೧೯೯೦ರ ದಶಕದಲ್ಲಿ ಜ್ಯಾರಿಗೆ ಬಂದ ಜಾಗತೀಕರಣವು ವಿಶ್ವದ ರೀತಿ ನೀತಿಗಳನ್ನು ಆಮೂಲಾಗ್ರವಾಗಿ ಬದಲಾಯಿಸಿದೆ. ಭಾರತದಲ್ಲಿ ಅಂತರರಾಷ್ಟ್ರೀಕರಣ ಪ್ರಕ್ರಿಯೆಯು ಗ್ಯಾಟ್ (General Agreement of Trade in Services ಹಾಗೂ ಡಬ್ಲ್ಯುಟಿಒ (World Trade Organizations) ಒಪ್ಪಂದದೊಂದಿಗೆ ಆರಂಭವಾಯಿತು. ಎಪ್ರಿಲ್ ೧, ೨೦೦೫ ರಂದು ಜ್ಯಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ, ೧೦ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣವನ್ನು Educational Services as sector of industry under GATS ಎಂದು ಘೋಷಿಸಲಾಯಿತು. ಪರಿಣಾಮವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಯಿತು. ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಜಾರಿಗೆ ಬಂದುವು. ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಆರಂಭಗೊಂಡವು. ವಿದೇಶೀ ವಿಶ್ವವಿದ್ಯಾಲಯಗಳು ತಮ್ಮ ಕೇಂದ್ರಗಳನ್ನು ಭಾರತದಲ್ಲಿ ತೆರೆದುವು. ಇದರೊಂದಿಗೆ ಶಿಕ್ಷಣವೂ ಹಣ ಮಾಡುವ ಉದ್ಯಮವಾಯಿತು. ವಿಶ್ವವಿದ್ಯಾಲಯಗಳು ಇವತ್ತು ಒಂದು ರಾಜ್ಯದ ಅಥವಾ ದೇಶದ ಗಡಿಗೆ ಸೀಮಿತವಾಗಿ ಉಳಿಯದೆ ಸೀಮಾತೀತವಾಗುತ್ತಿವೆ. ಶಿಕ್ಷಣದ ಈ ಅಂತಾರಾಷ್ಟ್ರೀಕರಣದ ಪ್ರಕ್ರಿಯೆಯು ಸ್ಥಳೀಯ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವಿಶಿಷ್ಟತೆಗಳನೆಲ್ಲಾ ಮರೆಸಿ, ವಿಶ್ವದಾದ್ಯಂತ ಏಕರೂಪದ ವ್ಯವಸ್ಥೆಯೊಂದನ್ನು ಆಗು ಮಾಡುತ್ತಿದೆ. ಅಂತರರಾಷ್ಟ್ರೀಯ ಪ್ರಜೆಗಳು ಇವತ್ತು ನಿರ್ಮಾಣವಾಗುತ್ತಿದ್ದಾರೆ. ಇದರಿಂದಾಗಿ ನಮ್ಮ ರಾಷ್ಟ್ರೀಯ ಪರಿಕಲ್ಪನೆಗಳೂ ಬದಲಾಗುತ್ತಿವೆ. ಇಂಥ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ಮುಖ್ಯವಾಗಿ ಭಾಷೆ ಮತ್ತು ಸಾಹಿತ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ನಾವು ನಮ್ಮ ಜವಾಬ್ದಾರಿಗಳ ಬಗ್ಗೆ ಹೊಸದಾಗಿ ಯೋಚಿಸಬೇಕಾಗಿದೆ. ಬದಲಾಗುತ್ತಿರುವ ಜಗತ್ತಿನ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಆಲೋಚನೆ ಬರುವಂತೆ ನಾವೀಗ ಮಾಡಬೇಕು, ಭಾಷೆಯ ಮೇಲೆ ಹಿಡಿತ ಬರುವಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸಾಹಿತ್ಯದ ಪಠ್ಯಗಳನ್ನು, ವಿಮರ್ಶಾತ್ಮಕ ಮತ್ತು ಕ್ರಿಯಾತ್ಮಕ ರೀತಿಯಲ್ಲಿ ಹೇಳಿಕೊಡಬೇಕು. ಈ ಬಗೆಯ ಬೆಳವಣಿಗೆಗಳ ಜೊತೆಗೇ ಬೆಳೆದು ಬಂದ ಖಾಸಗೀಕರಣವು ಈಗಣ ಸಮಾಜವನ್ನು ಸ್ಪರ್ಧಾತ್ಮಕವಾಗಿ ಬೆಳೆಸಿದೆ. ಹಣ ಮಾಡುವುದನ್ನೇ ಗುರಿಯಾಗಿಸಿಕೊಂಡ ಬಹುತೇಕ ಜನರು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾದ ಚಿಂತನೆಗಳನ್ನು ‘ಅನುತ್ಪಾದಕ’ ಎಂದು ಭಾವಿಸಿ, ಅದರಿಂದ ದೂರ ಸರಿಯುತ್ತಿದ್ದಾರೆ. ಮಾನವ ಸಂಬಂಧಗಳು ಬಹಳ ಯಾಂತ್ರಿವಾಗಿವೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಈ ನಡುವೆ, ಭಾಷೆಗಳ ಕುರಿತು ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು ಎಲ್ಲರೂ ಮರೆಯುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಮಾನವಿಕಗಳು ಕಳೆಗುಂದುತ್ತಿವೆ. ಇದೀಗ ಕೇಂದ್ರ ಸರಕಾರವು ಹೊಸ ಶಿಕ್ಷಣ ನೀತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತೀಯ ಭಾಷೆಗಳ ಬಗೆಗೆ ಮಹತ್ವದ ಮಾತುಗಳನ್ನು ಹೇಳಲಾಗಿದೆಯಾದರೂ ಸರಕಾರಗಳು ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಳುವ ಶಕ್ತಿ ಶಾಲೀ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ‘ಇಂಗ್ಲಿಷ್ ಭಾಷೆ ಕಲಿತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು‘ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಜಗತ್ತಿನ ಅನೇಕ ದೇಶಗಳು ಈ ಬೆಳವಣಿಗೆಯನ್ನು ಒಪ್ಪಿಕೊಂಡಿವೆ. ಹೊಸ ತಲೆಮಾರಿನ ಜನರು ಇಂಗ್ಲಿಷನ್ನು ಅನ್ನದ ಭಾಷೆಯಾಗಿ ಗ್ರಹಿಸಿದ್ದಾರೆ. ಇದರಿಂದಾಗುತ್ತಿರುವ ಬಹಳ ದೊಡ್ಡ ಅಪಾಯವೆಂದರೆ, ಕನ್ನಡದಂಥ ಅತ್ಯಂತ ಶ್ರೀಮಂತ ಇತಿಹಾಸ ಇರುವ ಭಾಷೆಯೂ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿರುವುದು. ತೀವ್ರತರವಾಗಿರುವ ಈ ಸಮಸ್ಯೆಯ ಬಗ್ಗೆ ಗಂಭೀರವಾದ ಚರ್ಚೆಗಳೂ ನಡೆಯುತ್ತಿಲ್ಲ. ಯೂನೆಸ್ಕೋವು ೨೦೧೦ರಲ್ಲಿ ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ ದಲ್ಲಿ ಭಾರತದಲ್ಲಿನ ೧೭೨ ಭಾಷೆಗಳು ಅಪಾಯದ ಅಂಚಿನಲ್ಲಿವೆ ಎಂದು ಹೇಳಲಾಗಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾಷೆ ಮತ್ತು ಸಾಹಿತ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ಜವಾಬ್ದಾರಿಗಳ ಬಗ್ಗೆ ಹೊಸದಾಗಿ ಯೋಚಿಸಬೇಕಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರು ಕೆಲವು ಗೈಡ್ ಗಳನ್ನು ಓದಿದರೆ ಸಾಕಾಗದು. ಬದಲು ನಮ್ಮ ಒಟ್ಟೂ ಸಮಾಜವನ್ನು ಆಳವಾಗಿ ಗ್ರಹಿಸುವ ಕಡೆಗೆ ಹೆಜ್ಜೆ ಇಡಬೇಕಾಗುತ್ತದೆ. ಸಾಹಿತ್ಯದ ಪಠ್ಯಗಳನ್ನು ನಾವು ಹೊಸದಾಗಿ ಗ್ರಹಿಸಲು ಸಿದ್ಧರಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪುಸ್ತಕದ ೨೫ ಲೇಖನಗಳು ಓದುಗರಿಗೆ ಹೊಸ ಬಗೆಯ ಮಾಹಿತಿಗಳನ್ನು ನೀಡುತ್ತವೆ.
©2024 Book Brahma Private Limited.