ಕನ್ನಡ ಸಂಶೋಧನಾ ಕೃತಿ ಎಂತಲೇ ಕರೆಯಬಹುದಾದ ಪುರುಷೋತ್ತಮ ಬಿಳಿಮಲೆ ಅವರ ಕನ್ನಡ ಕಥನಗಳು, ಸಾಹಿತ್ಯ ಸಂಶೋಧನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ಪ್ರಬಂಧಗಳು ಕನ್ನಡ ಸಾಹಿತ್ಯದ ಇತಿಹಾಸ, ಇಂದಿನ ವಾಸ್ತವವನ್ನು ವಿವರಿಸುವಂತಹ ಲೇಖನಗಳಾಗಿವೆ. ’ಕನ್ನಡ ಸಾಹಿತ್ಯ ಮತ್ತು ಜಾನಪದಕ್ಕೆ ಸಂಬಂಧಿಸಿದಂತೆ, ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆ ರೂಪುಗೊಳ್ಳುತ್ತಿರುವ ಬಗೆಯನ್ನು ನಾನಾ ರೀತಿಯಲ್ಲಿ ಶೋಧಿಸುತ್ತದೆ. ಸಾಂಸ್ಕೃತಿಕ ಸಂಕಥನಗಳು ಗತ, ವರ್ತಮಾನ ಮತ್ತು ಭವಿಷ್ಯತ್ತಿನ ಕಥನಗಳನ್ನು ನಿರೂಪಿಸುತ್ತವೆ. ಕನ್ನಡದ ಕಥನಗಳು ಪರ್ಯಾಯ ಸಂಸ್ಕೃತಿಗಳನ್ನು ಅನಾವರಣಗೊಳಿಸುವ ಪ್ರಯತ್ನವಾಗಿದ್ದು, ಇಂಥ ಹೊಸ ವೈಧಾನಿಕತೆಯ ಮೂಲಕ ಅವರು ಕನ್ನಡಸ ಸಾಹಿತ್ಯ ಅಧ್ಯಯನಕ್ಕೆ ಹೊಸ ಆಯಾಮ ನೀಡಿದ್ದಾರೆ ಎನ್ನುವ ಮೂಲಕ ಫ್ರೆಂಚ್ ವಿದ್ವಾಂಸ ಅಜಿತ್ ಕಣ್ಣ ಕನ್ನಡ ಕಥನಗಳ ಕುರಿತು ಮೆಲಕು ಹಾಕಿದ್ದಾರೆ.
ಪುರುಷೋತ್ತಮ ಬಿಳಿಮಲೆಯವರ ಹೊಸ ಪುಸ್ತಕ ಕನ್ನಡ ಕಥನಗಳು ಒಂದು ಗಮನಾರ್ಹ ಪ್ರಕಟಣೆ. ಪ್ರಸ್ತಾವನೆಯಲ್ಲಿ ಅವರು ಕೆಲ ಕಾಲ ತಾನು ಬರೆದಿಲ್ಲ' ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಪುಸ್ತಕ ಅದಕ್ಕೆ ಸೂಕ್ತ ಪ್ರಾಯಶ್ಚಿತವೋ ಎಂಬಂತಿದೆ. ಕನ್ನಡದ ಸಂಶೋಧನೆಗೆ ಹೊಸ ದಿಕ್ಕುತೋರುವ ಅವರ ಯೋಚನೆ, ಸೃಜನಶೀಲ ಸಂಶೋಧನಾ ದೃಷ್ಟಿ ಮಾರ್ಗದರ್ಶಿ ಈ ಗ್ರಂಥದಲ್ಲಿ ಎದ್ದು ಕಾಣುತ್ತದೆ. ಪುಸ್ತಕದ ಆರಂಭದಲ್ಲಿ ಬಿಳಿಮಲೆಯವರು ಅಸ್ಮಿತೆಯ ಪ್ರಶ್ನೆ ತೆಗೆದು, ಅದರೊಂದಿಗೆ ಎ. ಕೆ. ರಾಮಾನುಜಂ ಅವರ ಒಂದು ಅಸಾಮಾನ್ಯ ಕತೆಯನ್ನು ಉದ್ದರಿಸಿದ್ದಾರೆ. ಇದು ಅವರ ವಿಸ್ತಾರವಾದ ಓದಿನ ಫಲ. ಕನ್ನಡಿಗರ ವಲಸೆ ಮತ್ತು ಭಾಷಾಸಂಬಂಧಗಳ ಕುರಿತೂ ಪುಸ್ತಕದಲ್ಲಿ ಮುಖ್ಯವಾದ ಮಾತುಗಳಿವೆ. ಸಾಂಸ್ಕೃತಿಕ ರಚನೆಗಳನ್ನು ಕಾಲ-ದೇಶಗಳಲ್ಲಿ ರೂಪುಗೊಳ್ಳುವ ಕಥನಗಳಾಗಿ ಸ್ವೀಕರಿಸಿ, ಅವನ್ನು ವಿವೇಚಿಸುವ ಸೂಚನೆ ಈ ಪುಸ್ತಕದ ಮುಖ್ಯ ಅಂಶ. ಅದು ಶ್ಲಾಘನೀಯ ಕೂಡ. ಬಿಳಿಮಲೆಯವರು ಪಂಪನ ಜೊತೆಗೆ ಯಕ್ಷಗಾನದ ಮೇರು ಕಲಾವಿದ, ವಿದ್ವಾಂಸ ಶೇಣಿ ಗೋಪಾಲಕೃಷ್ಣ ಭಟ್ಟರನ್ನೂ ಒಳಗೊಳ್ಳುತ್ತಾರೆ. ಇದು ಯಕ್ಷಗಾನಕ್ಕೆ ನಾವು ಕೊಡಬೇಕಾದ ಸ್ಥಾನದ ಸದ್ದಿಲ್ಲದ ಕಥನವೇ ಆಗಿದೆ.
ಪುರಾಣ, ವಸ್ತು, ಕಾವ್ಯಗಳು ಹೇಗೆ ಒಂದನ್ನು ಇನ್ನೊಂದು ಪ್ರಭಾವಿಸುತ್ತಾ ಬಹುರೂಪಿ ಮರುನಿರೂಪಣೆಗಳಾಗಿವೆ ಎಂದು ಸಾಹಿತ್ಯದ ಚರಿತ್ರೆಯನ್ನು ಅವರು ನೋಡುವ ರೀತಿ ವಿಶೇಷವಾದ್ದು. ಇದನ್ನೇ ಯಕ್ಷಗಾನಕ್ಕೂ ತೆಗೆದುಕೊಂಡು ಅನ್ಯಾಯ ಮಾಡಿದ್ದು, ಅದೊಂದು ಗಣನೀಯ ಪ್ರಾಪ್ತಿ. ಈ ನಿಟ್ಟಿನಲ್ಲಿ ಆಕರಕಾವ್ಯ ಮತ್ತು ಪ್ರಸಂಗೀಕರಣದ ಪ್ರಕ್ರಿಯೆಗಳ ಬಗ್ಗೆ ಇನ್ನಷ್ಟು ಅಧ್ಯಯನಕ್ಕೆ ಅವಕಾಶವಿದೆ. ಜೈನ-ಬೌದ್ದ ಮತ್ತು ಜೈನ-ವೀರ ಶೈವ ಮತಗಳ ನಡುವೆ ಪ್ರತಿರೋಧಗಳ ರೂಪದಲ್ಲಿ ಸಂಘರ್ಷ ನಡೆದಷ್ಟು ವೇದ-ವೇದಾಂತ, ದೈತ-ಅದೈತ, ಸಾಂಖ್ಯ-ವೇದಾಂತಗಳ ನಡುವೆ ನಡೆದಿಲ್ಲ ಈ ಜಗಳಗಳು ಕೇವಲ ವಾಕ್ಯಾರ್ಥಗಳಿಗೆ ಸೀಮಿತವೂ ಹೌದು. ಲೇಖಕರು ಭಕ್ತಿ ಮತ್ತು ವೀರಶೈವ ಚಳುವಳಿಯು ಹೇಗೆ ಸಳಿಯ ದೈವಗಳನ್ನು ನಿರಾಕರಿಸಿದುವು ಎಂಬುದನ್ನು ಬಹಳ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಈ ಕಾಲದಲ್ಲಿ ವೀರಶೈವವನ್ನು ಒಂದು ನಿರ್ದೋಷಿ, ಸಕಲ ಗುಣಪೂರ್ಣವೆಂದು ಕೊಂಡಾಡುತ್ತಿರುವಾಗ ಬಿಳಿಮಲೆಯವರು ವಿದ್ವಾಂಸನ ಎಚ್ಚರದಿಂದ ಬರೆದ ಈ ವಿಷಯಗಳು ಪ್ರಶಂಸನೀಯ. ಜಾನಪದಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಹೊಸ ಮಾತುಗಳಿವೆ. ಅವರು ಹೇಳಿದಂತೆ, ಯಾರಾದರೂ ಬೊಬ್ಬರ್ಯನು ಬಭ್ರುವಾಹನನ ಅವತಾರ ಎಂದರೆ ಅದು ಹಾಸ್ಯಾಸ್ಪದ. ಅದೇ ರೀತಿ ಬಹುರೂಪಿಯಾಗಿರುವ ಕೋಟಿಚೆನ್ನಯ ಕಥೆಯನ್ನು ಏಕಪಾಠ ಅಧಿಪತ್ಯಕ್ಕೆ ತರುವ ಪ್ರಯತ್ನವೂ ತಪ್ಪು ನದಿಗಳ ಕಥನ ಈ ಪುಸ್ತಕದ ಸುಂದರ ಕಾವ್ಯಾತ್ಮಕ ಭಾಗ ಇದರಲ್ಲಿ ವ್ಯಾಪಕತೆ, ಪಾಂಡಿತ್ಯ, ಜೋಡಣೆ, ಅನ್ವಯ, ಸೃಜನಾತ್ಮಕ ಶೋಧನೆ ಎಲ್ಲವೂ ಒಟ್ಟಾಗಿವೆ. ತುಸು ಸಂಕ್ಷೇಪ ಮತ್ತು ಸಾಂದ್ರತೆಯೇ ಇದರ ದೋಷ, ನಮ್ಮ ಪರಂಪರೆ, ಅಲ್ಲಿನ ಕೆಲವು ವ್ಯಕ್ತಿಗಳು ಹೇಗೆ ಎಲ್ಲವೂ ಮರು ಪರಿಶೀಲನೆಗೆ ಒಳಪಡಬೇಕಾಗಿದೆ. ಬಿಳಿಮಲೆಯವರ ಕನ್ನಡ ಕಥನಗಳು ಅಂತಹ ಮಹಾಪ್ರಯತ್ನದ ಭಾಗವೆಂದು ನನಗೆ ಅನ್ನಿಸಿದೆ.
-ಎಂ. ಪ್ರಭಾಕರ ಜೋಶಿ
ಕೃಪೆ: ಉದಯವಾಣಿ, ಹೊಸ ಹೊತ್ತಿಗೆ (2020 ಜನವರಿ 12)
ಈ ಕೃತಿ ಒಟ್ಟು ಒಂಬತ್ತು ಪ್ರಬಂಧಗಳನ್ನು ಒಳಗೊಂಡಿದೆ. ಇವು ಭಾರತದ ಇಂದಿನ ಬರಲಾದ ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸನ್ನಿವೇಶಕ್ಕೆ ಲೇಖಕ ಪುರುಷೋತ್ತಮ ಪ್ರತಿಕ್ರಿಯೆಗಳಂತಿವೆ. ಇದರಲ್ಲಿನ ಚಿಂತನೆಗಳು ಲೇಖಕರ ಇತ್ತೀಚಿನ ನಿಲುವೇನಲ್ಲ. ಹಲವು ದಶಕಗಳಿಂದಲೂ ಅವರು ಪ್ರತಿಪಾದಿಸುತ್ತಲೇ ಬಂದಿರುವ ವಿಚಾರಗಳು ಇಲ್ಲಿ ಹೊಸರೂಪದಲ್ಲಿ ಪುನರವತರಿಸಿದೆ.
ಇಂದು ದೇಶಭಕ್ತಿಯ ಹೆಸರಿನಲ್ಲಿ ಆಂಧಭಕ್ತಿ, ಅಮಾನವೀಯತೆ, ಆಕ್ರಮಣಶೀಲತೆಯೇ ಮಾಡಿದ್ದನ್ನು ಉದಾಹರಿಸಿ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ರಾರಾಜಿಸುತ್ತಿದೆ. ಪ್ರಶ್ನಿಸುವವರಿಗೆ ದೇಶದ್ರೋಹಿಯ ಹಣೆಪಟ್ಟಿ ಲಗತ್ತಿಸಲಾಗುತ್ತಿದೆ, ಯಾವುದು ದೇಶದ್ರೋಹವೆಂದರೆ? ಪ್ರಭುತ್ವ ಪೂತವಾದ ಅಯೋಧ್ಯಾ ರಾಮನನ್ನು ಬಿಟ್ಟು ದೇಶದ ದಶದಿಕ್ಕುಗಳಲ್ಲೂ ಹರಡಿರುವ ರಾಮನ ವೈವಿಧ್ಯಮಯ ಕಥಾನಕಗಳನ್ನು ಕಂಡು ವಿಸ್ಮಯ ಪಡುವುದು ದೇಶದ್ರೋಹವೇ? ದೇಶದುದ್ದಗಲಕ್ಕೂ ಸಾವಿರಕ್ಕೂ ಹೆಚ್ಚು ಆವೃತ್ತಿಗಳುಳ್ಳ ಮಹಾಭಾರತವನ್ನು ಪರಿಭಾವಿಸುವುದು ಅಪಚಾರವೇ?
ಈ ಲೇಖನಗಳು ಭಾರತೀಯ ಸಂಸ್ಕೃತಿಯ ಈ ಸಮೃದ್ಧಿ, ವೈಶಾಲ್ಯಗಳನ್ನು ಪರಿಚಯಿಸುವುದಾದರೂ ಭಾರತೀಯತೆಯೊಂದಿಗೆ ಕಳೆದು ಹೋಗದೇ ಕರ್ನಾಟಕದ ಕನ್ನಡಿಗರ ವಿಷಯದಲ್ಲೂ ಕಾಳಜಿ ಹೊಂದಿದೆ. ಇನ್ನು ಕರ್ನಾಟಕದ ನೆಲೆಯಲ್ಲಿ ನಿಂತು ವಿಚಾರ ಮಾಡುವಾಗಲೂ ಅವರು ತಮ್ಮ ಹುಟ್ಟಿನ ನೆಲೆಯ ಭಾಷೆ, ಜನಾಂಗ, ಸಂಸ್ಕೃತಿಯ ಏಳಿಗೆಯನ್ನು ಕನಸುತ್ತಾರೆ. ಅವರು ರಾಷ್ಟ್ರದ ರಾಜಧಾನಿಯಲ್ಲಿ ನೆಲೆಸಿದ್ದರೂ ತಮ್ಮ ಹೆಸರಿನಿಂದ ತಮ್ಮ ಹುಟ್ಟೂರಾದ ಬಿಳಿಮಲೆಯನ್ನು ಬಿಟ್ಟಿಲ್ಲವೆಂದು ಕೆ. ಅಕ್ಷಪಾ ಮುನ್ನುಡಿಯಲ್ಲಿ ಸರಿಯಾಗಿಯೇ ಗುರುತಿಸಿದ್ದಾರೆ.
ಸ್ಥಳೀಯತೆಯನ್ನು ಬಿಟ್ಟುಕೊಡದೆ, ಅದರಲ್ಲಿ ಸ್ಥಿರವಾಗಿ ಬೇರೂರಿಕೊಂಡೇ ರಾಷ್ಟ್ರೀಯತೆಯನ್ನು, ವಿಶ್ವಮಾನವತ್ವವನ್ನು ಸಾಧಿಸಿಕೊಳ್ಳುವ ಕೌಶಲ್ಯವನ್ನು ಕನ್ನಡ ಹುಚ್ಚು ಹಿಡಿಸಿಕೊಂಡವರು ಅದನ್ನು ಸಾಧಿಸಿಕೊಳ್ಳಲು ನಮ್ಮ ಪರಂಪರೆಯ ಈ ವಿಶಿಷ್ಟತೆಯನ್ನು ಅನುಸರಿಸಬೇಕಲ್ಲದೆ ಈ ವಿಶಿಷ್ಟತೆಯನ್ನು ದೇಶದ್ರೋಹವೆಂದು ವ್ಯಾಖ್ಯಾನಿಸಬಾರದು. ನಮ್ಮ ಪರಂಪರೆ ಸಿದ್ಧಿಸಿಕೊಂಡಿರುವ ಈ ವಿಶಿಷ್ಟ ಲಕ್ಷಣ ಈ ಕೃತಿಯ ಒಂದೊಂದು ಲೇಖನದಲ್ಲೂ ಕಾಣಸಿಗುತ್ತದೆ. ಈ ಒಂಬತ್ತೂ ಲೇಖನಗಳಲ್ಲಿ ಒಂದಲ್ಲ ಒಂದು ಸಾಮಾಜಿಕ ಆಯಾಮವಿರುವುದನ್ನು ಓದುಗರು ಗುರುತಿಸಬಹುದು. ಯಾವುದೇ ಚಳವಳಿಗೆ ವಿದ್ವತ್ತು, ಸಂಶೋಧನೆಗಳು ಎಷ್ಟು ಅಗತ್ಯವೆಂಬುದಕ್ಕೆ ಇದರಲ್ಲಿನ ಪ್ರತಿಯೊಂದು ಲೇಖನವೂ ರುಜುವಾತಾಗಿದೆ, ಅವರ ಸಂಶೋಧನೆಗಳು ಅವರ ಚಳವಳಿಗೊಂದು ಗಹನತೆಯನ್ನು ಹಾಗೂ ಅವರ ಚಳವಳಿಗಳು ಅವರ ವಿದ್ವತ್ತಿಗೊಂದು ಮಾನವೀಯ ಸ್ಪರ್ಶ ನೀಡಿದೆ.
'ಹಳೆಗನ್ನಡದ ಬಹುರೂಪೀ ನಿರೂಪಣೆಗಳು' ಲೇಖನವು ಹಳೆಗನ್ನಡ ಕಾವ್ಯಗಳು ಈ ೨೧ನೇ ಶತಮಾನದವರೆಗೂ ಸಾಗಿಬಂದಿರುವ ರೀತಿಯನ್ನು ವಿವೇಚಿಸುತ್ತದೆ. ಇಂದಿನ ನಮಗೆ ಕಿಟೆಲ್, ರೈಸ್, ಡಿ.ಎಲ್‌ಎನ್, ಎಲ್. ಬಸವರಾಜು ಮುಂತಾದ ವಿದ್ವಾಂಸರು ಹಳಗನ್ನಡ ಕಾವ್ಯಗಳನ್ನು ಪರಿಚಯಿಸಿದ್ದಾರೆ ಸರಿ. ಆದರೆ ನೂರಾರು ವರ್ಷಗಳ ಹಿಂದಿನ ಈ ಸಾಹಿತ್ಯ ಕೃತಿಗಳನ್ನು ನಾವು ತಲೆಮಾರಿನಿಂದ ತಲೆಮಾರಿಗೆ ಹೇಗೆ ಹಸ್ತಾಂತರಿಸಿಕೊಂಡು ಬಂದಿದ್ದೇವೆ? ಇಂತಹ ವಿದ್ವಾಂಸರನ್ನೇ ನೆಚ್ಚಿಕೊಂಡಿದ್ದೆವೇ ಎಂಬ ಪ್ರಶ್ನೆಯನ್ನು ಈ ಲೇಖನ ಪರಿಶೀಲಿಸುತ್ತದೆ. ವಿದ್ವತ್ತು ಒಂದು ಸೀಮಿತ ವಲಯವನ್ನಷ್ಟೆ ಪ್ರಭಾವಿಸಬಲ್ಲದು, ಒಂದು ಇಡೀ ಜನಸಮುದಾಯದ ಮೇಲೆ ಅದರ ಹಿಡಿತವಿರಲಾರದು. ಹಾಗಾಗಿ ನಮ್ಮ ಜಾನಪದ ಸಂಸ್ಕೃತಿಯೇ ನಮ್ಮ ಪ್ರಾಚೀನ ಪಠ್ಯಗಳನ್ನು ಮರುರೂಪಿಸುತ್ತ, ಬಹುರೂಪಿಯಾಗಿ ಬೆಳೆಸುತ್ತಾ ಉಳಿಸಿಕೊಂಡು ಬಂದಿದೆ ಎಂದು ಇದರಲ್ಲಿ ಅವರು ಪ್ರತಿಪಾದಿಸುತ್ತಾರೆ, ಇದರಿಂದ ಜಾನಪದವೂ ಬದುಕುಳಿಯಿತು ಮತ್ತು ಪ್ರಾಚೀನ ಪಠ್ಯಗಳೂ ಉಳಿದುಕೊಂಡು ಬಂದವು ಎನ್ನುತ್ತಾರೆ. ಹಳೆಯ ಕಾವ್ಯ ಒನಕೆವಾಡದ ಪರಿಯಲ್ಲಿ, ಗದುಗಿನ ಭಾರತ “ಕೇಳುವ ಕಾವ್ಯ'ವಾಗಿ ಬೆಳೆದ ರೀತಿಯಲ್ಲಿ, ಗಮಕ ಯಕ್ಷಗಾನ ಹರಿಕತೆಗಳಲ್ಲಿ, ದೇವಾಲಯದ ಶಿಲ್ಪಕಲೆ, ಚಿತ್ರಕಲೆಗಳಲ್ಲಿ ಪ್ರಾಚೀನ ಪಠ್ಯಗಳು ನಾನಾ ಅವತಾರಗಳಿಂದ ನಿರ್ದಿಷ್ಟ ಪಠ್ಯಗಳನ್ನೇ ಏಕೆ ನಮ್ಮ ಹಿಂದಿನವರು ಮತ್ತೆ ಮತ್ತೆ ಮರುನಿರ್ವಚಿಸಿಕೊಂಡು ಬಂದರು ಎಂಬ ಪ್ರಶ್ನೆಯನ್ನೆತ್ತುತ್ತಾರೆ. ಉದಾಹರಣೆಗೆ, ನಳಚರಿತ್ರೆ, ಕುಮಾರರಾಮನ ಕತೆ ಮುಂತಾದವು ಅದೇಕ ನಮ್ಮ ಜಾನಪದರಿಗೆ ಮುಖ್ಯವಾಗುತ್ತದೆ? ಕರ್ನಾಟಕದಲ್ಲೇ ನೂರಕ್ಕೂ ಹೆಚ್ಚು ನಳನ ಕತೆಗಳಿವೆ. ತೀರಾ ಸ್ಥಳೀಯ ನಾಯಕನಾದ ಕುಮಾರರಾಮನ ಕತೆ ದಕ್ಷಿಣ ಭಾರತದಾದ್ಯಂತ ಅದೇಕೆ ಅಷ್ಟೊಂದು ವ್ಯಾಪಕವಾಗಿ ಹರಡಿಕೊಂಡಿತು? ಇವೇ ಮುಂತಾದ ಪ್ರಶ್ನೆಗಳನ್ನು ಹಿಡಿದು ಪ್ರಾಚೀನ ಜಾನಪದದ ನಂಬಿಕೆಗಳನ್ನು, ಅವರು ನಂಬಿದ್ದ ಮೌಲ್ಯಗಳನ್ನು ಶೋಧಿಸುವ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಮತ್ತು ಸಂಶೋಧಕರಿಗೆ ಎಂದಿಗೂ ಅನುಕರಣೀಯ.
ನಮ್ಮ ಜಾನಪದ ಸಂಸ್ಕೃತಿಯನ್ನು ಸ್ತುತಿಸುವ ಭರದಲ್ಲಿ ಲೇಖಕರು ವಚನ ಚಳವಳಿಯನ್ನು ಎಲ್ಲೋ ಅವಜ್ಞೆ ಮಾಡುತ್ತಿದ್ದಾರೆಯೇ ಎನಿಸುತ್ತದೆ. ಇದಕ್ಕೆ `ಭಕ್ತಿಪರಂಪರೆ ಮತ್ತು ಜಾನಪದ' ಎಂಬ ಲೇಖನವನ್ನು ಉದಾಹರಿಸಬಹುದು. “ಜಾನಪದ ಪರಂಪರೆಯ ನಿರ್ಮಾತೃಗಳೇ ವಚನ ಚಳವಳಿಯಲ್ಲಿ ಸೇರಿಕೊಂಡಿದ್ದರು. ಇಷ್ಟಲಿಂಗ ಪ್ರತಿಪಾದನೆಯ ಶಿವಶರಣರು. ಎಲ್ಲಾ ಜಾನಪದ ಪರಂಪರೆಗಳನ್ನು ನಿರಾಕರಿಸಿದರು” ಎಂದು ಲೇಖಕರು ತೀರ್ಮಾನಿಸುತ್ತಾರೆ. ಶೈವರು ಅನ್ಯಧಾರೆಗಳ ಮೇಲೆ ಆಕ್ರಮಣ ಶೈವ ಪ್ರಭುತ್ವಕ್ಕೂ ವಚನ ಚಳವಳಿಗೂ ಎತ್ತಣಿಂದೆತ್ತ ಸಂಬಂಧ? ಇನ್ನು ವಚನಕಾರರು ಇಷ್ಟಲಿಂಗ ಪ್ರತಿಪಾದನೆಯವರು ಎಂಬ ಅವರ ಆರೋಪವೂ ಅಸಮರ್ಥನೀಯ. ಅಲ್ಲಮಪ್ರಭು, ನುಲಿಯ ಚಂದಯ್ಯ ಮುಂತಾದವರು ಇಷ್ಟಲಿಂಗವನ್ನು ಕಟುವಾಗಿಯೇ ಟೀಕಿಸುತ್ತಾರೆ. ವಚನಕಾರರು ಪ್ರಧಾನ ಧಾರೆಯನ್ನೂ ಹಾಗೆಯೇ ಜಾನಪದ ಧಾರೆಯನ್ನೂ ಸಮಾನವಾಗಿ ನಿರಾಕರಿಸುತ್ತಾರೆ. ಲೇಖಕರ ಈ ಬಗೆಯ ತೀರ್ಮಾನಕ್ಕೆ 'ವಚನ ಸಾಹಿತ್ಯ ಅಂತಾರಾಷ್ಟ್ರೀಯ ಮನ್ನಣೆ, ಪ್ರಚಾರ ಗಳಿಸಿದ್ದೂ ಕಾರಣವಿರಬಹುದು' (ಪುಟ ೬೯). ಆದರೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳು, ರಾಶಿಗಟ್ಟಲೆ ಗ್ರಂಥಗಳ ಪ್ರಕಟಣೆಗಳು ಒಂದು ವಿಚಾರಕ್ಕೆ ಮನ್ನಣೆ ದೊರೆತಿದೆ ಎಂಬುದಕ್ಕೆ ರುಜುವಾತಾಗುವುದಿಲ್ಲ. ವಚನಕಾರರ ವಿವೇಕ ಸಾಮಾಜಿಕ ಬದುಕಿನಲ್ಲಿ ವಾಸ್ತವಗೊಳ್ಳುವವರೆಗೂ ಅದಕ್ಕೆ ಮನ್ನಣೆ ದೊರೆತಿಲ್ಲವೆಂದೇ ನಾವು ಭಾವಿಸಬೇಕಾಗುತ್ತದೆ. ಇಂದು ಸಾಮಾಜಿಕ ಬದುಕಿನಲ್ಲಿ ಲೇಖಕರು ಯಾವ ವಿವೇಕವನ್ನು ವಾಸ್ತವಗೊಳಿಸಲು ಹೋರಾಡುತ್ತಿರುವರೋ ಅಂಥದೇ ಹೋರಾಟದಲ್ಲಿ ವಚನಕಾರರೂ ತೊಡಗಿದ್ದರು,
ಕೊನೆಯದಾಗಿ, ಕನ್ನಡ ಸಂಶೋಧನೆ'ಯ ಇಂದಿನ ಸ್ಥಿತಿಗತಿ ಮುಂದಿನ ಸವಾಲುಗಳ ಕುರಿತಾದ ಅವರ ಸುದೀರ್ಘ ಪ್ರಬಂಧ ಪ್ರತಿಯೊಬ್ಬ ಸಂಶೋಧನಾ ಸಾಹಿತ್ಯ ಪರಂಪರೆ ಪಂಪನ ಕಾಲದಿಂದಲೂ ಮೈಗೂಡಿಸಿಕೊಂಡಿದೆ. ರಾಷ್ಟ್ರೀಯತೆಯ ವಿದ್ಯಾರ್ಥಿಗೂ ಒಂದು ಕೈಪಿಡಿಯಂತಿದೆ. ಒಟ್ಟಿನಲ್ಲಿ ಈ ಕೃತಿ ಇಂದಿನ ಗೊಂದಲಮಯ ಸಾಮಾಜಿಕ ಸಂದರ್ಭದಲ್ಲಿ ನಮ್ಮ ವೈಚಾರಿಕ ದೃಷ್ಟಿಯನ್ನು ಇನ್ನಷ್ಟು ಹರಿತಗೊಳಿಸಬಲ್ಲ. ಸಂಶೋಧಕರಿಗೆ ಮಾರ್ಗದರ್ಶಕವಾಗಬಲ್ಲ ಒಳ್ಳೆಯ ಕೃತಿಯಾಗಿದೆ,
-ಟಿ.ಎನ್. ವಾಸುದೇವಮೂರ್ತಿ
ಕೃಪೆ: ಹೊಸಮನುಷ್ಯ - ಏಪ್ರಿಲ್ 2020
©2024 Book Brahma Private Limited.