. ಒಟ್ಟಿನಲ್ಲಿ ಲೂಸಿಫರ್ ಉತ್ತಮ, ಸಭ್ಯ. ಸುಂದರ ದೇವತೆ; ಬುದ್ದಿವಂತ ಹಾಗು ವಿವೇಕಿ, ಮಿಗಿಲಾಗಿ ದೇವರಿಗೆ ಪ್ರಿಯನಾದವನು’ ಎಂದು ವಿವರಿಸಿದ್ದಾರೆ.
©2024 Book Brahma Private Limited.