ಕನ್ನಡ ಕಾವ್ಯ ಪರಂಪರೆಯ ಅತ್ಯುತ್ತಮ ಎನ್ನಿಸುವ ಗುಣಗಳನ್ನು ಮೈಗೂಡಿಸಿಕೊಂಡು, ನಮ್ಮ ಕಾಲಕ್ಕೂ ಸಲ್ಲುವಂತೆ ಬರೆಯುವ ಮಹತ್ವದ ಕವಿ ವೆಂಕಟೇಶಮೂರ್ತಿ, ಬಾಲ್ಯದ ಬೆರಗು, ಯೌವನದ ಜೀವನಪ್ರೀತಿ, ತಿಳಿಹಾಸ್ಯ, ಸುಖದುಃಖಗಳನ್ನು ಕಂಡ ಪಕ್ವವಾದ ಸಂಸಾರಿಯ ವಿನಯ-ಇವು ವೆಂಕಟೇಶಮೂರ್ತಿಯನ್ನು ನಮ್ಮ ಕಾಲದ ಮುಖ್ಯ ಲೇಖಕರಲ್ಲಿ ಒಬ್ಬರನ್ನಾಗಿ ಮಾಡಿದೆ. ಪರಂಪರೆಯ ಜ್ಞಾನ, ಪ್ರಯೋಗಶೀಲತೆ-ಎರಡೂ ಒಟ್ಟಾಗಿ ಕಾಣುವ ವಿಶಿಷ್ಟತೆ ವೆಂಕಟೇಶಮೂರ್ತಿ ಕಾವ್ಯಕ್ಕಿದೆ. ಇದು ಅಪರೂಪ. ಪ್ರತಿಭೆ ಇಲ್ಲದೆ, ನಿರಹಂಕಾರದ ಆತ್ಮರತವಲ್ಲದ ತಪಸ್ಸಿಲ್ಲದೆ, ಇಂತಹ ಸಾಧನ ಸಾಧ್ಯವಾಗದು ಎನ್ನುತ್ತಾರೆ ಹಿರಿಯ ಲೇಖಕ ಯು.ಆರ್. ಅನಂತಮೂರ್ತಿ.
ಈ ಕೃತಿಯ ಕುರಿತಾಗಿ ಬರೆಯುತ್ತಾ ‘ನಮ್ಮ ಉತ್ತಮ ಕವಿಗಳಲ್ಲಿ ಒಬ್ಬರಾದ ವೆಂಕಟೇಶಮೂರ್ತಿಯವರ ಹಾಗೆ ಮನುಷ್ಯನ ಅಂತಃಕರಣ ಮತ್ತು ಭಾಷೆಯ ಒಳ ಮಿಡಿತಗಳನ್ನು ಅರಿತವರು ವಿರಳ. ಆಧುನಿಕ ಭಾವನೆಗಳನ್ನು ಪುರಾಣಗಳ ಅನುಭವದಲ್ಲಿ ಕರಗಿಸಿ ಅಭಿವ್ಯಕ್ತಿಸುವಲ್ಲಿ ಅವರ ಸಾಧನೆ ಅಸಾಧಾರಣವಾದುದು ಎನ್ನುತ್ತಾರೆ ಸಾಹಿತಿ ಚಂದ್ರಶೇಖರ ಕಂಬಾರರು. ನರಸಿಂಹಸ್ವಾಮಿಗಳನ್ನು ಬಿಟ್ಟರೆ ಬೆಂಗಳೂರಿನ ಆಡುನುಡಿಯನ್ನು ವೆಂಕಟೇಶಮೂರ್ತಿಯವರ ಹಾಗೆ ಧ್ವನಿಪೂರ್ಣವಾಗಿ ಬಳಸಿಕೊಂಡವರು ಇನ್ನೊಬ್ಬರಿಲ್ಲ. ಕ್ಷಿತಿಜದಾಚೆಗೂ ಒಂದು ಕಣ್ಣಿಟ್ಟ ಇವರ ಕಾವ್ಯ ಈಗ ಸ್ಥಿರವಾದ ನೆಲೆಯನ್ನು ಕಂಡುಕೊಂಡಿದೆಯೆಂಬುದೇ ಕಾವ್ಯಪ್ರೇಮಿಗಳಿಗೆ ಆನಂದದ ಸಂಗತಿಯಾಗಿದೆ.
©2024 Book Brahma Private Limited.