ಮೂಲತ: ಚಿತ್ರದುರ್ಗ ಜಿಲ್ಲೆಯವರಾದ ಜಿ.ಕೆ.ರವೀಂದ್ರಕುಮಾರ್ ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಕಾಶವಾಣಿಯ ಭದ್ರಾವತಿ, ಧಾರವಾಡ, ಕಾರವಾರ, ಮಡಿಕೇರಿ, ಮೈಸೂರು ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. `ಸಿಕಾಡ', 'ಪ್ಯಾಂಜಿಯ', 'ಕದವಿಲ್ಲದ ಊರಲ್ಲಿ', 'ಒಂದುನೂಲಿನ ಜಾಡು' ಹಾಗು 'ಮರವನಪ್ಪಿದ ಬಳ್ಳಿ' ಕವನ ಸಂಕಲನಗಳನ್ನು ಪ್ರಕಟಿಸಿದ್ದು, ರವೀಂದ್ರ ಕುಮಾರ್ ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗು ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪುರಸ್ಕಾರ ಲಭಿಸಿದೆ. ಅಲ್ಲದೆ ಕಾಂತಾವರದ “ಕವಿಮುದ್ದಣ' ಕಾವ್ಯ ಪ್ರಶಸ್ತಿ, ಉಡುಪಿಯ 'ಕಡೆಂಗೋಡ್ಲು ಸ್ಮಾರಕ' ಕಾವ್ಯ ಪ್ರಶಸ್ತಿ, ಅಂಕೋಲೆಯ ದಿನಕರ ದೇಸಾಯಿ ಪ್ರತಿಷ್ಠಾನದ ಕಾವ್ಯ ಪ್ರಶಸ್ತಿ ,ಹುನಗುಂದದ 'ಸಾರಂಗಮಠ' , ಹಂಸಬಾವಿಯ 'ವಾರಂಬಳ್ಳಿ ಪ್ರತಿಷ್ಠಾನ' , ಬೆಂಗಳೂರು ರಿಸರ್ವ ಬ್ಯಾಂಕ್ ಕನ್ನಡ ಸಂಘದ 'ಬೆಳ್ಳಿಹಬ್ಬದ ಪುರಸ್ಕಾರ”, ಕನ್ನಡ ಸಾಹಿತ್ಯ ಪರಿಷತ್ತಿನ 'ಸಾಹಿತ್ಯ ದಂಪತಿ ಪುರಸ್ಕಾರ' ಅಲ್ಲದೆ "ಹುನಗುಂದ ಸಾಹಿತ್ಯ ಸಂಭ್ರಮದ ಸಂಗಮ ಕಾವ್ಯ ಪ್ರಶಸ್ತಿ' ಮುಂತಾದ ಹಲವು ಗೌರವಕ್ಕೆ ಪಾತ್ರರಾಗಿದ್ದರು. ವಾರಣಾಸಿಯಲ್ಲಿ ಜರುಗಿದ ಆಕಾಶವಾಣಿ ಸರ್ವಭಾಷಾ ಕವಿಸಮೇಳನದಲ್ಲಿ (2011) ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಇವರ ಕಾವ್ಯ ಕುರಿತು 'ಮಿನುಗು ಬೆಳಕು ' ವಿಮರ್ಶಾ ಗ್ರಂಥ (ಸಂ- ಎಂ.ಎಸ್. ವೆಂಕಟರಾಮಯ್ಯ) ಪ್ರಕಟವಾಗಿದೆ.
ಜಿ.ಕೆ. ರವೀಂದ್ರಕುಮಾರ್ ಅವರ ಹಲವು ಕವಿತೆಗಳು ಹಿಂದಿ , ಇಂಗ್ಲೀಷ್, ತೆಲುಗು, ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಿಂದ ಅಧ್ಯಯನ ಪ್ರಬಂಧ (ಶ್ರೀಮತಿ ಆಶಾ) ಪ್ರಕಟವಾಗಿದೆ. ವಿಮರ್ಶೆ, ಲಲಿತ ಪ್ರಬಂಧ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿಯೂ ಬರೆಯುತ್ತಿರುವ ರವೀಂದ್ರಕುಮಾರ್ ಅವರ ಪ್ರಕಟಿತ ಗದ್ಯಕೃತಿಗಳು- 'ಸುಪ್ತಸ್ವರ'(ಲೇಖನಗಳು) 'ಪುನರ್ಭವ' (ವಿಮರ್ಶೆ), 'ಜುಗಲ್ ಬಂದಿ ಚಿಂತಕ ಯು.ಆರ್. ಅನಂತಮೂರ್ತಿ'(ಬದುಕು ಬರಹ), 'ಜ್ಞಾನದೇವನ ಬೋಧನೆ' (ಅನುವಾದ), 'ಡಾ.ಎಚ್ಚೆಸ್ಕೆ (ಬದುಕು ಬರಹ), ಹಾಗು 'ಕವಿತೆ 2001' (ಸಂಪಾದನೆ), ಆಕಾಶವಾಣಿಯಲ್ಲಿ ತಾವು ರೂಪಿಸಿದ ಸೃಜನಶೀಲ ರೂಪಕಗಳಿಗಾಗಿ ನಾಲ್ಕು ಬಾರಿ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವರಲ್ಲದೆ, ಎಂಟು ಬಾರಿ ರಾಜ್ಯ ಬಾನುಲಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಅಕ್ಟೋಬರ್ 9, 2019ರಂದು ಹೃದಯಾಘಾತದಿಂದ ನಿಧನರಾದರು.