ಶಿಶು ಸಾಹಿತ್ಯದ ಅಗ್ರಗಣ್ಯರಾದ ಡಾ|| ಜಿ ಪಿ ರಾಜರತ್ನಂ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ 2008ರಲ್ಲಿ ಇವರ ಸಮಗ್ರ ಮಕ್ಕಳ ಸಾಹಿತ್ಯವನ್ನೂ ಏಕೀಕೃತಗೊಳಿಸಿ ಕನ್ನಡ ಸಂಸ್ಕೃತಿ ಇಲಾಖೆ ಹಾಗು ಸಾಹಿತ್ಯ ಅಕೇಡಮಿಗಳು ಒಟ್ಟು6 ಸಂಪುಟಗಳಲ್ಲಿ ಪ್ರಕಟಿಸಿದೆ . ಪುರಾಣ ಇತಿಹಾಸದ ಕಥೆಗಳು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ 2 ಭಾಗಗಳಲ್ಲಿ ಪ್ರಕಟವಾಗಿರುತ್ತವೆ . ಅದರಲ್ಲಿ ಮೊದಲನೇ ಭಾಗದ ಪರಿಚಯ ಇವತ್ತು ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ . 567 ಪುಟಗಳ ಈ ಬೃಹತ್ ಪುಸ್ತಕದಲ್ಲಿ , ಪುರಾಣ-ಇತಿಹಾಸಗಳಿಗೆ ಗಳಿಗೆ ಸಂಬಂಧಪಟ್ಟ 125 ಮಕ್ಕಳ ಕಥೆಗಳಿವೆ .ಇವುಗಳಲ್ಲಿ ರಾಮಾಯಣ , ಮಹಾಭಾರತ ಭಾಗವತ ಇತ್ಯಾದಿಗಳಿಗೆಲ್ಲ ಸಂಬಂಧ ಪಟ್ಟ ಕಥೆಗಳಿವೆ . ಅದರಲ್ಲೂ ಮಹಾಭಾರತಕ್ಕೆ ಸಂಬಂಧ ಪಟ್ಟಂತೆ ಲೇಖಕರು ವ್ಯಾಸ ಭಾರತ , ಭಾಸನ ಭಾರತ , ಪಂಪ ಭಾರತಗಳೆಲ್ಲದ್ದರಿಂದ ಕಥೆಗಳನ್ನು ಸಂಗ್ರಹ ಮಾಡಿದ್ದಾರೆ . ಕಥೆಗಳೆಲ್ಲವೂ ಅದ್ಭುತವಾಗಿ ನಿರೂಪಿಸಲ್ಪಟ್ಟಿವೆ . ಅದರಲ್ಲೂ ಸ್ನೇಹದ ಕಥೆಗಳು ಎನ್ನುವ ವಿಭಾಗ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಮೊದಲ ಭಾಗದಲ್ಲಿ 11 ಹಾಗು ಎರಡನೇ ಭಾಗದಲ್ಲಿ 14 ಕಥೆಗಳಿರುತ್ತವೆ . ಮುದ್ರಾ ಮಂಜೂಷದಿಂದ ಆಯ್ದು ಕೊಳ್ಳಲಾದ ಚಂದನ ದಾಸ ಹಾಗು ಅಮಾತ್ಯ ರಾಕ್ಷಸರ ಸ್ನೇಹದ ಕಥೆ ಅದ್ಭುತವಾಗಿ ನಿರೂಪಿಸಲ್ಪಟ್ಟಿದೆ . ಅಂತೆಯೇ ಇದೇ ವಿಭಾಗದ ಮೊದಲ ಅಧ್ಯಾಯದಲ್ಲಿ ಕೃಷ್ಣ-ಕುಚೇಲರ ಹಾಗು ಕರ್ಣ ದುರ್ಯೋಧನರ ಕಥೆಗಳು ಸಹಾ ಸುಂದರವಾಗಿವೆ . ಏಕಲವ್ಯನ ಕಥೆಗಳಿಗಾಗಿಯೇ ಒಂದಿಡೀ ಭಾಗ ಮೀಸಲಿಟ್ಟಿದ್ದು ಇದರಲ್ಲಿ ಏಕಲವ್ಯನಿಗೆ ಸಂಬಂಧ ಪಟ್ಟ 9 ಕಥೆಗಳಿವೆ .
©2024 Book Brahma Private Limited.