ಲೇಖಕ ಸಂಗಮೇಶ ತಮ್ಮನಗೌಡ್ರ ಅವರು 2015ರಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರು ಯಾವ ರೀತಿಯ ಪ್ರಛಾಣಿಕೆಗೂ ಮೊರೆ ಹೋಗದೇ ಕನ್ನಡ-ಕನ್ನಡಿಗ ಹಾಗೂ ಕರ್ನಾಟಕ ಹೀಗೆ ಕರುನಾಡಿನ ಸಮಗ್ರ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಕನ್ನಡಿಗರಲ್ಲಿ ಜಾಗೃತಿ ಹಾಗೂ ಅಭಿಮಾನ ಮೂಡಿಸಲು ವಿಶಿಷ್ಟ ಹಾಗೂ ಅಪರೂಪದ ಕನ್ನಡ ಪ್ರಸಾರ ಹಾಗೂ ಪ್ರಚಾರ ಎನ್ನಬಹುದಾದ ರೀತಿಯಲ್ಲಿ ಕೃತಿ ಪ್ರಕಟಿಸಿದ್ದೇ -‘ತಲೆಯೆತ್ತಲಿ ಕನ್ನಡತನ’. ಈ ಕೃತಿಯಲ್ಲಿ ಈವರೆಗೆ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿರುವ ಮಹಿನೀಯರ ಅಧ್ಯಕ್ಷೀಯ ಭಾಷಣಗಳನ್ನು ಪ್ರಮುಖ ಆಶಯ-ಎಚ್ಚರಿಕೆ-ಅಭಿಮಾನ-ಸವಾಲು ಎದುರಿಸುವ ಅನಿವಾರ್ಯತೆ ಹೀಗೆ ಕನ್ನಡಕ್ಕೊದಗಿದ ಸಮಸ್ಯೆ ಹಾಗೂ ಅಸಹಾಯಕತೆಗಳನ್ನು ನಿವಾರಿಸಲು ಮಾಡಿರುವ ಕಳಕಳಿಯ ಮನವಿಗಳನ್ನು ಪ್ರಕಟಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಪ್ರಮುಖ ನುಡಿಗಳನ್ನು ಒಂದೆಡೆ ದಾಖಲೆಯಾಗಿ ನೀಡುತ್ತದೆ ಮಾತ್ರವಲ್ಲ; ಕನ್ನಡಿಗರ ಅಭಿಮಾನವನ್ನು ಮತ್ತೆ ಮತ್ತೆ ಕೆರಳಿಸಲು-ಪ್ರೇರೇಪಿಸಲು ಕಾರಣವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳು ಎಂದರೆ ಸಾರ್ವತ್ರಿಕವಾಗಿ ನಡೆಯುವ ಚುನಾವಣೆಗಳಂತಲ್ಲ. ಮರಿ ಪುಢಾರಿಗಳಾಗಿ ಹುಸಿ ಭರವಸೆಗಳನ್ನು ನೀಡುವುದಲ್ಲ, ಕನ್ನಡದ ಹಿರಿಯ ಕೊಡುಗೆ-ಅಧ್ಯಯನ ದೊಂದಿಗೆ ಆ ಪರಂಪರೆಯ ದ್ಯೋತಕವಾಗಿ ಕನ್ನಡಕ್ಕಾಗಿ ದುಡಿಯಬೇಕು ಎಂಬ ಮಾಗದರ್ಶನ-ಸಲಹೆ ರೂಪದಲ್ಲಿ ಎಚ್ಚರಿಕೆಯೂ ನೀಡುವಂತಿದೆ. ಮತ್ತು, ಸದ್ಯ, ಕನ್ನಡ-ಕನ್ನಡಿಗ ಹಾಗೂ ಕರ್ನಾಟಕಕ್ಕೆ ಇಂತಹ ಪ್ರಣಾಣಿಕೆ ಹಾಗೂ ಅದನ್ನು ಸಾಕಾರಗೊಳಿಸುವ ಏಕೈಕ ಅಗತ್ಯ ಹಾಗೂ ಅನಿವಾರ್ಯತೆ ಇದೆ; ಬೇರೇನೂ ಅಲ್ಲ ಎಂಬಂತೆ ಕನ್ನಡಿಗರ ಕಣ್ಣನ್ನು ತೆರೆಸುವಂತಿದೆ.
ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿ ಜಾಗೃತಿಯ ಇಂತಹ ಚಿಂತನೆಯನ್ನು ಕನ್ನಡ ಜನತೆಯ ಬಳಿ ಬಿಂಬಿಸಬೇಕಾಗಿದೆ. ಕಾಲಕಾಲಕ್ಕೆ ಇಂತಹ ಸಂಕಲ್ಪಗಳು ಹೊರಹೊಮ್ಮಿದಾಗ ನಾಡು-ನುಡಿ ಕಳಕಳಿಯಲ್ಲಿ ಏಕೆ ಬದಲಾವಣೆ ಬರುವುದಿಲ್ಲ? ನಾವು ಈ ನೆಲದ ಅನ್ನ, ನೀರು, ಗಾಳಿ ಸೇವಿಸಿ ನಮಗೆ ತಿಳಿದಂತೆ ಬದುಕುವುದರಲ್ಲಿ ಏನು ಅರ್ಥವಿದೆ? ನಾವು ವಿಶಿಷ್ಟ ವ್ಯಕ್ತಿಗಳಾಗಿ ಬದುಕೋಣ, ನಾಡಪ್ರೇಮ ಮೆರೆಯೋಣ.!
-(ಕೃತಿಯ ಮುನ್ನುಡಿಯಲ್ಲಿ ಲೇಖಕರು ಮಾಡಿರುವ ಮನವಿ)
©2024 Book Brahma Private Limited.