ಸಕಾಲ ವೈ.ಜಿ ಮುರಳೀಧರನ್ ಅವರ ಕೃತಿಯಾಗಿದೆ. ಸರ್ಕಾರಿ ಕಛೇರಿಗಳಿಂದ ನ್ಯಾಯವಾಗಿ ದೊರೆಯಬೇಕಾದ ಸೇವೆಗಳನ್ನು ಪಡೆಯಲು ನಾಗರಿಕರು ಹರಸಾಹಸ ಪಡುತ್ತಿರುವುದು ಈ ದೇಶದ ದುರಂತಗಳಲ್ಲೊಂದು. ಸೂಕ್ತ ‘ದಕ್ಷಿಣೆ’ ನೀಡದೆ ಯಾವುದೆ ಕೆಲಸವನ್ನೂ ಮಾಡಿಸಿಕೊಳ್ಳಲಾಗದ ಪರಿಸ್ಥಿತಿ ಉದ್ಭವಿಸಿದೆ. ಅದು ಪಡಿತರ ಚೀಟಿ ಇರಬಹುದು ಇಲ್ಲವೆ ಜಾತಿ ಪ್ರಮಾಣ ಪತ್ರ ಇರಬಹುದು. ಅಧಿಕಾರಿಗಳು, ಸಿಬ್ಬಂದಿ ಮತ್ತು ಮಧ್ಯವರ್ತಿಗಳು ನಿಗದಿಪಡಿಸಿರುವ ಮೊತ್ತ ನೀಡದಿದ್ದರೆ ಆ ಸೇವೆ ದೊರೆಯುವುದು ಅಸಂಭವ. ನಾಗರಿಕರ ಕುಂದು ಕೊರತೆಗಳನ್ನು ಪರಿಹರಿಸಲು ರೂಪಗೊಂಡಿರುವ ಅನೇಕ ಕಾನೂನುಗಳು, ನೀತಿ ನಿಯಮಗಳು ನಾಗರಿಕರಿಗೆ ಸಹಕಾರಿಯಾಗಿಲ್ಲ. ಅವೆಲ್ಲಾ ಪುಸ್ತಕದಲ್ಲೇ ಅಡಕವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಸರ್ಕಾರ ನೀಡುವ ಕೆಲವೊಂದು ಸೇವೆಗಳನ್ನು ಇಂತಿಷ್ಟು ದಿನದಲ್ಲಿ ನೀಡಬೇಕೆಂಬ ಕಾನೂನು ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಈ ಕಾನೂನಿಗೆ ‘ಸಕಾಲ’ ಎಂದು ನಾಮಕರಣ ಮಾಡಲಾಗಿದೆ. ಒಂದು ವೇಳೆ ನಿಗದಿತ ವಾಯ್ದೆಯೊಳಗೆ ಸೇವೆಯನ್ನು ನೀಡದಿದ್ದರೆ ಸರ್ಕಾರವು ನಾಗರಿಕರಿಗೆ ನಿಗದಿತ ಮೊತ್ತವನ್ನು ಪರಿಹಾರದ ರೂಪದಲ್ಲಿ ನೀಡುತ್ತದೆ. ಸೇವೆ ನೀಡದ ಅಧಿಕಾರಿ ಅಥವಾ ಸಿಬ್ಬಂದಿಯೇ ಈ ಮೊತ್ತವನ್ನು ಭರಿಸಬೇಕಾಗುತ್ತದೆ. ಅಥವಾ ಅವರ ಸಂಬಳದಿಂದ ಮುರಿದುಕೊಳ್ಳಲಾಗುತ್ತದೆ. ಸಕಾಲ ಯೋಜನೆ ಈಗಾಗಲೆ ಸಾಕಷ್ಟು ಪರಿಣಾಮಕಾರಿಯಾಗಿದ್ದು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿದೆ. ಸರ್ಕಾರದಿಂದ ಸೇವೆ ಪಡೆಯುವ ಸಂದರ್ಭದಲ್ಲಿ ನಾಗರಿಕರು ಸಕಾಲ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು ಎನ್ನುತ್ತಾರೆ ಲೇಖಕರು. ಸಕಾಲ ಯೋಜನೆಯ ಕಿರು ಪರಿಚಯ ಮಾಡಿಕೊಡುವುದು ಈ ಪುಸ್ತಕದ ಉದ್ದೇಶವಾಗಿದೆ.
©2024 Book Brahma Private Limited.