‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ-1’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಕೃತಿಯಾಗಿದೆ. ಇಲ್ಲಿ ತೇಜಸ್ವಿ ಅವರ ಕಾವ್ಯ, ನಾಟಕ, ವಿಚಾರ, ಸಾಹಿತ್ಯ ವಿಮರ್ಶೆ, ಸಂದರ್ಶನಗಳನ್ನು ಕಾಣಬಹುದಾಗಿದೆ. ಬೃಹನ್ನಳೆ ಸೋಮುವಿನ ಸ್ವಗತ ಲಹರಿ, ಯಮಳ ಪ್ರಶ್ನೆ, ವ್ಯಕ್ತಿವಿಶಿಷ್ಠ ಸಿದ್ದಾಂತ, ವಿಮರ್ಶೆಯ ವಿಮರ್ಶೆ ಭಾಗಗಳಾಗಿ ಇಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ಆಧುನಿಕ ಜಗತ್ತು ಎಷ್ಟೇ ಆರ್ಥಿಕ ಪ್ರಗತಿ ಹೊಂದಿದ್ದರೂ ಮನುಷ್ಯ ನೆಮ್ಮದಿಯಿಂದಿಲ್ಲ, ಹಸಿವು ಬಡತನದಿಂದ ಮುಕ್ತನಾಗಿಲ್ಲ. ಎಲ್ಲ ಧರ್ಮೀಯ ಪುರೋಹಿತಶಾಹಿ ಶಕ್ತಿಗಳ, ಪ್ರಭುತ್ವಗಳ, ಅಧಿಕಾರಶಾಹಿಗಳ ವಂಚನೆಗಳೇ ನಮ್ಮ ಉದ್ಧಾರದ ಮಾರ್ಗಗಳೆಂದು ತಿಳಿಯುತ್ತಿದ್ದೇವೆ. ಅಂತಹ ಆಮಿಷಗಳಿಂದ ಹೊರಬರಲು ಸಾಹಿತ್ಯದ ಓದು ಎಲ್ಲರ ನಿರಂತರ ಅಭಿಯಾನವಾಗಬೇಕು. ಕಾಲ ಬದಲಾದಂತೆ ಹೊಸ ಸಹೃದಯರ ಆಗಮನವಾದಂತೆ ಕವಿಯ ಕೃತಿಯ ಅರ್ಥ, ಧ್ವನಿಯೂ ಬದಲಾಗುತ್ತದೆ. ಸಮಕಾಲೀನ ಸಂದರ್ಭದ ಪೂರ್ವಗ್ರಹಗಳು ದೂರವಾಗುತ್ತಾ ಲೇಖಕ ಹಿಂದೆ ಸರಿಯುತ್ತಾ ಕೃತಿಯ ಆಶಯ ಮುಂದೆ ಬರುತ್ತಾ ಹೋಗುತ್ತದೆ. ಕಾಲಕಾಲಕ್ಕೆ ವ್ಯಕ್ತಿ ವ್ಯಕ್ತಿಗಳಿಗೆ ಹೊಸ ಹೊಸ ಅರ್ಥಗಳು ಕಾಣುತ್ತಾ ಹೋಗುತ್ತವೆ. ತೇಜಸ್ವಿ ಅವರ ಸಮಗ್ರ ಕೃತಿ ಜಗತ್ತು ಒಂದೆಡೆ ಸಂಕಲಿತಗೊಂಡ ಸಂದರ್ಭದಲ್ಲಿ ಹೊಸ ಓದುಗರಿಗೆ ಅನೇಕ ಸವಾಲುಗಳನ್ನು, ಒಳನೋಟಗಳನ್ನು ಸಮಗ್ರವಾಗಿ ಗ್ರಹಿಸುವ ಅವಕಾಶವನ್ನು ಕಲ್ಪಿಸಿಕೊಡುತ್ತದೆಂಬ ಆಶಯ ಈ ಪ್ರಕಟಣೆಗಳ ಹಿಂದಿದೆ.
©2024 Book Brahma Private Limited.