ಲೇಖಕ ಸಿ.ಆರ್. ಚಂದ್ರಶೇಖರ್ ಅವರ ಲೇಖನ ಕೃತಿ ʻಆಪ್ತ ಸಮಾಲೋಚನೆʼ. ಆಧುನಿಕ ಯುಗದಲ್ಲಿ ತಾಂತ್ರಿಕ ಸೌಲಭ್ಯಗಳು ಹೆಚ್ಚಾಗುತ್ತಾ ಹೋದಂತೆ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಮನುಷ್ಯನ ಮನಸ್ಸು ಕ್ಷೀಣಿಸುತ್ತಾ ಹೋಗುವುದು ಗಮನಾರ್ಹ ವಿಚಾರ. ಅಂತಹ ನೊಂದವರ, ಮಾನಸಿಕವಾಗಿ ಕುಗ್ಗಿಹೋಗಿರುವ ಜನರಿಗೆ ಆಶಾಕಿರಣವಾಗಿ ಕಾಣಬಹುದಾದ ಆಪ್ತ ಸಲಹೆಗಳನ್ನು ನೀಡುವ ಕುರಿತು ಇಲ್ಲಿ ಹೇಳುತ್ತಾರೆ. ಕೆಲವು ಮಾನಿಸಿಕ ಕಾಯಿಲೆಗಳಿಗೆ ಮನೋತಜ್ಞರ ಬಳಿಗೇ ಹೋಗಿ ಅವರಲ್ಲಿ ಪರೀಕ್ಷಿಸುವ ಅಗತ್ಯವಿರುವುದಿಲ್ಲ, ಬದಲಾಗಿ ತರಬೇತಿ ಪಡೆದ ಇತರರೂ ಸಲಹೆ ನೀಡಬಹುದು. ಹಾಗಾಗಿ ಅಂಥವರಿಗೆ ಇರಬೇಕಾದ ಅರ್ಹತೆಗಳು, ಹಾಗೂ ಒಬ್ಬ ಉತ್ತಮ ಆಪ್ತ ಸಲಹಕಾರನಾಗುವುದು ಹೇಗೆ, ಆಪ್ತ ಸಲಹಾ ಕೇಂದ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬಂತೆ ಎಲ್ಲಾ ವಿಚಾರಗಳನ್ನು ಈ ಪುಸ್ತಕವು ಹೇಳಿಕೊಡುತ್ತದೆ. ಇದು ಮನಃಶಾಸ್ತ್ರಜ್ಞರ ಕೊರತೆಯನ್ನು ನೀಗಿಸಲೂ ಸಾಧ್ಯ ಎಂದು ಹೇಳಬಹುದು.
ನೊಂದವರಿಗೆ ಆಪ್ತಸಲಹೆಯನ್ನು ನೀಡುವುದು ಹೇಗೆಂದು ಈ ಕೃತಿಯಲ್ಲಿ ವಿವರವಾಗಿ ಹೇಳಲ್ಪಟ್ಟಿದೆ. ಬಾಳಿನಲ್ಲಿ ಬರುವ ಹಲವಾರು ಅನಿವಾರ್ಯ ಹಾಗೂ ಅನಿರೀಕ್ಷಿತ ಪ್ರಸಂಗಗಳಿಂದಾಗಿ ದಿಕ್ಕೇ ತೋಚದೆ ಧೈರ್ಯಗುಂದುವವರಿಗಾಗಿ ಆಪ್ತ ಸಲಹೆಯೊಂದು ಆಶಾಕಿರಣವಾಗಿ ಒದಗಬಹುದು. ಆಪ್ತ ಸಲಹೆ ನೀಡಲು ಇಂಥ ಡಾಕ್ಟರುಗಳೇ ಬೇಕೆಂಬುದನ್ನು ನಿರಾಕರಿಸಿ ತರಬೇತಿ ಪಡೆದ ಇತರರೂ ಸಲಹೆ ನೀಡಬೇಕೆಂಬುದನ್ನು ತಿಳಿಸಲಾಗಿದೆ. ಇಲ್ಲಿ ನೊಂದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರನ್ನು ಯಾವ ರೀತಿ ಮಾತಾಡಿಸಿ ಸಮಸ್ಯೆಯೇನೆಂದು ತಿಳಿಯುವ ಪರಿ ಹೇಗೆಂದು ಕೂಡ ಹೇಳಲಾಗಿದೆ, ಆಪ್ತ ಸಲಹೆ ನೀಡುವ ವ್ಯಕ್ತಿಗೆ ಏನೇನು ಅರ್ಹತೆಗಳಿರಬೇಕು ಮತ್ತು ಯಶಸ್ವಿ ಆಪ್ತ ಸಲಹಾಕಾರನಾಗುವುದು ಹೇಗೆಂದು ಈ ಕೃತಿ ಹೇಳುತ್ತಲೇ ಅದಕ್ಕೆ ಯಶಸ್ವೀ ಕಾರ್ಯಾಗಾರಗಳನ್ನು ಆಯೋಜಿಸುವುದರ ಬಗ್ಗೆಯೂ ತಿಳಿಸುತ್ತದೆ. ಸಮಾಜ ಸೇವೆ ಮಾಡಬೇಕು ಮತ್ತು ಇತರರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ಮನಸ್ಸುಳ್ಳವರಿಗೆ ಮಾರ್ಗದರ್ಶಿ ಈ ಪುಸ್ತಕ.
-ಇಂದಿರಾ ಕುಮಾರಿ, ಬೆಂಗಳೂರು
(ಕೃಪೆ: ಹೊಸತು, ಡಿಸೆಂಬರ್- 2022)
©2024 Book Brahma Private Limited.