ಕನ್ನಡ ಮಾರ್ದನಿ

Author : ರಾ.ನಂ. ಚಂದ್ರಶೇಖರ್

Pages 195

₹ 140.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಕನ್ನಡ ಭಾಷೆ, ಬದುಕು ಮುಂತಾದ ವಿಷಯಗಳ ಕುರಿತು ಕನ್ನಡ ಗಂಗೋತ್ರಿ ವಾರಪತ್ರಿಕೆಗೆ ಬರೆದ ರಾ.ನಂ. ಚಂದ್ರಶೇಖರ ಅವರ ಅಂಕಣ ಬರಹಗಳ ಸಂಗ್ರಹ ’ಕನ್ನಡ ಮಾರ್ದನಿ’. ಇಲ್ಲಿಯ ಲೇಖನಗಳೆಲ್ಲ ಕನ್ನಡ ನಾಡು- ನುಡಿಗೆ ಸಂಬಂಧಿಸಿವೆ. ಕನ್ನಡಿಗರಿಗೆ ಉದ್ಯೋಗ ಸಮಸ್ಯೆಯ ಬಗ್ಗೆ ಐದು ಲೇಖನಗಳಲ್ಲಿ ಚರ್ಚಿಸಲಾಗಿದೆ.

About the Author

ರಾ.ನಂ. ಚಂದ್ರಶೇಖರ್

ಕನ್ನಡದ ಹಿರಿಯ ಹೋರಾಟಗಾರ, ಸಾಹಿತಿ, ರಾ.ನಂ. ಚಂದ್ರಶೇಖರ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ಬರವಣಿಗೆಯ ಮೂಲಕ ಕನ್ನಡ ಭಾಷಾ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಕರ್ನಾಟಕ ಚೂಡಾಮಣಿ, ಕನ್ನಡ ರತ್ನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕನ್ನಡ ಬಾವುಟದ ರೂವಾರಿ, ಹಿಮಾಲಯದಲ್ಲಿ ಕನ್ನಡ ಧ್ಯಾನ, ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿ, ವಿಮಾನ ಯಾನ ಮುಂತಾದವು.  ...

READ MORE

Reviews

ಕನ್ನಡದ ಅಹವಾಲುಗಳ ಮೂಲ ಧ್ವನಿ ಮತ್ತು ಪ್ರತಿಧ್ವನಿ

’ಮಾರ್ದನಿ' ಎಂಬ ಪದದ ಅರ್ಥ ಪ್ರತಿಧ್ವನಿ. ಮೇಲ್ನೋಟಕ್ಕೆ ಈ ಕೃತಿ ಕನ್ನಡ ಪರ ಚಿಂತನೆಗಳ ಪ್ರತಿಧ್ವನಿಯಂತೆ ಕಾಣಿಸಿದರೂ ವಾಸ್ತವವಾಗಿ ಇಲ್ಲಿರುವುದು ಚಂದ್ರಶೇಖರರ ಸಮಾಜಮುಖಿ ಚಿಂತನೆಗಳ ಅನನ್ಯ ಮೂಲಧ್ವನಿ, ಇದು ಅಂಕಣ ಬರಹಗಳ ಸಂಕಲನವೆಂದು ಅವರು ಹೇಳಿಕೊಂಡಿದ್ದರೂ, ಸಾಮಾನ್ಯವಾಗಿ ಅಂಕಣ ಬರಹಗಳಲ್ಲಿ ಕಾಣಿಸುವ, 'ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ' ಅವಸರ ಪ್ರವೃತ್ತಿ ಇಲ್ಲಿಯ ಬರಹಗಳಲ್ಲಿ ಕಾಣಿಸುವುದಿಲ್ಲ. ನಿಧಾನವಾಗಿ, ಸಮಸ್ಯೆಗಳ ಹಲವು ಮಗ್ಗುಲುಗಳನ್ನು ಸ್ಪರ್ಷಿಸುವ, ವೈಜ್ಞಾನಿಕವಾಗಿ ವಿಶ್ಲೇಷಿಸುವ ಮತ್ತು ಸಂಪ್ರಬಂಧಗಳ ಮಾದರಿಯಲ್ಲಿ ಪ್ರಸ್ತುತಪಡಿಸುವ ಶಿಸ್ತು ಇಲ್ಲಿನ ಹೆಚ್ಚಿನ ಬರಹಗಳ ಅಸ್ತಿತೆ.

ಈ ಸಂಕಲನದಲ್ಲಿರುವ ಮೂವತ್ತು ಲೇಖನಗಳ ಗುರುತ್ವ ಕೇಂದ್ರ ಕನ್ನಡ ನಾಡಿನ ಜ್ವಲಂತ ಸಮಸ್ಯೆಗಳು. ಇವುಗಳಲ್ಲಿ 11ಲೇಖನಗಳು ಕನ್ನಡ ನಾಡು, ನುಡಿಯ ಕುರಿತಿವೆ. ಕನ್ನಡಿಗರಿಗೆ ಉದ್ಯೋಗಾವಕಾಶದ ಕುರಿತು ಐದು, ಬ್ಯಾಂಕುಗಳ ವಿಲೀನದಿಂದ ಅಸ್ತಿತ್ವ ಕಳೆದುಕೊಳ್ಳುವ ಕರ್ನಾಟಕ ಮೂಲದ ಬ್ಯಾಂಕುಗಳ ಕುರಿತು ಎರಡು, ಕನ್ನಡ ಚಳವಳಿಯ ಕುರಿತು ನಾಲ್ಕು, ಜಲ ಯೋಜನೆಗಳ ಕುರಿತು ಐದು ಮತ್ತು ಇತರ ಪ್ರಸ್ತುತ ವಿಷಯಗಳ ಕುರಿತು ಎರಡು ಲೇಖನಗಳು ಈ ಕೃತಿಯ ಒಟ್ಟು ಆಶಯಕ್ಕೆ ಕನ್ನಡ ಪರ ಸಂವೇದನೆಯ ಚೌಕಟ್ಟನ್ನು ಕೊಟ್ಟು, ಒಂದು ಆಕರ ಗ್ರಂಥದ ಮಟ್ಟಕ್ಕೇರಿಸುತ್ತವೆ. - ಕನ್ನಡ ನಾಡು ನುಡಿಗಳ ನಿಕಾಯದಲ್ಲಿರುವ ಏಕೀಕರಣ ಹೋರಾಟದ ಆಶಯಗಳು" ಈ ಕೃತಿಯ ಒಂದು ಮಹತ್ವದ ಲೇಖನ. ಕರ್ನಾಟಕ ಏಕೀಕರಣ ಪರಿಕಲ್ಪನೆಯ ಉಗಮ ಮತ್ತು ವಿಕಾಸದ ಹೆಜ್ಜೆಗುರುತುಗಳನ್ನು ಆವರಿಲ್ಲ ಮನೋಜ್ಞವಾಗಿ ದಾಖಲಿಸಿದ್ದಾರೆ. ಅವರು ಗಮನಿಸಿದಂತೆ ಕರ್ನಾಟಕದ ಹೆಸರು ಮಹಾಭಾರತದಷ್ಟು ಪ್ರಾಚೀನವಾದದ್ದು. ಆದರೆ ಆ ಹೆಸರಿನ ರಾಜ್ಯವಿದ್ದ ಉಲ್ಲೇಖ ಮಾತ್ರ ಇತಿಹಾಸದಲ್ಲಿ ಸಿಗುವುದಿಲ್ಲ '1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನೆಯೊಂದಿಗೆ ಅಧಿಕೃತವಾಗಿ ಪ್ರಾರಂಭವಾಗಿದ್ದ ಏಕೀಕರಣ ಪ್ರಯತ್ನಕ್ಕೆ 1956ರಲ್ಲಿ ಸಾಲ್ಯತೆ ಒದಗಿ ಬಂದದ್ದನ್ನು ನೆನಪಿಸಿಕೊಳ್ಳುವಾಗ, 1955ರಲ್ಲಿ ರಾಯಚೂರಿನಲ್ಲಿ ಜರುಗಿದ, ಶ್ರೀರಂಗರು ಅಧ್ಯಕ್ಷರಾಗಿದ್ದ, ’ಏಕೀಕೃತ ಕರ್ನಾಟಕದ ಮೊದಲ ಸಾಹಿತ್ಯ ಸಮ್ಮೇಳನ'ವನ್ನು ನೆನಪಿಸಿಕೊಳ್ಳಬಹುದಿತ್ತು. 1956ರಲ್ಲಿ ಭಾಷಾವಾರು ರಾಜ್ಯ ವಿಂಗಡನೆಯ ಅಂಗವಾಗಿ ಹುಟ್ಟಿಕೊಂಡ ಮೈಸೂರು ರಾಜ್ಯವು 1973 ನವೆಂಬರ್ ಒಂದರಂದು ಕರ್ನಾಟಕವಾದದ್ದನ್ನು ನೆನಪಿಸಿಕೊಳ್ಳುವಾಗ, ಸ್ಮರಿಸಬೇಕಾದ ಹೆಸರು ದೇವರಾಜ ಅರಸರದ್ದು. ಇದರೊಂದಿಗೆ ಓದಿಕೊಳ್ಳಬೇಕಾದ ಇನ್ನೊಂದು ಲೇಖನ 'ಕನ್ನಡ ನಾಡು ನುಡಿಗಳಿಗೆ ಸಂಬಂಧಿಸಿದ ವರದಿಗಳು', ನಮಗೆಲ್ಲಾ ಪರಿಚಿತವಾಗಿರುವ ಗೋಕಾಕ್, ಮಹಿಷಿ, ಮಹಾಜನ್, ನಂಜುಂಡಪ್ಪ ವರದಿಗಳಲ್ಲದೆ, 1835ರಷ್ಟು ಹಿಂದಿನ ಮೆಕಾಲೆ ವರದಿಯನ್ನು ಒಳಗೊಂಡಂತೆ, ಭಾಷಾನ್ವಯ ರಾಜ್ಯರಚನೆ, ಶಿಕ್ಷಣ, ಉದ್ಯೋಗ, ಪ್ರಾದೇಶಿಕ ಅಸಮಾನತೆ, ಗಡಿ ಅಭಿವೃದ್ಧಿ, ಪರಿಸರ, ಮಾನವ ಅಭಿವೃದ್ಧಿ, ಪುಸ್ತಕ ನೀತಿ ಇತ್ಯಾದಿ ಹಲವಾರು ವರದಿಗಳ ಕುತೂಹಲ ಹುಟ್ಟಿಸುವ ಮಾಹಿತಿಗಳು ಈ ಲೇಖನದಲ್ಲಿವೆ.

ಕನ್ನಡಿಗರಿಗೆ ಉದ್ಯೋಗಾವಕಾಶಗಳ ಕುರಿತಿರುವ ಐದು ಕನ್ನಡ ಲೇಖನಗಳಲ್ಲಿ ಮುಖ್ಯವಾದುದು “ಕನಸು - ನನಸು'. ಈ ಲೇಖನದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ'ಯೆನ್ನುವುದು ಕನ್ನಡ ಮಾರ ವಿಶ್ವವ್ಯಾಪಿ ಕರೆಯಂದು ಸಾಕ್ಷಾಧಾರಗಳೊಂದಿಗೆ ಸಮರ್ಥಿಸಲಾಗಿದೆ. ಅನಕೃ ಮತ್ತು ಮ. ರಾಮಮೂರ್ತಿಯವರ ನೇತೃತ್ವದಲ್ಲಿ ನಾಡು ನುಡಿಯ ರಕ್ಷಣೆಯ ಉತ್ಕರ್ಷಕ್ಕೆ ರೂಪುತಳೆದ ಕನ್ನಡ ಚಳವಳಿ ನಡೆದು ಬಂದ ಹಾದಿಯನ್ನು ದಾಖಲಿಸಲಾಗಿದೆ. ಇದೇ ವಿಷಯಕ್ಕೆ ಸಂಬಂಸಿದ ಹೆಚ್ಚಿನ ಮಾಹಿತಿಗಳು 'ಸರೋಜಿನಿ ಮಹಿಷಿ ವರದಿ' ಕುರಿತ ಲೇಖನದಲ್ಲಿ ಕಾಣಸಿಗುತ್ತವೆ. ಆ ಲೇಖನದ ಮುಖ್ಯ ಭಾಗದಲ್ಲಿ ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿಮಾಡಲಾಗಿದೆ.

'ಕರ್ನಾಟಕದಲ್ಲಿನ ಉದ್ಯೋಗ ಕನ್ನಡಿಗರಿಗೇ ಇರಲಿ', (ಈ ನಿಟ್ಟಿನಲ್ಲಿ ಕೈಗಾರಿಕಾ ಕನ್ನಡ ಸಂಘಗಳ ಕೆಚ್ಚು' ಲೇಖನಗಳು ಸಮರ್ಥಿಸುವ ನಿಷ್ಟುರ ನಿಲುವು ಗಮನಾರ್ಹವಾದುದು. ಬ್ಯಾಂಕುಗಳ ವಿಲಯನ ಮತ್ತು ಮೈಸೂರು ಕಾಗದ ಕಾರ್ಖಾನೆಯ ಮುಚ್ಚುವ ಹುನ್ನಾರಗಳ ವಿರುದ್ದ ಬರೆದ ಲೇಖನಗಳು ಖಚಿತವಾದ ಮಾಹಿತಿ ಮತ್ತು ನಿಲುವಿನಿಂದ ಗಮನ ಸೆಳೆಯುತ್ತವೆ. ಮೈಸೂರು ಬ್ಯಾಂಕು, ವಿಜಯಾ ಬ್ಯಾಂಕು (ಮತ್ತು ಈಗ ಕೈಗೆತ್ತಿಕೊಂಡಿರುವ ಕಾರ್ಪೋರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ) ಗಳ ವಿಲಯನದಿಂದ ಬ್ಯಾಂಕಿಂಗ್ ಕ್ಷೇತ್ರದ ಯಾವುದೇ ಸಮಸ್ಯೆಗಳು ಉತ್ತರಿಸಲ್ಪಡುವುದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿರುವುದರ ಹಿನ್ನೆಲೆಯಲ್ಲಿ ಈ ಲೇಖನವನ್ನು ಇನ್ನೊಮ್ಮೆ ಓದಬಹುದು. ಇಲ್ಲಿ ಪೆಟ್ಟು ಬಿದ್ದಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಮಾತ್ರವಲ್ಲ ಈ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿರುವವರ ಬದ್ಧತೆಗೆ ಕೂಡಾ. ಕನ್ನಡಿಗರ ಮಾತು ತಲೆ ಎತ್ತುವ ಬಗೆ, ಕನ್ನಡದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿದೆಯೇ? ಕನ್ನಡ ಚಳವಳಿಯ ಸವಾಲು, ಕನ್ನಡ ಅಭಿಮಾನ-ಆತಂಕ-ರಕ್ಷಣೆ, ಉದ್ಯಮ ಜಗತ್ತಿನಲ್ಲಿ ಕನ್ನಡದ ಅಸ್ಮಿತೆ ಎಂಬ ನಾಲ್ಕು ಲೇಖನಗಳನ್ನು ನಮ್ಮ ರಾಜಕಾರಣಿಗಳು ಮಾತ್ರವಲ್ಲ ಕನ್ನಡ ಸಂಘಟನೆಗಳೂ ಓದಿ ಮಾರ್ಗದರ್ಶನ ಪಡೆದುಕೊಳ್ಳಬಹುದು. ಈ ಕೃತಿಯಲ್ಲಿರುವ ಮೇಕೆ ದಾಟು ಯೋಜನೆ, ಅಕ್ರಮ ಮರಳು ದಂಧೆ ಮತ್ತು ಶರಾವತಿ ಅಘನಾಶಿನ ಜಲವಿವಾದಗಳ ಕುರಿತು ಮಲ್ನೋಟಕ್ಕೆ ನಿಷ್ಟುರ ಎನ್ನಿಸುವ ಅಭಿಪ್ರಾಯಗಳನ್ನು ಗ್ರಾ.ನಂ. ಚಂದ್ರಶೇಖರ್ ಇಲ್ಲಿ ಪ್ರಶಂಸಾರ್ಹವಾಗಿಯೇ ಮಂಡಿಸಿದ್ದಾರೆ. ಒಂದು ಅಂಕಣ ಬರಹಗಳ ಸಂಕಲನವನ್ನು ಅದರ ಮಿತಿಗಳಿಂದ ಹೊರತರುವ ಮಾದರಿ ಪ್ರಯತ್ನವು ಈ ಪುಸ್ತಕದ ಮೂಲಕ ನಡೆದಂತಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹದೊಂದು ಕೃತಿಯನ್ನು ಪ್ರಕಟಿಸಿದ 'ಸಪ್ಪ'ದ ಕೆಲಸ ಅಭಿನಂದನಾರ್ಹ.

ಬೆಳಗೋಡು ರಮೇಶ ಭಟ್‌ 22 ಡಿಸೆಂಬರ್‌ 2019

ಕೃಪೆ : ಹೊಸದಿಗಂತ

 

ಭಾಷೆಯ ಉಳಿವು ಅದರ ಬಳಕೆಯ ಮೇಲೆ ನಿಂತಿದೆ. ಆದರೆ, ಪ್ರಸ್ತುತ ದಿನಮಾನಗಳಲ್ಲಿ ಆಧುನಿಕತೆಯ ನೆರಳಲ್ಲಿ ಕನ್ನಡ ಭಾಷೆ ನಲುಗುತ್ತಿರುವುದು ಕಟುಸತ್ಯ. ತನ್ನ ಭಾಷಾ ಅಸ್ಮಿತೆಯ ಉಳಿವಿನ ಹೋರಾಟದೊಂದಿಗೆ ಇತರ ಭಾಷೆಗಳನ್ನು ಗೌರವಿಸುವುದು ಸರಿಯಷ್ಟೆ. ವಿಪರ್ಯಾಸವೆಂಬಂತೆ ಕನ್ನಡ ನೆಲದಲ್ಲೇ ಕನ್ನಡಿಗ ಅನಾಥನಾಗುವ ಹಂತಕ್ಕೆ ತಲುಪಿದ್ದಾನೆಂದರೆ ಅದು ಭಾಷಾ ನಿರ್ಲಕ್ಷ್ಯತೆಯ ಪರಮಾವಧಿ ಎಂಬುದು ಲೇಖಕರ ಅಂಬೋಣ. ಭಾಷೆ ಉಳಿವಿನ ನೋವು, ನಿಟ್ಟುಸಿರುಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಇಲ್ಲಿ.

‘ಇಂಗ್ಲಿಷಿನ ಚಪ್ಪಡಿಯಡಿಯ ಹಸುಳೆ ಚೀತ್ಕಾರ’ ಎಂಬ ಕುವೆಂಪು ಅವರ ಮಾತು ಭಾಷೆಯ ಇಂದಿನ ಬಳಲಿಕೆಗೆ ಹಿಡಿದ ಕೈಗನ್ನಡಿ. ಹೋರಾಟದ ಮೂಲಕ ಏಕೀಕರಣಗೊಂಡ ಕರ್ನಾಟಕ ಹಾಗೂ ಕನ್ನಡ ಇಂದು ಹಲವರ ಬಿಗಿಹಿಡಿತ ಹಾಗೂ ನಮ್ಮವರ ದಿವ್ಯನಿರ್ಲಕ್ಷ್ಯದಿಂದ ಸೊರಗುತ್ತಿರುವುದರ ಅಳಲನ್ನು ‘ಕನ್ನಡ ಮಾರ್ದನಿ’ ನಿರ್ಭಿಡೆಯಿಂದ ಪ್ರತಿಧ್ವನಿಸಿದೆ. ಕರ್ನಾಟಕಕ್ಕೆ ಎದುರಾಗಿರುವ ಸವಾಲು, ಸಂಕಷ್ಟಗಳ ಚರ್ಚೆಯೊಟ್ಟಿಗೆ, ಸಮಸ್ಯೆಗಳ ವಿವಿಧ ಮಜಲು, ಪರಿಹಾರ ಕುರಿತು ಚರ್ಚಿಸಲಾಗಿದೆ. ನೈಜ ಕಾಳಜಿ ಕೇವಲ ಆಚರಣೆಗೆ ಸೀಮಿತವಾಗದೆ, ಕಾರ್ಯರೂಪಕ್ಕೆ ಇಳಿಯಲಿ ಎಂಬುದು ಪುಸ್ತಕದ ಕಾಳಜಿ. ಇದು ಇಂದಿನ ತುರ್ತೂ ಹೌದು.

15 ಡಿಸೆಂಬರ್‌ 2019 

ಕೃಪೆ : ಪ್ರಜಾವಾಣಿ

Related Books