`ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು’ಪ್ರೊ.ಎಸ್. ಚಂದ್ರಶೇಖರ್ ಅವರ ಕೃತಿಯಾಗಿದೆ. ಈ ಪುಸ್ತಕದಲ್ಲಿನ ಸಂಶೋಧನಾತ್ಮಕ ವಿಚಾರಗಳು, ನಾಲ್ವಡಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ಪ್ರಸ್ತುತ ಪ್ರಚಲಿತವಿರುವ ವಿಚಾರಗಳಿಗೆ ಇಂಬು ಕೊಡುವಂತೆ ಮತ್ತು ಮತ್ತಷ್ಟು ಮೆರಗು ನೀಡುವಂತೆ ಮಾಡುತ್ತವೆ. ಈ ಪುಸ್ತಕವು ಕನ್ನಡ ಸಾಹಿತ್ಯದ ಮತ್ತು ಇತಿಹಾಸದ ವಿದ್ಯಾರ್ಥಿಗಳಿಗೆ ಒಂದು ಅತ್ಯುತ್ತಮ ಆಕರವಾಗಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿ ಮತ್ತು ಅದರ ಆಸುಪಾಸಿನ ಮೈಸೂರು ದೇಶದ ಚರಿತ್ರೆಯನ್ನು ಈ ಪುಸ್ತಕ ನಿರೂಪಿಸುತ್ತದೆ. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಕುರಿತಾದ ಬರಹ ಎಂದು ಮೊದಲ ನೋಟಕ್ಕೆ ಅನಿಸಿದರೂ ಕೇವಲ ಅವರನ್ನು ಕೇಂದ್ರದಲ್ಲಿ ಇರಿಸಿಕೊಂಡ ಬರಹವಾಗಿಲ್ಲ. ಬ್ರಿಟಿಶರು ಟಿಪ್ಪುವಿನಿಂದ ಮೈಸೂರನ್ನು ತಮ್ಮ ಅಧಿಕಾರ ವ್ಯಾಪ್ತಿಗೆ ಪಡೆದುಕೊಂಡ ಮೇಲೆ ನಡೆದ ಘಟನಾವಳಿಗಳನ್ನು ಆಧರಿಸಿ ಚಾರಿತ್ರಿಕ ಗತಿಶೀಲತೆಯಲ್ಲಿ ಹಲವು ವ್ಯಕ್ತಿಗಳು ನಿರ್ವಹಿಸಿದ ಪಾತ್ರವನ್ನು ಇಲ್ಲಿ ನಿರೂಪಿಸಲಾಗಿದೆ. ಅಂತಹ ವ್ಯಕ್ತಿಗಳಲ್ಲಿ ನಾಲ್ವಡಿಯವರೂ ಒಬ್ಬರು. ಈ ದೃಷ್ಟಿಕೋನದಿಂದ ಲೇಖಕರು ತಮ್ಮ ನಿರೂಪಣೆಗೆ ಒಂದು ಗತಿಯನ್ನು ರೂಪಿಸಿಕೊಂಡಿದ್ದಾರೆ. ಎಲ್ಲದಕ್ಕೂ ನಾಲ್ವಡಿಯವರೇ ಕಾರಣವೆಂದಾಗಲೀ ಇಲ್ಲವೇ ಅವರು ಕೇವಲ ಸಂದರ್ಭದ ಶಿಶುವಾಗಿದ್ದರೂ ಎಂದಾಗಲೀ ಎರಡೂ ಅತಿಗಳಿಗೆ ಹೋಗದೆ ತಮ್ಮ ನಿರೂಪಣೆಯನ್ನು ಕಟ್ಟಿದ್ದಾರೆ.
©2025 Book Brahma Private Limited.