`ಕರ್ಣಾಟಕ ಕಾದಂಬರಿ’ ಕೃತಿಯು ಕನ್ನಡ ಸಾಹಿತ್ಯ ಪರಿಷತ್ತಿನ ಜನಪ್ರಿಯ ಪ್ರಕಟಣೆಗಳಲ್ಲಿ ಒಂದಾಗಿದ್ದು, ನಾಗವರ್ಮ ಈ ಕೃತಿಯನ್ನು ರಚಿಸಿದ್ದಾನೆ. ಪ್ರಸ್ತುತ ಹ.ವೆ. ನಾರಾಯಣಶಾಸ್ತ್ರೀಯವರು ಕೃತಿಯ ಗದ್ಯಾನುವಾದ ಮಾಡಿದ್ದು, ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿರುತ್ತದೆ. ಕರ್ಣಾಟಕ ಕಾದಂಬರಿ ಸಂಸ್ಕೃತದಲ್ಲಿ ಬಾಣ ಮತ್ತು ಅವನ ಮಗ ಭೂಷಣನಿಂದ ರಚಿತವಾದ ಕಾದಂಬರಿ ಎಂಬ ಗದ್ಯಕಾವ್ಯದ ಪದ್ಯಾನುವಾದ. ಸಂಸ್ಕೃತ ಕಾದಂಬರಿಯದು ಲಯಾನ್ವಿತವಾದ ಗದ್ಯವಾದುದರಿಂದ ಅದನ್ನು ಪದ್ಯರೂಪಕ್ಕೆ ತಿರುಗಿಸುವುದು ಸುಲಭವೂ ಉಚಿತವೂ ಆಯಿತು. ಶೃಂಗಾರಾದ್ಭುತಪ್ರಧಾನವಾದ ಕಾದಂಬರಿಯ ಕತೆಯ ಸ್ವರೂಪಕ್ಕೆ ಶುದ್ಧ ಪದ್ಯವೇ ತಕ್ಕ ಮಾಧ್ಯಮವೆಂದು ನಾಗವರ್ಮ ಮನಗಂಡದ್ದು ಸ್ತುತ್ಯ. ಈತ ಕಾವ್ಯರಚನೆಗೆ ಚಂಪೂರೂಪವನ್ನು ಆರಿಸಿಕೊಂಡುದಕ್ಕೆ, 10ನೆಯ ಶತಮಾನ ಕನ್ನಡ ಸಾಹಿತ್ಯದಲ್ಲಿ ಚಂಪೂಯುಗವಾಗಿದ್ದುದೂ ಒಂದು ಕಾರಣವೆಂದು ತೋರುತ್ತದೆ. ಕರ್ಣಾಟಕ ಕಾದಂಬರಿ ಉಪಲಬ್ಧ ಕನ್ನಡ ಕಾವ್ಯಗಳಲ್ಲಿ ಮೊದಲನೆಯ ಭಾಷಾಂತರ ಹಾಗೂ ಪ್ರಪ್ರಥಮ ಶೃಂಗಾರಕಾವ್ಯವಾಗಿದೆ. ಮುಂದೆ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸುವ ಕವಿಗಳಿಗೆ, ಪ್ರಣಯ ಕಾವ್ಯಗಳನ್ನು ರಚಿಸುವವರಿಗೆ ಅದು ಮಾರ್ಗದರ್ಶಕವಾದುದರಲ್ಲಿ ಸಂದೇಹವಿಲ್ಲ. ಅದರ ಪ್ರಭಾವ ಮುಂದಿನ ಅನೇಕ ಕನ್ನಡ ಕವಿಗಳ ಮೇಲಾಗಿದೆ.
©2024 Book Brahma Private Limited.