ಮಹಿಳಾ ಕಾವ್ಯಕ್ಕೆ ಹೊಸ ಶಕ್ತಿ, ಹೊಸ ಸಂವೇದನೆ ನೀಡಿದವರು ಎಚ್. ಎಲ್. ಪುಷ್ಟ. ಅವರ ಮೂರು ದಶಕಗಳ ಸಮಗ್ರ ಕಾವ್ಯ ‘ಮದರಂಗಿ ವೃತ್ತಾಂತ’. ಕಾವ್ಯದ ಪ್ರತಿಮೆ, ಭಾಷೆ, ಆಕೃತಿಗಳು ಆವಿಷ್ಕಾರಗೊಂಡು ಓದುಗರನ್ನು ಚಕಿತಗೊಳಿಸುತ್ತವೆ. ಪ್ರೀತಿಯ, ಆತ್ಮ ಸಂಗಾತದ ಹಲವು ಆಯಾಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಿರುವುದು ಸ್ವಗತದಂತಿವೆ.
ಕನ್ನಡದ ಮುಖ್ಯ ಕವಯತ್ರಿಯರಲ್ಲೊಬ್ಬರಾದ ಎಚ್.ಎಲ್. ಪುಷ್ಪ ಅವರ ಈವರೆಗಿನ ನಾಲ್ಕು ಕವನ ಸಂಕಲನಗಳಾದ 'ಅಮೃತಮತಿಯ ಸ್ವಗತ', 'ಗಾಜುಗೋಳ', 'ಲೋಹದ ಕಣ್ಣು' ಮತ್ತು ಸೋಲಬರಸ್ ಹುಡುಗರು ಹಾಗೂ ಎಕ್ಕದ ಬೀಜ' ಸೇರಿರುವ ಸಮಗ್ರ ಕಾವ್ಯ ಇದು. ವರ್ತಮಾನದ ತಲ್ಲಣಗಳಿಗೆ ಸಂವೇದನಾಪೂರ್ಣ ಪ್ರತಿಕ್ರಿಯೆಯನ್ನು ಅಮೃತಮತಿಯ ರೂಪಕದ ಮೂಲಕ ಆಧುನಿಕ ಸ್ತ್ರೀ ಸಂವೇದನೆಯ ಕವಿತೆ ಬರೆದು ತಮ್ಮ ವೈಶಿಷ್ಟ್ಯವನ್ನು ಸ್ಥಾಪಿಸಿದ್ದವರು ಪುಷ್ಟ. 'ಅಮೃತಮತಿಯ ಸ್ವಗತ', 'ಆಕೆ ಅವನು ಮತ್ತು ನದಿ', 'ಪ್ರೇಮ ಸಿದ್ಧಾಂತಗಳು' ಮತ್ತು 'ಮದರಂಗಿ ವೃತ್ತಾಂತ' ಎಂಬ ಕವಿತೆಗಳನ್ನು ಪುಷ್ಟ ಅವರ ಮೊದಲ ಸಂಕಲನದ ಪ್ರಾತಿನಿಧಿಕ ಕವನಗಳಾಗಿ ನೋಡಬಹುದು. 'ಪ್ರೇಮ ಸಿದ್ಧಾಂತಗಳ" ಕವಿತೆಯಲ್ಲಿ ಹೆಣ್ಣನ್ನು ಅವಳ ಸಂಗಾತಿ ಸದಾ ಕುಡಿದ ಸ್ಥಿತಿಯಲ್ಲಿ ನೋಡಬಯಸುತ್ತಾನೆ. ಅವಳಿಗೆ ಯೋಚಿಸುವ ಶಕ್ತಿಯ ಅಗತ್ಯವಿಲ್ಲ. ವಾಸ್ತವದ ಎಚ್ಚರ ಅಗತ್ಯವಿಲ್ಲ.ಅವನ ಅಗತ್ಯಕ್ಕೆ ತಕ್ಕಂತಿದ್ದರೆ ಸಾಕು. ಅವನ ನಿರೀಕ್ಷೆಗಳನ್ನು ಹೇಳುತ್ತಲೇ ಕವಿತೆ ಅವಳ ಆಸೆಗಳನ್ನೂ ಸೂಚಿಸುವುದರಿಂದ ಕವಿತೆಗೆ ಹಲವು ಆಯಾಮಗಳು ಲಭಿಸಿವೆ.
ಈ ಸಮಗ್ರಕಾವ್ಯ ಸಂಕಲನದ ಶೀರ್ಷಿಕೆಯ ಕವಿತೆ `ಮದರಂಗಿ ವೃತ್ತಾಂತ' 'ಅಮೃತಮತಿಯ ಸ್ವಗತ'ದ ಒಂದು ಮುಖ್ಯ ಕವಿತೆ. ಹೆಣ್ಣನ್ನು ದೇಹವಾಗಿಯೇ ನೋಡುವ ಗಂಡು ಸಮಾಜ ಕುರಿತ ಸಿಟ್ಟು ವ್ಯಂಗ್ಯ ಇಲ್ಲಿ ವೃತ್ತಾಂತವಾಗಿವೆ. ಇದು ಒಂದು ರೀತಿಯಲ್ಲಿ ಪುಷ್ಪ ಅವರ ಕಾವ್ಯ ವಸ್ತುವಿನ ಪ್ರತಿನಿಧಿಯಾಗಿದೆ. ಹಣ್ಣಿನ ಒಳಲೋಕದ ತಳಮಳಗಳು ತಲ್ಲಣಗಳು ಇತಿಹಾಸ.ಪುರಾಣಗಳ ಪ್ರತಿಮೆಯ ಮೂಲಕ ಇಲ್ಲಿ ಕವಿತೆಗಳಾಗಿವೆ. “ಕಲ್ಲಾಗುವ ಹುಡುಗಿಯ ಹಾಡು' ಹೀಗೆ ಎಲ್ಲ ಹುಡುಗಿಯರ ಪಾಡನ್ನು ಹೇಳುವ ಕವಿತೆಯಾಗುತ್ತದೆ 'ಅಹಲೈಯ ಕಥೆ', 'ದೋಸ್ಪಿ ಹಾಗೂ ಹೆಜ್ಜೆಗಳು' ಮಹಾಶ್ವೇತಾದೇವಿಯವರ ಕಥೆಯ ಆಶಯ ಕವಿತೆಯಾಗಿದೆ.
'ಲೋಹದ ಕಣ್ಣು' ಸಂಕಲನದ ಮುನ್ನುಡಿಯಲ್ಲಿ ಮೊದಲ ಎರಡು ಸಂಕಲನಕ್ಕಿಂತ ಭಿನ್ನವಾದ ಕವಿತೆಗಳಿರುವುದನ್ನು ವಿಮರ್ಶಕ ಜಿ ಎಸ್ ಆಮೂರ ಗುರುತಿಸುತ್ತಾ, “ಇಲ್ಲಿಯ ಮಹತ್ವದ ಕವಿತೆಗಳ ಆಧ್ಯಾತ್ಮಿಕ ಗುಣ, ಅಡಿಗರ ನಂತರದ ಕವಿಗಳಲ್ಲಿ ಎಚ್, ಎಸ್. ಶಿವಪ್ರಕಾಶ್‌ರನ್ನು ಬಿಟ್ಟರೆ ಕಾಣಿಸಿಕೊಂಡಿರುವುದು ಅಪರೂಪ' ಎಂದಿದ್ದಾರೆ.
'ದಾರಿ ಕಳೆದುಕೊಂಡಿದೆ ಕವಿತೆ'ಯಲ್ಲಿ ಕವಿತೆಯ ಪೂರ್ವಾಪರಗಳನ್ನು ಶೋಧಿಸುವ ಆಶಯವಿದೆ: ದಾರಿ ಕಳೆದುಕೊಂಡಿದೆ ಈ ನನ್ನ ಕವಿತೆ/ಹೊದಿಸಿದ್ದಾರೆ ಮುಸುಕು ಆ ಗವಾಕ್ಷಿಗೆ/ಕಳೆದುಹೊದ ಕೀ ಸಿಗುವ ತನಾ/ತಳಮಳಿಸುತ್ತಿದೆ ಗಾಳಿ, ಬೆಳಕಿಲ್ಲದೆ ದಾರಿತಪ್ಪಿಸಿಕೊಂಡ ದಾರಿಹೋಕನಂತೆ... ಈ ಹುಡುಕಾಟ, ಅನ್ವೇಷಣೆ ಪುಷ್ಪ ಅವರ ಹಲವು ಕವಿತೆಗಳಲ್ಲಿದೆ.
ಈ ಸಮಗ್ರ ಸಂಪುಟವನ್ನು ಅವಲೋಕಿಸಿದಾಗ ನಮ್ಮ ಅರಿವಿಗೆ ಬರುವ ಒಂದು ಸಂಗತಿ ಎಂದರೆ ತಮ್ಮ ಮೊದಲ ಮೂರು ಸಂಕಲನಗಳಿಗೆ ಹೋಲಿಸಿದರೆ ಅವರ ನಾಲ್ಕನೇ ಸಂಕಲ ' ಸೋಲಬರಸ್ ಹಾಗೂ ಎಕ್ಕದ ಬೀಜ' ಸಂಕಲನದಲ್ಲಿ ಬೇರೆಯದೇ ರೀತಿಯ ಅಭಿವ್ಯಕ್ತಿ ಸಾಧಿಸಿದ್ದಾರೆ. ಪುಷ್ಪ ಅವರ ಸಾಮಾಜಿಕ ಚಿಂತನೆ ಇಲ್ಲಿನ ಹೆಚ್ಚಿನ ಕವಿತೆಗಳ ವಸ್ತು, ಸೋಲಬರಸ್ ಹುಡುಗರ ಹಾಡು ಕಾಶ್ಮೀರದ ಅತಂತ್ರ ಸ್ಥಿತಿಯಲ್ಲಿರುವ ಯುವಕರ ಕುರಿತಾಗಿದೆ: ಕಾಶ್ಮೀರದ ಮಂಜುಹೊದ್ದ ಕಣಿವೆಗಳಲ್ಲಿ/ಪೆಂಗ್ವಿನ್‌ಗಳಂತೆ ಹರಿದಾಡುತ್ತಿದ್ದಾರೆ ಹೊಟ್ಟೆಯ ಮೇಲೆ ಕಾಗಡಾ ಹೊತ್ತು |ಬೇತಾಳದ ನಿಲುವಂಗಿಗಳಲ್ಲಿ ತೋಳು ಬೀಸುತ್ತಾ ಬಸಿರ ಬೇನೆಯಲಿ ಮುದುಕರೂ ಮುದುಕಿಯರೂ/ಮುಟ್ಟಿದರೆ ಮಾಸುವ ಸೇಬುಗಲ್ಲದ ಹುಡುಗರು.
ಈ ಮುಗ್ಧರು ಭಯೋತ್ಪಾದಕರೆಂಬ ಹಣೆಪಟ್ಟಿ ಧರಿಸಬೇಕಾದ ಸನ್ನಿವೇಷ.ಇಡೀ ಪರಿಸರ ಕೊಳೆತ ಸೇಬುಗಳು ಮುದುಡಿದ ಕೇಸರಿ ಹೂಗಳ ನಡುವೆ. ಈ ಭವಿಷ್ಯದ ಕೂಸುಗಳು ಮುಷ್ಕರ ಕಪ್ಪು ಗುಂಡೇಟುಗಳ ನಡುವೆ ದಾರಿ ತಪ್ಪುತ್ತಿವೆ ಎಂಬುದನ್ನು ಕವಯತ್ರಿ ಇಲ್ಲಿ ಸಮರ್ಥವಾಗಿ ಬಿಂಬಿಸಿದ್ದಾರೆ: ಎಲ್ಲಿ ಬಿಡುಗಡೆಯ ನಡೆಯಿದೆಯೋ/ ಎಲ್ಲಿ ಸ್ವಾತಂತ್ರದ ಚೆಂದದ ಗಾಳಿ ಬೀಸುತದೆಯೋ/ಎಲ್ಲಿ ಕೊಳೆಯದ ಸೇಬಿನ ರಾಶಿಗಳಿವೆಯೋ, ಎಲ್ಲಿ ಕುಂಕುಮ ಕೇಸರದ ಪುಟ್ಟ ಹೂಗಳಿವೆಯೋ/ಆಲ್ಲಿ ಭಾರತದ ಮಕುಟಮಣಿಗಳಿದ್ದಾರೆ ಕವಿತೆ ಮುಂದುವರೆದು ಗಾಂಧಿಯ ಕನಸಿನ ಭಾರತ ಪುಟ ತೆರೆದು ಬಿಚ್ಚಿಕೊಳ್ಳುತ್ತದೆ. ಎಂಬ ಆಶಾವಾದ ಕವಿಯದು.
ಪುಷ್ಟ ತಮ್ಮ ಇನ್ನೊಂದು ಕವನ 'ಕವಿ ಮತ್ತು ಕಾವ್ಯ'ದಲ್ಲಿ ಶತಮಾನಗಳಿಂದಲೂ ಕೇಳಿಬರುವ ಹಳೆಯ ಮಾತೆಂದರೆ/ ದೇಶ ಪಲವಾದರೂ ಭಾಷೆ ಕೆಲವಾದರೂ/ ಒಳಗಿರುವ ಆತ್ಮವೊಂದೇ ಎಂದು ತಮ್ಮ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ. 'ಮಂಡೇಲಾ ಎಂಬ ಯೂನಿವರ್ಸಿಟಿಗೆ', 'ಶಿವಾಪುರದ ಕಂಬಾರರಿಗೆ ನಮನ', 'ಎಚ್ ಎನ್ ಎಂಬ ನೆನಪಿಗೆ', 'ಮಲ್ಲಿಗೆಯ ಕವಿಯೊಂದಿಗೆ ಒಂದಷ್ಟು ಮಾತು', 'ಕ್ಲಿಯೋಪಾತಾಳ ಉತ್ಸವ ನೌಕೆ'ಯಂತಹ ವ್ಯಕ್ತಿವಿಚಾರ ಕೇಂದ್ರಿತ ಕವಿತೆಗಳೂ ಈ ಸಂಪುಟದಲ್ಲಿ ನಮ್ಮ ಗಮನ ಸೆಳೆಯುತ್ತವೆ.
ಇನ್ನೊಂದು ಗಮನ ಸೆಳೆವ ಕವಿತೆ 'ಆತ್ಮ ಕಥೆ': 'ಅವಳೇ ಹೊಕ್ಕ ಮನೆಯ ಬಾಗಿಲನು ಬಡಿದು/ ಹೊರಬರುವುದೆಂದರೆ ಲೋಗರ ಕಣ್ಣಲ್ಲಿ ನಿರ್ವಾಣವೇ ನಿರ್ಮೊಹವೇ ಅಥವಾ ನಿವೃತ್ತಿಯೇ?/ ತೊಗಲೆಂಬ ಸೂತ್ರದ ಬೊಂಬೆಯ ಮಣಿಸಿ ಆತ್ಮಕ್ಕೆ ಹುಲ್ಲು ತುಂಬುವ ಆಟ...
ಈ ಸಂಪುಟದಲ್ಲಿ ತೆಲುಗು,ಸಿಂಧಿ,ಕೊಂಕಣಿ, ಸಂತಾಲಿ, ಮಣಿಪುರಿ ಭಾಷೆಗಳಿಂದ ಅನುವಾದಿಸಿದ ಆರು ಕವಿತೆಗಳೂ ಸೇರಿವೆ.
ಕವಯತ್ರಿ ಪುಷ್ಪ ಅವರ ಕಾವ್ಯದ ವಸ್ತು ವೈವಿಧ್ಯಮಯವಾಗಿದೆ. ಸಾಂಪ್ರದಾಯಿಕ ಕಾವ್ಯ ಭಾಷೆಯ ಲಯ, ಪ್ರಾಸಗಳನ್ನೆಲ್ಲ ಬದಿಗಿಟ್ಟು ತಮ್ಮದೇ ಆದ ಸಂಕೀರ್ಣ ಅಭಿವ್ಯಕ್ತಿ ಕ್ರಮವನ್ನು ಈ ಕವಿ ಸಾಧಿಸಿದ್ದಾರೆ. ಇದು ಪುಷ್ಪ ಅವರ ಈವರೆಗಿನ ಕಾವ್ಯ. ಅವರ ಕಾವೈ ಹೀಗೆ ವೈವಿಧ್ಯಮಯವಾಗಿ ಬೆಳೆಯಲಿ ಎಂದು ಹಾರೈಸುವೆ.
- ಎಲ್.ಎಸಿ ಸುಮಿತ್ರಾ
ಕೃಪೆ: ಹೊಸ ಮನುಷ್ಯ ಆಗಸ್ಟ್ 2020
©2024 Book Brahma Private Limited.