‘ಕನ್ನಡ ಶಕ್ತಿಯ ವಿರಾಟ್ ಸ್ವರೂಪ’ ರಾ.ನಂ. ಚಂದ್ರಶೇಖರ್ ರವರ ಕೃತಿಯಾಗಿದೆ. ಎಸ್. ಜಿ. ಸಿದ್ಧರಾಮಯ್ಯನವರ ಬೆನ್ನುಡಿ ಬರಹವಿದೆ: ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಪುಸ್ತಕೋತ್ಸವವನ್ನಾಗಿ - ಆಚರಿಸುತ್ತಿರುವ ಸಪ್ನ ಬುಕ್ ಹೌಸ್‌ನ ರಾಜ್ಯೋತ್ಸವ ಸಂಭ್ರಮಾಚರಣೆ ಅರ್ಥಪೂರ್ಣವಾದುದು. ಇದು ಅರಿವಿನ ರಾಜ್ಯೋತ್ಸವ; ನಿಜದ ನೆಲೆಯಲ್ಲಿ ಕನ್ನಡ ಪ್ರಜ್ಞೆಯ ವಿಸ್ತರಣೆಯ ಉತ್ಸವ ಆಯಾ ವರ್ಷದ ರಾಜ್ಯೋತ್ಸವ ಸಂಖ್ಯೆಗನುಗುಣವಾಗಿ ಪುಸ್ತಕಗಳು ಪ್ರಕಟವಾಗುತ್ತವೆ. ಎಲ್ಲ ಬಗೆಯ ಎಲ್ಲ ಪ್ರಕಾರಗಳ ಲೇಖಕರೂ ಇಲ್ಲಿ ಅವಕಾಶ ಪಡೆಯುತ್ತಾರೆ. ಹಿರಿಯರು ಕಿರಿಯರು ಎಲ್ಲರನ್ನೂ ಒಳಗೊಳ್ಳುವ ಈ ಕನ್ನಡ 'ಪುಸ್ತಕ ರಾಜ್ಯೋತ್ಸವ' ನಿಜವಾದ ಅರ್ಥದಲ್ಲಿ ಕನ್ನಡ ಸಂಸ್ಕೃತಿಯ ಉತ್ಸವ. ಏಕೆಂದರೆ ಬದುಕಿನ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಸೃಜನಶೀಲ ಹಾಗೂ ಸೃಜನೇತರ ಪ್ರಕಾರಗಳನ್ನೊಳಗೊಂಡ ಎಲ್ಲಾ ಜ್ಞಾನಶಾಖೆಗಳ ಕೃತಿಗಳೂ ಈ ಮಾಲಿಕೆಯಲ್ಲಿ ಸೇರುತ್ತವೆ. ಸಂಖ್ಯಾ ಪ್ರಮಾಣದ ಜೊತೆಗೆ ಗುಣಗ್ರಾಹಿತ್ವಕ್ಕೆ ನೆಲೆ ಬೆಲೆ ಕೊಟ್ಟಂತೆ ಇಲ್ಲಿನ ಆಯ್ಕೆ ನಡೆಯುತ್ತದೆ. ಈ ದೃಷ್ಟಿಯಿಂದಲೂ ಇದು ಸ್ವಾಗತಾರ್ಹವಾದ ಹಾಗೂ ಸಾರ್ಥಕವಾದ ಕನ್ನಡ ಸೇವೆ. ಸುರೇಶ್ ಷಾ ಅವರು ನಮ್ಮ ರಾಜ್ಯಕ್ಕೆ ಬಂದು ಪುಸ್ತಕೋದ್ಯಮಿಯಾಗಿ ಬೆಳೆದರು. ಆದರೆ ಅದನ್ನು ಕೇವಲ ಒಂದು ಉದ್ಯಮವಾಗಿ ಮಾತ್ರ ಮಾಡಿಕೊಳ್ಳದೆ ಇಡೀ ನಾಡಿನ ಪರಂಪರೆ ಸಂಸ್ಕೃತಿ ಭಾಷೆ ಸಾಹಿತ್ಯ ಲೋಕದ ಮುಖ್ಯವಾಹಿನಿಗೆ ಪ್ರತಿಸ್ಪಂದಿಸಿದಂತೆ ಈ ಉದ್ಯಮಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಿದ್ದಾರೆ. ಇದು ಕನ್ನಡದ ಹೆಮ್ಮೆಯ ಪ್ರಕಾಶನ ಸಂಸ್ಥೆ ಎಂದು ಹೇಳಲು ಹರ್ಷವಾಗಿದೆ.
©2025 Book Brahma Private Limited.