‘ಕಾತಚಿ: ನುಡಿ-ನಡಾವಳಿ ಸಂಪುಟ ಭಾಗ-1’ ಕೃತಿಯು ಕಾ.ತ ಚಿಕ್ಕಣ್ಣ ಅವರ ಸಂಪುಟವಾಗಿದೆ. ಈ ಕೃತಿಯಲ್ಲಿ ನಿಶಬುದದೆಡೆಗೆ, ಕನ್ನಡ ಎನೆ, ಉಕ್ಕೆ ಸಾಲು, ವಧೂಟಿ, ಕಣ್ಣಂಚಿನ ನೆಳಲು ಮತ್ತು ಚದುರಂಗ ಸೇರಿದಂತೆ ಆರು ಕೃತಿಗಳ 52 ಭಾಗಗಳನ್ನು ನೀಡಲಾಗಿದೆ. ಕೃತಿ ಕುರಿತು ಚ.ಹ ರಘುನಾಥ ಅವರು ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ; ಕಣ್ಣಂಚಿನ ನೆಳಲು; ವ್ಯಕ್ತಿಯೊಬ್ಬರನ್ನು ಕೇಂದ್ರವಾಗಿಟ್ಟುಕೊಂಡು ಬರೆಯುವ ಬರವಣಿಗೆ, ಅದೇ ಕಾಲಕ್ಕೆ ಸಾಂಸ್ಕೃತಿಕ ನೆನಪುಗಳ ವಿಹಾರವೂ ಆಗುವ ಬಗೆ ಇಲ್ಲಿನ ವ್ಯಕ್ತಿಚಿತ್ರಗಳ ಹೊಳಪನ್ನು ಹೆಚ್ಚಿಸಿದೆ. ‘ಕಣ್ಣಂಚಿನ ನೆಳಲು’ ಸಂಕಲನದ ಲೇಖನಗಳು ಫಲಪುಷ್ಪಭರಿತ ತೋಟವೊಂದರಲ್ಲಿ ವಿಹರಿಸಿದ ಅನುಭವವನ್ನು ಓದುಗರಿಗೆ ನೀಡುವಂತಿದೆ ಎಂದಿದ್ದಾರೆ.
ಜಿ.ಎಸ್. ಆಮೂರ ಅವರು ನಿಶಬುದದೆಡೆಗೆ ಕೃತಿ ಕುರಿತು; ಕಥೆ ಕಾದಂಬರಿಗಳ ಕಲ್ಪನಾ ಪ್ರಪಂಚ ಹಾಗೂ ಚರಿತ್ರೆಯ ವಾಸ್ತವ ಪ್ರಪಂಚ ಇವುಗಳ ನಡುವಿನ ಕರುಳಿನ ಸಂಬಂಧಗಳು ಈ ಕೃತಿಯಲ್ಲಿ ಮೂಡಿಬಂದಷ್ಟು ಸ್ಪಷ್ಟವಾಗಿ ಬೇರೆ ಕಡೆ ಕಾಣಿಸಿಕೊಂಡಿಲ್ಲ. ಈ ಕೃತಿಯ ಹಿಂದಿನ ಪ್ರಯೋಗಶೀಲತೆ, ಚಿಕ್ಕಣ್ಣನವರಲ್ಲಿ ಸೃಜನಶೀಲತೆ ಎಷ್ಟು ಜಾಗೃತವಾಗಿದೆಯೆನ್ನುವುದಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ.
ಡಾ. ಆರ್. ಪೂರ್ಣಿಮಾ ಅವರು ಉಕ್ಕೆಸಾಲು ಕುರಿತು; ಉಕ್ಕೆಸಾಲು ಸಂಕಲನದ ಲೇಖನಗಳು ‘ಹಳ್ಳಿಯದೆಲ್ಲಾ ಹೊನ್ನು’ ಎಂಬ ಸಾರಾಸಗಟು ತೀರ್ಮಾನಕ್ಕೆ ಬರುವುದಿಲ್ಲ. ಹಳ್ಳಿಯ ಬದುಕಿನಲ್ಲಿ ಕಳೆದುಹೋಗುತ್ತಿರುವ ಸರಳತೆ ಮತ್ತು ನಗರದ ಬದುಕಿನಲ್ಲಿ ಹೆಚ್ಚುತ್ತಿರುವ ಸಂಕೀರ್ಣತೆ ಎರಡನ್ನೂ ಅವುಗಳ ಕಾರ್ಯಕಾರಣ ಸಂಬಂಧಗಳ ಹಿನ್ನೆಲೆಯಲ್ಲಿಯೇ ಚರ್ಚಿಸುವ ಪ್ರಾಮಾಣಿಕ ಪ್ರಯತ್ನ ಉದ್ದಕ್ಕೂ ನಡೆದಿದೆ, ಎಂದಿದ್ದಾರೆ.
©2024 Book Brahma Private Limited.