‘ನಾಡಿ ಮಿಡಿತ: ಸಂಪುಟ 8’ ನಾ. ಡಿಸೋಜ ಅವರ ಸಮಗ್ರ ಕಾದಂಬರಿಗಳ ಸಂಪುಟ. ಇಲ್ಲಿ ನಾ. ಡಿಸೋಜ ಅವರ ಹರಿವ ನದಿ, ದ್ವೀಪ, ಮುಳುಗಡೆ, ಒಡ್ಡು ಮತ್ತು ಗುಣವಂತೆ ಕಾದಂಬರಿಗಳು ಸಂಕಲನಗೊಂಡಿವೆ. ನಾಡು ಮೆಚ್ಚಿದ ಪ್ರಖ್ಯಾತ ಸಾಹಿತಿ. ವೈಚಾರಿಕ ಪ್ರಜ್ಞೆಯ ಚಿಂತಕ. ಸರ್ವ ಧರ್ಮ ಸಮಭಾವದ ಪ್ರತಿಪಾದಕರು. ವಿಶ್ವ ಮಾನವತ್ವ ಮೇಲೈಸಿಕೊಂಡ ದಾರ್ಶನಿಕ. ತನ್ನ ಧರ್ಮದ ದರ್ಶನವನ್ನು ತಿಳಿದಿರುವಷ್ಟೇ ಇತರೇ ಧರ್ಮ ದರ್ಶನಗಳನ್ನೂ ಅರಿತ ಅರಿವಿನ ಹರಿವಾಣ. ಎಡ ಪಂಥ, ಬಲ ಪಂಥಗಳೆನ್ನದೆ ಎಲ್ಲದರೊಳಗಿನ ಒಳಿತನ್ನು ತನ್ನೊಳಗಿರಿಸಿಕೊಂಡ ಒಳಿತಿನ ಹೊರಣ, ಕಳೆದು ಹೋದ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆಯಾಗಿ ಹತ್ತು ಹಲವು ವಿಷಯಗಳಿಗೆ ಕನ್ನಡಿಯಾಗಿ ಬಹುಮುಖಿ.
ಪರಿಸರ ಪ್ರಜ್ಞೆಯ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ಸಮಾಜಮುಖಿ. ಅಪ್ರತಿಮ ಕನ್ನಡ ಪ್ರಜ್ಞೆಯ 'ಸಾಗರದ'ದ ಸರ್ವಮುಖಿ, ಪರಿಸರ ಸಂರಕ್ಷಿಸುವ ಪರಿಸರ ಹೋರಾಟಗಾರರು, ಕಥೆಕಾರರು, ಕಾದಂಬರಿಕಾರರು, ಮಕ್ಕಳ ಸಾಹಿತಿ, ಕನ್ನಡಕ್ಕಾಗಿ ಕೈಯೆತ್ತುವ, ಕೊರಳೆತ್ತುವ ಕನ್ನಡ ಚಳವಳಿಗಾರ. 'ಮುಳುಗಡೆ' ಸಂತ್ರಸ್ತರ ಪರ ಲೇಖನಿ ಹಿಡಿದು ಆಳುವ ಸರಕಾರಕ್ಕೆ ಅರಿವಿನ ಹಣತೆ ಹಚ್ಚಿದ ಜನಪರ ಹೋರಾಟಗಾರ. ಇದೆಲ್ಲದರ ಒಟ್ಟು ಮೊತ್ತವೇ ನಾ. ಡಿಸೋಜ. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಕನ್ನಡ ಕಾದಂಬರಿ ಲೋಕಕ್ಕೆ ಇವರ ಕೊಡುಗೆ ಅಪಾರವಾಗಿದೆ. ಇದುವರೆಗೆ ನಲವತ್ತೈದಕ್ಕೂ ಹೆಚ್ಚಿನ ಕಾದಂಬರಿಗಳನ್ನು ಬರೆದಿದ್ದಾರೆ. ಈ ಎಲ್ಲಾ ಕಾದಂಬರಿಗಳನ್ನು ಒಟ್ಟಿಗೆ ಸಂಪುಟ ರೂಪದಲ್ಲಿ ಪ್ರಕಟಿಸಬೇಕು ಎಂಬುದು ನಮ್ಮ ಪ್ರಕಾಶನದ ಬಹು ದಿನದ ಕನಸು ಎಂದಿದ್ದಾರೆ ಸುವ್ವಿ ಪ್ರಕಾಶನದ ಬಿ.ಎನ್. ಸುನೀಲ್ ಕುಮಾರ್.
©2024 Book Brahma Private Limited.