ಲೇಖಕ ಜಿ.ಎನ್. ರಂಗನಾಥರಾವ್ ಅವರು ಪತ್ರಿಕೋದ್ಯಮ ಕುರಿತು ಬರೆದ ಲೇಖನಗಳ ಸಮಗ್ರ ಕೃತಿ-ಪತ್ರಿಕೋದ್ಯಮ ( ಸಮಗ್ರ ಸಂಪುಟ). ಪತ್ರಿಕೋದ್ಯಮ ಹಾಗೂ ಕನ್ನಡ ಪತ್ರಿಕೋದ್ಯಮ ನಡೆದು ಬಂದ ದಾರಿಯ ಒಂದು ಗೋಷ್ವಾರೆ ನೋಟವನ್ನು ಈ ಕೃತಿಯಲ್ಲಿ ಕಾಣಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಪತ್ರಿಕೋದ್ಯಮ ಕಂಪ್ಯೂಟರ್ ಕಾಲಮಾನದಲ್ಲಿ ಊಹೆಗೂ ನಿಲುಕದ ಗತಿಯಲ್ಲಿ ಜಿದ್ದಾಜಿದ್ದಿಯಾಗಿ ಓಡುತ್ತಿದೆ. ಈ ಓಟದ ಕೆಲವು ಇಣುಕು ನೋಟಗಳು ಈ ಕೃತಿಯಲ್ಲಿ ಅಡಕವಾಗಿದೆ. ಮೂರು ನೋಟಗಳನ್ನು ಈ ಕೃತಿಯು ಒಳಗೊಂಡಿದ್ದು ಪತ್ರಿಕೋದ್ಯಮದ ಸಮಗ್ರ ಚಿತ್ರಣವನ್ನು ಕಾಣಿಸುವ ಪ್ರಯತ್ನ ಮಾಡಲಾಗಿದೆ. ಹಳೆಯ ಹಾಗೂ ವರ್ತಮಾನದ ಪತ್ರಿಕೋದ್ಯಮದ ಸ್ವರೂಪಗಳನ್ನು ವಿಶ್ಲೇಷಿಸಿರುವ ಲೇಖಕರು ವಿಶೇಷವಾಗಿ ಕನ್ನಡ ಪತ್ರಿಕೋದ್ಯಮದ ಗುಣಮಟ್ಟ ಕುಸಿಯುವುದನ್ನು ತೌಲನಾತ್ಮಕವಾಗಿ ಅಧ್ಯಯನ ನಡೆಸಿದ್ದಾರೆ. ಪತ್ರಿಕಾ ವೃತ್ತಿ ಎಂದರೇನು? ಪತ್ರಿಕೆಗಳ ಹುಟ್ಟು, ಬೆಳವಣಿಗೆ, ಅವುಗಳ ಹಿನ್ನೆಲೆ, ಕನ್ನಡದಲ್ಲಿ ಪತ್ರಿಕೋದ್ಯಮ ಬೆಳೆಸಿದವರ ದುಡಿಮೆ ಶ್ರಮಗಳ ಸಮಗ್ರವಾದ ಒಂದು ನೋಟವನ್ನುಇಲ್ಲಿ ಬಿತ್ತರಿಸಲಾಗಿದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಹಾಗೂ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸಂಶೋಧನೆಗೆ ಈ ಗ್ರಂಥವು ಉತ್ತಮ ಆಕರ ಗ್ರಂಥವಾಗಿದೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE