ಕಾಸರಗೋಡಿನ ಕನ್ನಡ ಸಾಂಸ್ಕೃತಿಕ ಲೋಕದ ಅಪೂರ್ವ ಕವಿಪ್ರತಿಭೆ ಪೆರಡಾಲ ಕೃಷ್ಣಯ್ಯ (1893-1973). ಕನ್ನಡ ಅಧ್ಯಾಪಕ, ಕವಿ, ಯಕ್ಷಗಾನ ಕವಿ, ಲೇಖಕ, ಗ್ರಂಥ ಸಂಪಾದಕರಾಗಿ ಗಡಿನಾಡಿನಲ್ಲಿ ಸದ್ದಿಲ್ಲದೆ ಕನ್ನಡ ಸೇವೆ ಮಾಡಿದವರು. ನೂರಾರು ಕನ್ನಡ ಪಂಡಿತರನ್ನು ಸಿದ್ಧಗೊಳಿಸಿ, ವಿದ್ವಾನ್ ಪದವಿ ದೊರಕಿಸಿಕೊಟ್ಟು, ಕರಾವಳಿ, ಕೊಡಗು ಜಿಲ್ಲೆಗಳಲ್ಲಿ ಕನ್ನಡ ಪಂಡಿತ ಪರಂಪರೆಯೊಂದು ಬೆಳೆಯಲು ಕಾರಣರಾದವರು. ಅವರ ಅಪ್ರಕಟಿತವೂ ಅಲಭ್ಯವೂ ಆಗಿದ್ದ ಬರಹಗಳನ್ನು ಸಂಪಾದಿಸಿ, ಸಂಕಲಿಸಿ ಪ್ರಕಟಗೊಳಿಸಿದ ಸಮಗ್ರ ಸಾಹಿತ್ಯ ಸಂಪುಟ. ಹಲವಾರು ಬಿಡಿ ಕವನಗಳನ್ನೂ, ಶತಕ, ಷಟ್ಪದಿ, ರಗಳೆ ಮುಂತಾದ ಛಂದೋರಚನೆಗಳನ್ನೂ, ಎರಡು ಯಕ್ಷಗಾನ ಪ್ರಸಂಗಗಳನ್ನೂ, ದೇವೀ ಮಹಾತ್ಮೆ ಎಂಬ ಭಾಮಿನಿ ಷಟ್ಪದಿಯಲ್ಲಿರುವ 700 ಪದ್ಯಗಳ ಸಂಪಾದಿತ ಕಾವ್ಯವನ್ನೂ ಸಂಪಾದಕ ವರದರಾಜ ಚಂದ್ರಗಿರಿ ಅವರ ಈ ಕೃತಿಯು ಒಳಗೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಡಾ. ವರದರಾಜ ಚಂದ್ರಗಿರಿ ಅವರು ಖ್ಯಾತ ಸಾಹಿತಿ, ಚಿಂತಕರಾಗಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಪರಿಚಿತರಾಗಿದ್ದಾರೆ. ಅವರು ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾಗಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ...
READ MORE