ಮನಮಂಥನ ಕೃತಿಯ ಮೊದಲ ಭಾಗದಲ್ಲಿ ಆತಂಕ, ಪ್ಯಾರಾನಾಯ್ಡ್ ಅವಸ್ಥೆ, ಹಿಸ್ಟೀರಿಯಾ, ಒಬ್ಸೆಷನ್, ಅವಾಸ್ತವ ಭ್ರಮೆ, ಸ್ಕಿಜೋಫ್ರೆನಿಯಾ, ಅಮ್ನಿಸಿಯಾ, ದೈಹಿಕ ವ್ಯಾಧಿಗಳಿಂದ ಬರುವ ಮನೋವ್ಯಾಧಿಗಳು ಇವುಗಳ ಚಿಕಿತ್ಸೆಗಳಿಗೆ ಸಂಬಂಧಿಸಿದ ಮೂಲಭೂತ ತತ್ವಗಳನ್ನು ಕುರಿತು ಬರೆದಿದ್ದಾರೆ. ಎರಡನೆಯ ಭಾಗದಲ್ಲಿ ದೇಹ ಮತ್ತು ಮನಸ್ಸು, ಮನಸ್ಸಿನ ಸ್ವರೂಪ, ಮೆದುಳು, ಮಾನವನ ಬೇರೆ ಬೇರೆ ಘಟ್ಟಗಳಲ್ಲಿ ಮನಸ್ಸಿನ ಚಲನವಲನ ಹಾಗೂ ಅದರ ಚಟುವಟಿಕೆಗಳು, ಆಸೆ-ನಿರಾಸೆ, ಮನಮಂಥನ, ಪತಂಜಲಿಯ ಯೋಗಸೂತ್ರಗಳ ಆಧುನಿಕ ವಿಶ್ಲೇಷಣೆ ಕುರಿತ ಬರವಣಿಗೆಯಿದೆ.
ಈ ದೃಷ್ಟಾಂತಗಳು ಆತ್ಮೀಯ ಶೈಲಿ, ಕಥನಕ್ರಮ ನಿರೂಪಣೆಗಳಿಂದ ಕಿರುಗತೆಗಳಾಗಿಬಿಟ್ಟಿವೆ. ಹೀಗಾಗಿ ರೋಗಿಗಳಾದರೂ ಡೈಜೆಸ್ಟಿನ ನರಸಪ್ಪ, ಕ್ಯಾನ್ಸರಿನ ಕಪಿನೀಪತಿ, ಕರ್ಣಪಿಶಾಚಿ ಕಲ್ಲಪ್ಪ, ಮುಸುರೆ ಅನಸೂಯ, ಮಡಿ ಮಾಲಾಕ್ಷಮ್ಮ ಬ್ಯಾಂಕುಗಳ ರಾಮಭದ್ರ, ಅಮ್ನಿಸಿಯಾದ ಸೀನಪ್ಪ ನಮ್ಮ ಮನಸ್ಸಿನಲ್ಲಿ ಹಲಕಾಲ ಉಳಿದುಬಿಡುತ್ತಾರೆ. ಅಧ್ಯಾಯಾಂತ್ಯದಲ್ಲಿ ಬರುವ ಪತಂಜಲಿಯ ಯೋಗ ಸೂತ್ರಗಳ ವಿವರಣೆ ವ್ಯಾಖ್ಯಾನಗಳು ಉಪಯುಕ್ತವಾಗಿರುವುದಲ್ಲದೆ ಮನಸ್ಸನ್ನು ಕುರಿತ ಭಾರತೀಯರ ಚಿಂತನಕ್ರಮವನ್ನರಿಯಲು ಸಹಾಯಕವಾಗಿವೆ. ಇಲ್ಲಿ ಪರಿಭಾಷೆಗಳ ಹೆಚ್ಚಳ ಮತ್ತು ಗೊಂದಲಗಳಿಲ್ಲದಿರುವುದರಿಂದಲೂ, ಲೇಖಕರು ಈ ವಿಷಯವನ್ನು ಅರಗಿಸಿಕೊಂಡು ಅದನ್ನು ನಿರೂಪಿಸುತ್ತಿರುವುದರಿಂದಲೂ ಓದುಗನಿಗೆ ತಲಪಬೇಕಾದ ಅರ್ಥವಾಗಬೇಕಾದ ಸಂಗತಿಗಳು ನೇರವಾಗಿ ಸಲೀಸಾಗಿಯೂ ತಲುಪುತ್ತವೆ; ಅರ್ಥವಾಗುತ್ತವೆ.
ವೃತ್ತಿಯಿಂದ ವೈದ್ಯರೂ, ಪ್ರವೃತ್ತಿಯಿಂದ ನಗೆಸಾಹಿತಿಗಳೂ ಆದ ಎಂ. ಶಿವರಾಂ ಅವರ 'ಮನಮಂಥನ' ಈ ದಶಕದ ಕನ್ನಡ ಗ್ರಂಥಗಳಲ್ಲಿಯೇ ಒಂದು ವಿಶಿಷ್ಟವೂ ನವೀನವೂ ಆದ ಕೃತಿ. ಇದು ಕತೆಯಲ್ಲ, ಕಾದಂಬರಿಯಲ್ಲ ; ಆದರೆ ಅವುಗಳ ನೆಲೆಗಟ್ಟಿನಲ್ಲಿ ಮನಸ್ಸಿನ ರೂಪ ಸ್ವರೂಪಗಳನ್ನು ಮನೋವ್ಯಾಧಿಗಳ ವೈವಿಧ್ಯ, ಕಾರಣ-ಪ್ರೇರಣೆ, ಸ್ವರೂಪ ವಿಶ್ಲೇಷಣೆ ಮತ್ತು ಚಿಕಿತ್ಸೆಗಳನ್ನು ತಿಳಿಸಿಕೊಡುವ ಅಪರೂಪದ ಪುಸ್ತಕವಾಗಿದೆ. ಇದು ಮನಃಶಾಸ್ತ್ರವನ್ನು ಕುರಿತ ಒಂದು ಕಾವ್ಯಕೃತಿಯಾಗಿಬಿಟ್ಟಿದೆ.
ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಆತಂಕ, ಪ್ಯಾರಾನಾಯ್ಡ್ ಅವಸ್ಥೆ, ಹಿಸ್ಟೀರಿಯಾ, ಒಬ್ಸೆಷನ್, ಅವಾಸ್ತವ ಭ್ರಮೆ, ಸ್ಕಿಜೋಫ್ರೆನಿಯಾ, ಅಮ್ನಿಸಿಯಾ, ದೈಹಿಕ ವ್ಯಾಧಿಗಳಿಂದ ಬರುವ ಮನೋವ್ಯಾಧಿಗಳು ಮತ್ತು ಈ ಎಲ್ಲವುಗಳ ಚಿಕಿತ್ಸೆಗಳಿಗೆ ಸಂಬಂಧಿಸಿದ ಮೂಲಭೂತ ತತ್ವಗಳನ್ನು ಕುರಿತು ಬರೆದ ಪ್ರತ್ಯೇಕವಾದ ಒಂಬತ್ತು ಅಧ್ಯಾಯಗಳಿವೆ. ಎರಡನೆಯ ಭಾಗದಲ್ಲಿ ದೇಹ ಮತ್ತು ಮನಸ್ಸು, ಮನಸ್ಸಿನ ಸ್ವರೂಪ, ಮೆದುಳು, ಮಾನವನ ಬೇರೆ ಬೇರೆ ಘಟ್ಟಗಳಲ್ಲಿ ಮನಸ್ಸಿನ ಚಲನವಲನ ಹಾಗೂ ಅದರ ಚಟುವಟಿಕೆಗಳು, ಆಸೆ-ನಿರಾಸೆ, ಮನಮಂಥನ, ಪತಂಜಲಿಯ ಯೋಗಸೂತ್ರಗಳ ಆಧುನಿಕ ವಿಶ್ಲೇಷಣೆ ಕುರಿತ ಬರವಣಿಗೆಯಿದೆ. ಪರಿವಿಡಿಯಲ್ಲೇನೋ, ಇವನ್ನು ಹನ್ನೆರಡು ಪ್ರತ್ಯೇಕ ಅಧ್ಯಾಯಗಳಾಗಿ ಸೀಳಿ ಸೂಚಿಸಿದೆ; ಆದರೆ ವಸ್ತು ನಿರ್ವಹಣೆಯಲ್ಲಿ ಹೀಗೆ ಪ್ರತ್ಯೇಕತೆ ತೋರದೆ ಇವನ್ನು ಒಳಶೀರ್ಷಿಕೆಗಳಾಗಿ ನೀಡಿ ಇಡೀ ಎರಡನೆಯ ಭಾಗದ ಬರವಣಿಗೆಯನ್ನು ಒಂದು ಅಖಂಡ ಘಟಕವಾಗಿಯೇ ನಿರೂಪಿಸಿದೆ. ಮೊದಲ ಭಾಗದ ಬರವಣಿಗೆ ಗಾತ್ರದಲ್ಲಿ ಎರಡನೆಯದಕ್ಕಿಂತ ಹೆಚ್ಚಾಗಿರುವಂತೆಯೇ, ನಿರೂಪಣ ಗುಣದಲ್ಲಿಯೂ ಹೆಚ್ಚು ಆಕರ್ಷಕವಾಗಿದೆ.
ಮೊದಲ ಭಾಗದಲ್ಲಿ ಮನೋವ್ಯಾಧಿಗಳ ಸ್ವರೂಪ ವೈವಿಧ್ಯಗಳನ್ನು, ಗುಣಲಕ್ಷಣಗಳನ್ನು ವಿವರಿಸುವಾಗ ಲೇಖಕರು ನೂರಾರು ಸಣ್ಣ, ದೊಡ್ಡ ದೃಷ್ಟಾಂತಗಳನ್ನು ಸಾಲು ಸಾಲಾಗಿ ಕೊಡುತ್ತ ಹೋಗುತ್ತಾರೆ. "ದೃಷ್ಟಾಂತಗಳಿಗೆ ಮೊದಲೋ, ತರುವಾಯವೋ, ನಡುವೆಯೋ ಆ ಸಂಬಂಧವಾದ ವ್ಯಾಧಿಯ ಸ್ವರೂಪ ಕುರಿತು ಕೆಲವು ಮಾತುಗಳನ್ನು ಬರೆಯುತ್ತಾರೆ. ದೃಷ್ಟಾಂತಗಳಿಂದಲೇ ಮನವರಿಕೆಯಾಗುವ ರೋಗದ ಸ್ವರೂಪ, ಈ ವಿಶ್ಲೇಷಕ ಮಾತುಗಳಿಂದ ಇನ್ನೂ ವಿಶದವಾಗಿ ತಿಳಿಯುತ್ತದೆ; ಖಚಿತತೆಯನ್ನು ಸಾಧಿಸಿಕೊಳ್ಳುತ್ತದೆ. ಈ ಭಾಗದ ಬರವಣಿಗೆಯ ಸೊಗಸು ಸ್ವಾರಸ್ಯಗಳೆಲ್ಲ ಈ ದೃಷ್ಟಾಂತಗಳ ಒಡಲಲ್ಲಿ ಅಡಗಿದೆ. ಲೇಖಕರು ಒಂದೊಂದು ದೃಷ್ಟಾಂತವನ್ನೂ ಆತ್ಮವಾಚಕ ಶೈಲಿ, ಸಂಭಾಷಣೆಯ ಸಿಂಚನ, ನೇರ ನಿರೂಪಣೆಯ ಸಾರಳ್ಯಗಳಿಂದ ಬೆರೆಸಿ ಚಚ್ಚೌಕವಾದ ಘಟನಾಚಿತ್ರಗಳಾಗಿ ಕಡೆದಿದ್ದಾರೆ. ಸ್ವಾನುಭವ ಸಮೃದ್ಧಿ ಸೂಸಾಡುವ ಈ ದೃಷ್ಟಾಂತಗಳು ಆತ್ಮೀಯ ಶೈಲಿ, ಕಥನಕ್ರಮ ನಿರೂಪಣೆಗಳಿಂದ ಕಿರುಗತೆಗಳಾಗಿಬಿಟ್ಟಿವೆ. ಹೀಗಾಗಿ ರೋಗಿಗಳಾದರೂ ಡೈಜೆಸ್ಟಿನ ನರಸಪ್ಪ, ಕ್ಯಾನ್ಸರಿನ ಕಪಿನೀಪತಿ, ಕರ್ಣಪಿಶಾಚಿ ಕಲ್ಲಪ್ಪ, ಮುಸುರೆ ಅನಸೂಯ, ಮಡಿ ಮಾಲಾಕ್ಷಮ್ಮ ಬ್ಯಾಂಕುಗಳ ರಾಮಭದ್ರ, ಅಮ್ನಿಸಿಯಾದ ಸೀನಪ್ಪ ನಮ್ಮ ಮನಸ್ಸಿನಲ್ಲಿ ಹಲಕಾಲ ಉಳಿದುಬಿಡುತ್ತಾರೆ ! ಅವರೂ, ಅವರ ಸ್ವಭಾವ ವರ್ತನೆಗಳು, ಚಲನವಲನಗಳು ನಮ್ಮ ಮನಸ್ಸಿನಲ್ಲಿ ಆಗೀಗಲಾದರೂ ಸುಳಿದು ಸೂಸಾಡುವಷ್ಟು ಪ್ರಭಾವಕಾರಿಯಾಗಿದೆ. ಈ ದೃಷ್ಟಾಂತಗಳ ನಿರೂಪಣೆ, ಎರಡನೆಯ ಭಾಗದ ಬರವಣಿಗೆಯಲ್ಲಿ ಆಧುನಿಕ ಹಾಗೂ ಪಾಶ್ಚಾತ್ಯ ಮನೋವಿಜ್ಞಾನ ಸಿದ್ಧಾಂತಗಳ ನೆಲೆಗಟ್ಟಿದೆ. ಈ ಭಾಗದ ಬರವಣಿಗೆಯಲ್ಲಿ ಲೇಖಕರು ಬಳಸುವ ಉಪಮೆ, ರೂಪಕಗಳಿಂದ ಅದರಲ್ಲೂ ಹಗ್ಗ ಕಡೆಗೋಲು ಮಡಕೆ ಮೊಸರುಗಳ ಹೋಲಿಕೆಯಿಂದ ವಿಷಯ ಮನದಟ್ಟಾಗುತ್ತದೆ. ಅಧ್ಯಾಯಾಂತ್ಯದಲ್ಲಿ ಬರುವ ಪತಂಜಲಿಯ ಯೋಗ ಸೂತ್ರಗಳ ವಿವರಣೆ ವ್ಯಾಖ್ಯಾನಗಳು ಉಪಯುಕ್ತವಾಗಿರುವುದಲ್ಲದೆ ಮನಸ್ಸನ್ನು ಕುರಿತ ಭಾರತೀಯರ ಚಿಂತನಕ್ರಮವನ್ನರಿಯಲು ಸಹಾಯಕವಾಗಿವೆ. ಇಲ್ಲಿ ಪರಿಭಾಷೆಗಳ ಹೆಚ್ಚಳ ಮತ್ತು ಗೊಂದಲಗಳಿಲ್ಲದಿರುವುದರಿಂದಲೂ, ಲೇಖಕರು ಈ ವಿಷಯವನ್ನು ಅರಗಿಸಿಕೊಂಡು ಅದನ್ನು ನಿರೂಪಿಸುತ್ತಿರುವುದರಿಂದಲೂ ಓದುಗನಿಗೆ ತಲಪಬೇಕಾದ ಅರ್ಥವಾಗಬೇಕಾದ ಸಂಗತಿಗಳು ನೇರವಾಗಿ ಸಲೀಸಾಗಿಯೂ ತಲುಪುತ್ತವೆ; ಅರ್ಥವಾಗುತ್ತವೆ.
ಕನ್ನಡದಲ್ಲಿ ಮನೋವಿಜ್ಞಾನವನ್ನು ಕುರಿತು ಬಂದಿರುವ ಸಾಹಿತ್ಯದಲ್ಲಿ, ಸ್ವತಂತ್ರ ಹಾಗೂ ಸೋಪಜ್ಞ ಕೃತಿಗಳು ಇಲ್ಲವೆನ್ನುವಷ್ಟು ವಿರಳ. ಇಂಗ್ಲಿಷ್ ಕೆಲವು ಪ್ರೌಢ ಕೃತಿಗಳ ಕನ್ನಡಾನುವಾದಗಳು ಬಂದಿದ್ದರೂ ಅವು ಸಾಮಾನ್ಯ ಓದುಗಾಗಿಯಲ್ಲ ; ಅಲ್ಲದೆ ಅವುಗಳಲ್ಲಿರುವ ಪರಿಭಾಷೆಗಳ ಹೆಚ್ಚಳ ಗೊಂದಲಗಳು ಕೃತಿಯೋದನ್ನು ಸಲೀಸಾಗಿಸುವುದಿಲ್ಲ. ಆದ್ದರಿಂದ 'ಮನಮಂಥನಕ್ಕೆ' ಕನ್ನಡದಲ್ಲಿ ಒಂದು ಪ್ರತ್ಯೇಕ ಸ್ಥಾನವಿದೆ. ಶಿವರಾಂ ಅವರೇ ಒಂದೂವರೆ ದಶಕಗಳ ಹಿಂದೆ 'ಮನೋನಂದನ' ಎಂಬ ಈ ಬಗೆಯ ಕೃತಿಯೊಂದನ್ನು ಬರೆದಿದ್ದರು. `ಮನಮಂಥನ'ದ ಕೃತಿವಿನ್ಯಾಸ ವಸ್ತು ಅದೇ ಮಾದರಿಯದಾದರೂ ಇಲ್ಲಿನ ವಾಪ್ತಿ ವೈವಿಧ್ಯ ಪ್ರಭಾವ ಪರಿಣಾಮಗಳು ಅದಕ್ಕಿಂತ ಭಿನ್ನವಾದವು. ಗಾಢವಾದವು. ಈ ಪುಸ್ತಕದ ಪರಿಣಾಮ ಮತ್ತು ಆವರಿಕೆಗಳು ಎಪ್ಪರಮಟ್ಟಿಗಿದೆಯೆಂದರೆ ಇದನ್ನೋದಿದ ಮೇಲೆ ಓದುಗರು ಇಲ್ಲಿನ ಯಾವುದಾದರೂ ಒಂದು ಬಗೆಯ ರೋಗಕ್ಕೆ ತಾವು ಬಲಿಯಾಗಿದ್ದೇವೆಯೋ ಎಂಬ ಅನುಮಾನ ಭ್ರಮೆಗಳಿಂದ ತಮ್ಮ ಚಟುವಟಿಕೆ ಮತ್ತು ಚಲನವಲನಗಳನ್ನು ನೆನಪಿಗೆ ತಂದು ಕೊಳ್ಳುವುದುಂಟು! ಈ ಅಂಜಿಕೆಯಿಂದಲೇ ನನ್ನ ಕೆಲವು ಮಿತ್ರರು ಮತ್ತು ಬಂಧುಗಳು ಈ ಪ್ರಸ್ತಕವನ್ನು ಓದಲು, ತೆಗೆದು ನೋಡಲು ಹಿಂಜರಿದದ್ದೂ, ಬೇಡವೆಂದದ್ದೂ ಉಂಟು! ಆದರೆ ಹೀಗಾಗುವುದು ಚಿತ್ತಸ್ವಾಸ್ಥ್ಯದ ಚಿಹ್ನೆ ಎಂದು ಲೇಖಕರು ಈ ಪುಸ್ತಕದಲ್ಲಿ ಒಂದೆಡೆ ಹೇಳಿದ್ದಾರೆ (ವ. ೩೪೬). ಇದೇನಿದ್ದರೂ ಶುದ್ದ ಸಾಹಿತ್ಯೇತರವಾದ ಈ ಸಾಮಾನ್ಯರನ್ನೂ ಸಾಹಿತ್ಯಾಸಕ್ತರನ್ನೂ ಸಮಸಮವಾಗಿ ಆಕರ್ಷಿಸುವುದು ಆಧುನಿಕ ಕನ್ನಡ ಸಾಹಿತ್ಯದ ಸೋಜಿಗ ಸೊಗಸು ಸಾಧನೆಗಳಲ್ಲೊಂದಾಗಿದೆ.
-ಎನ್. ಎಸ್. ತಾರಾನಾಥ
ಮನ ಮಂಥನ (ಮನೋವಿಜ್ಞಾನ)
ಮೊದಲನೆಯ ಆವೃತ್ತಿ 1974
ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು 560018
ಡೆಮ್ಮಿ ಅಷ್ಟ 413 ಪುಟಗಳು ಬೆಲೆ ರೂ.17-50
ಕೃಪೆ: ಗ್ರಂಥಲೋಕ, ಜನೆವರಿ 1981
©2024 Book Brahma Private Limited.