ವಿನಾಯಕ ಕಾವ್ಯನಾಮದಿಂದ ಬರೆಯುವ ಜ್ಞಾನಪೀಠ ಪುರಸ್ಕೃತ ಕವಿ ಗೋಕಾಕರ ಸಮಗ್ರ ಕವಿತೆಗಳ ಸಂಕಲನ ಒಂದು ಸಂಪುಟ. ಬೇಂದ್ರೆ ನೇತೃತ್ವದ ಧಾರವಾಡದ ಗೆಳೆಯರ ಗುಂಪಿನ ಸದಸ್ಯರಾಗಿದ್ದ ಗೋಕಾಕರು ತಮ್ಮ ಕಾವ್ಯ ರಚನೆಯನ್ನು ಆರಂಭಿಸಿದ್ದು ನವೋದಯ ಕಾವ್ಯ ಪರಂಪರೆಯಲ್ಲಿ. ಕನ್ನಡದಲ್ಲಿ ನವ್ಯ ಸಾಹಿತ್ಯದ ಆರಂಭವನ್ನು ಅಧಿಕೃತವಾಗಿ ಘೋಷಣೆ ಮಾಡಿದವರು ಕೂಡ ಗೋಕಾಕರೇ. ಗೋಕಾಕರು ತಮ್ಮ ಸಮಗ್ರ ಕಾವ್ಯ ಸಂಗ್ರಹ ಪ್ರಕಟಿಸುವ ಸಂದರ್ಭದಲ್ಲಿ ವಿವಿಧ ಕಾಲಘಟ್ಟದಲ್ಲಿ ಪ್ರಕಟಿಸಿದ ತಮ್ಮ ಕವಿತೆಗಳ ಸಂಕಲನಗಳಲ್ಲಿನ ಕವಿತೆಗಳನ್ನು ನವ್ಯ-ನವೋದಯ ಎಂದು ವಿಂಗಡಿಸಿದರು. ಹೀಗಾಗಿ ಗೋಕಾಕರ ಸಮಗ್ರ ಕಾವ್ಯದ ಒಟ್ಟು ನಾಲ್ಕು ಸಂಪುಟಗಳಿವೆ. ಎರಡು ನವೋದಯ ಕಾಲಘಟ್ಟದ ಮತ್ತು ಆಶಯಗಳನ್ನು ಕೇಂದ್ರವಾಗಿಟ್ಟುಕೊಂಡ ಸಂಪುಟಗಳು ಪ್ರಕಟವಾಗಿವೆ. ಹಾಗೆಯೇ ಎರಡು ಸಂಪುಟಗಳು ನವ್ಯ ಮಾದರಿಯ ಸಂಪುಟಗಳು. ಈ ಸಂಪುಟವು ಎರಡು ನವ್ಯ ಕವಿತೆಗಳ ಸಂಪುಟಗಳ ಪೈಕಿ ಮೊದಲನೆಯದು. ಗೋಕಾಕರ ನವ್ಯ ಮಾದರಿಯ ಕವಿತೆಗಳು ಒಂದೆಡೆಯಲ್ಲಿ ದೊರೆಯುವುದು ಈ ಸಂಪುಟದ ವಿಶೇಷ. ಮೊದಲ ಬಾರಿಗೆ ಈ ಸಂಪುಟಗಳನ್ನು ಪ್ರಕಟಿಸಿದ್ದ ಐಬಿಎಚ್ ಅವುಗಳನ್ನು ಈಗ ಮರುಮುದ್ರಣ ಮಾಡಿದೆ.
ವಿ.ಕೃ ಗೋಕಾಕರು ಸುಮಾರು 1950 ರಿಂದೀಚೆಗೆ ಬರೆದ ನವ್ಯ ಕವಿತೆಗಳು ಎರಡು ಸಂಪುಟಗಳಲ್ಲಿ ಪ್ರಕಟವಾಗಿದ್ದು, ಈ ಗ್ರಂಥ ನವ್ಯಕಾವ್ಯದ ಎರಡನೇ ಭಾಗವಾಗಿದೆ.
ಊರ್ಣನಾಭ, ಪ್ರಜ್ಞಾಪ್ರಭಾತ, ದ್ಯಾವಾ-ಪೃಥಿವೀ, ನವ್ಯ ಕವಿತೆಗಳು , ಉಗಮ, ಕಾಶ್ಮೀರ ಮೊದಲಾದ ಭಾವಗೀತ-ನೀಳ್ಗವನಗಳು 1950 ರಿಂದ 1966ರ ವರೆಗೆ ಬರೆದವುಗಳು. ಸಸ್ಯಸೃಷ್ಟಿ, ನವ್ಯ ನೀಳ್ಗವನಗಳು, ಕ್ಲಿಷ್ಟ ನವ್ಯ ಕವನಗಳು ಮುಂತಾದವುಗಳನ್ನು ಅವರು 1966ರ ಈಚೆಗೆ ಬರೆದರು. ಆಗ ಅವರು ನಡೆಸುತ್ತಿದ್ದ ಸಮನ್ವಯ ಎಂಬ ತ್ರೈಮಾಸಿಕದಲ್ಲಿಯೂ ಕೆಲವು ಪ್ರಕಟವಾದವು. ಅವರು 1965-66 ರಿಂದ ಬರೆದ ನವ್ಯ ಕವಿತೆಗಳನ್ನು ಎರಡನೆಯ ಸಂಪುಟದಲ್ಲಿ ಸೇರಿಸಲಾಗಿದೆ.
©2024 Book Brahma Private Limited.