‘ಇದಕ್ಕೊಂದು ಪದವ ತೊಡಿಸು’ ದಿವಂಗತ ಜಿ.ಕೆ. ರವೀಂದ್ರ ಕುಮಾರ್ ಅವರ ಸಮಗ್ರ ಕಾವ್ಯ. ಅಗಲಿದ ಕವಿ, ಲೇಖಕ ರವೀಂದ್ರ ಕುಮಾರ್ ಅವರ ಸಿಕಾಡ, ಪ್ಯಾಂಜಿಯಾ, ಕದವಿಲ್ಲದ ಊರಲ್ಲಿ, ಒಂದು ನೂಲಿನ ಹಾಡು, ಮರವನಪ್ಪಿದ ಬಳ್ಳಿ ಸೇರಿದಂತೆ ಉಳಿದ ಅವರ ಕವಿತೆಗಳನ್ನೂ ಒಟ್ಟು ಗೂಡಿಸಿರುವ ಕೃತಿ.
ರವೀಂದ್ರ ಕುಮಾರ್ ಅವರು ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸಮಾಡಿದರೂ ತಮ್ಮ ಕಾಣ್ಕೆಗಳನ್ನು ಅಭಿವ್ಯಕ್ತಿಸಲು ಕವಿತೆಗಳನ್ನೇ ಪ್ರಬಲ ಮಾಧ್ಯಮವಾಗಿ ಆಯ್ದುಕೊಂಡಿರುವುದಕ್ಕೆ ಈ ಪುಸ್ತಕ ಸಾಕ್ಷಿ ನುಡಿಯುತ್ತದೆ.
ಕವಿತೆಯ ಜೀವ, ಚಿತರದ ಬೆರಗು, ಆತ್ಮದ ನಾದ-ವಿಜಯ ಕರ್ನಾಟಕ
ರವೀಂದ್ರ ಕಾವ್ಯ
ಚಿತ್ರದುರ್ಗದ ಜಿಕೆ ರವೀಂದ್ರ ಕುಮಾರ್ ಕಾವ್ಯ ಕೂಡ ಚಿತ್ರವತ್ತಾಗಿಯೇ ಇರುತ್ತದೆ. ಅವರು ಪ್ರಕಟಿಸಿದ ಸಿಕಾಡ, ಪ್ಯಾಂಜಿಯಾ, ಕದವಿಲ್ಲದ ಊರಲ್ಲಿ ಒಂದು ನೂಲಿನ ಜಾಡು ಮುಂತಾದ ಸಂಕಲನಗಳನ್ನು ಕಾವ್ಯ ಪ್ರಿಯರು ಮರೆತಿರಲಾರರು. ತಾವು ಬರೆಯುವುದರ ಜೊತೆಗೇ ಕವಿ, ವಿಮರ್ಶಕ, ಕತೆಗಾರರನ್ನು ಆಕಾಶವಾಣಿಗೆ ಕರೆಸಿ ಅವರಿಂದ ಕತೆ, ಕವಿತೆ ಓದಿಸಿ ಸಂಭ್ರಮ ಪಡುತ್ತಿದ್ದವರು ಜಿಕೆಆರ್. ಕನ್ನಡ ನಾಡು ಕುರಿತ 365 ಕಾರ್ಯಕ್ರಮಗಳ ಸರಣಿ ಸಿರಿಗನ್ನಡಂ ಗೆಲ್ಗೆ, ಮೈಸೂರು ಅರಮನೆ ಕುರಿತ ರೂಪಕ ಮಾಲೆ ಮುಂತಾದ ಅನೇಕ ಮೌಲಿಕ ಸರಣಿಗಳನ್ನು ನೀಡಿದ್ದಾರೆ. ಸಂಗೀತದ ಆಳವಾದ ಜ್ಞಾನ ಮತ್ತು ಅಭಿರುಚಿಯಿದ್ದವರು ಅವರು. ನಾವೆಲ್ಲ ಮನುಷ್ಯರಾಗಿ ಬಾಳುತ್ತಿದ್ದರೆ ಈ ಕವಿತೆಗಳು ಮೂಡುತ್ತಿರಲಿಲ್ಲವೇನೋ ಎಂದು ಬರೆದವರು ಅವರು. ಎಷ್ಟು ನಿಗೂಢ ವಿಶ್ವಗೊಡವೆ ದಣಿದ ಅಕ್ಷರಗಳೆಲ್ಲ ಅದರ ಒಡವೆ ಎಂಬ ಸಾಲುಗಳು ಅವರ ವಾಸ್ತವ ಮತ್ತು ಕಾವ್ಯಲೋಕದ ಅನುಸಂಧಾನದ ಮಾರ್ಗದಂತೆ ಕೇಳಿಸುತ್ತವೆ. ಇದೀಗ ಅವರ ಸಮಗ್ರ ಸಂಕಲನವನ್ನು ಪರಸ್ಪರ ಪ್ರಕಾಶನ ಪ್ರಕಟಿಸುತ್ತಿದೆ. ಇದಕ್ಕೊಂದು ಪದವ ತೊಡಿಸು ಎಂಬ ಬರೋಬ್ಬರಿ 600 ಪುಟಗಳ ಸಮಗ್ರ ಕಾವ್ಯ ಸಂಪುಟದಲ್ಲಿ ನಿಮಗೆ ರವೀಂದ್ರಕುಮಾರ್ ಪ್ರತಿಭೆ, ಗ್ರಹಿಕೆ ಮತ್ತು ಸೂಕ್ಷ್ಮ ಜತೆ ಸಿಗುತ್ತದೆ.
ಕೃಪೆ: ಕನ್ನಡಪ್ರಭ, ಬಿಸಿಲು ನೆರಳು (2020 ಜನವರಿ 12)
©2024 Book Brahma Private Limited.