ಶರಾವತಿ ನದಿ ಉಳಿಸಿ ಆಂದೋಲನದ ಕುರಿತು ನಮ್ಮೆಲ್ಲರಿಗೂ ತಿಳಿದೇ ಇದೆ. ಈ ಕೃತಿಯು ನಾ. ಡಿಸೋಜಾ ಅವರ ನಾಲ್ಕು ಕಾದಂಬರಿಗಳ ಸಮಗ್ರ ಕೃತಿಯಾಗಿದೆ. ಇದರಲ್ಲಿ ಲೇಖಕರು ಶರಾವತಿ ನದಿಯ ಕುರಿತು ಮಾತ್ರವಲ್ಲದೆ ಒಟ್ಟಾರೆಯಾಗಿ ನದಿಯನ್ನು ನಾವು ಹಾಳು ಮಾಡುತ್ತಿರುವ ಬಗೆ, ಈ ನದಿಯನ್ನು ನಂಬಿ ಬದುಕು ನಡೆಸುತ್ತಿರುವ ಜನರ ಬದುಕು ಮೂರಾಬಟ್ಟೆ ಆಗುತ್ತಿರುವುದರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಲೇಖಕರು ’ಶರಾವತಿ ನದಿಗೆ ಅಣೆಕಟ್ಟಿನ ನಿರ್ಮಾಣದಿಂದ ಹೇಗೆ ಮಳೆ ಬೀಳುವುದನ್ನು ಕಡಿಮೆ ಮಾಡಿತು? ಜೋಗ ಜಲಪಾತವನ್ನು ನಾವು ಕಳೆದು ಕೊಂಡಿದ್ದು ಹೇಗೆ? ಎಂದು ತಿಳಿಸಿದ್ದಾರೆ.
ಲೇಖಕರು ಈ ಪುಸ್ತಕದ ಬಗ್ಗೆ ಹೀಗೆ ಹೇಳುತ್ತಾರೆ ’ಅಲ್ಲಿಂದ ಹಳ್ಳಿ ತೊರೆದು ಹೊಸ ಸ್ಥಳಗಳಿಗೆ ಹೋದ ಜನ ಹೊಸ ಸ್ಥಳಗಳಿಗೆ ಹೊಂದಿಕೊಳ್ಳಲಾರದ ಪಾಡು ಪಡುವ ಸುದ್ದಿ ಬಂದು ನನ್ನನ್ನು ಘಾಸಿಗೊಳಿಸಿತು. ಈ ಪ್ರದೇಶದಲ್ಲಿ ಮುಳುಗಡೆ ಆಗದೇ ಉಳಿದ ಸಹಸ್ತಜನ ಯಾವ ಸೌಲಭ್ಯಗಳೂ ಇಲ್ಲದೆ ಇಲ್ಲಿ ಕಷ್ಟಪಡುವುದನ್ನು ನಾನು ಕಂಡೆ, ಯೋಜನೆಯಲ್ಲಿ ಒಂದಲ್ಲಾ ಒಂದು ಕಾಮಗಾರಿಯಲ್ಲಿ ತೊಡಗಿಕೊಂಡವರು ನೆಮ್ಮದಿಯಿಂದ ಇದ್ದರೆ ಇಲ್ಲಿಂದ ಹೊರಟು ಹೋದ ಜನ ಹಲವು ಜಂಜಡಗಳಿಗೆ ಬಲಿಯಾದರು. ಅವರ ಸಾಂಸಾರಿಕ ಬದುಕು ಹಳಿ ತಪ್ಪಿತು, ಸಂಬಂಧಗಳು ಛಿದ್ರವಾದದ್ದು. ಹೊಸ ಸದುಗಳು ತಲೆ ಎತ್ತಿದವು. ಈ ಯೋಜನೆ ಹೊರಗಿನಿಂದ ನೋಡಲು ಸುಂದರ ಅನಿಸಿದರೂ ಒಳಗೆ ಇದು ಕಿತ್ತುತಿನ್ನುವ ಒಂದು ಕೆಂಪು ಕುರುವಾಗಿ ಪರಿಣಮಿಸಿದ್ದನ್ನು ನಾನು ಗಮನಿಸಿದೆ. ಈ ಯೋಜನೆಗೆ ಬಲಿಯಾಗಿ ನೊಂದ ಜನ ತದ ನೋವನ್ನು ನನ್ನ ಮುಂದೆ ವಿವಿಧ ರೀತಿಯಲ್ಲಿ ಇಲ್ಲಿ ಇರಿಸಿದಾಗ, ಇದನ್ನ ಸರಕಾರ, ಅಧಿಕಾರಿಗಳು ಯಾರೂ ಗಮನಿಸಲಿಲ್ಲವೇ ಎಂದು ನಾನು ಮಿಡುಕಾಡಿದೆ’ ಎಂದು.
ಒಟ್ಟಾರೆಯಾಗಿ ಒಂದು ಆಣೆಕಟ್ಟು ನಿರ್ಮಾಣವಾಗುವುದು, ನೂರಾರು ಹಳ್ಳಿಗಳು ಮುಳುಗುವುದು, ಒಂದು ಸುದ್ದಿ ಮಾತ್ರ ಆಗಬಹುದು. ಆದರೆ ಮುಳುಗಡೆಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬನ ಸ್ವಾರ್ಥ ತಲೆ ಎತ್ತಿ ಮನುಷ್ಯತ್ವವೇ ಮುಳುಗಿದ ಮತ್ತೊಂದು ಮುಖವನ್ನು ಹಂತ ಹಂತವಾಗಿ ಈ ನಾಲ್ಕು ಕಾದಂಬರಿಗಳು ಚಿತ್ರಿಸುತ್ತವೆ.
©2024 Book Brahma Private Limited.